ಸಂಪತ್ತಿನ ಒಡೆತನಕ್ಕೆ ಹಿಂದುಜಾ ಸೋದರರ ಜಗಳ

hinduja_brothers
Published on

ನವದೆಹಲಿ: ಜಗತ್ತಿನ ಅತಿ ಶ್ರೀಮಂತ ಕುಟುಂಬಗಳಲ್ಲಿ ಒಂದಾದ ಹಿಂದುಜಾ ಕುಟುಂಬದಲ್ಲಿ ಸಂಪತ್ತಿನ ಒಡೆತನಕ್ಕಾಗಿ ಜಗಳ ಶುರುವಾಗಿದೆ. 2014ರಲ್ಲಿ ನಾಲ್ವರು ಸೋದರರು ಸಹಿ ಹಾಕಿದ್ದ ಒಪ್ಪಂದ ಪತ್ರವೊಂದು ಕಾನೂನು ಸಮರದ ಕೇಂದ್ರ ಬಿಂದುವಾಗಿದೆ. ಕುಟುಂಬದ 11.20 ಬಿಲಿಯನ್ ಡಾಲರ್ (84,717 ಕೋಟಿ ರೂಪಾಯಿ) ಆಸ್ತಿಯ ಭವಿಷ್ಯದ ಬಗ್ಗೆ ತಕರಾರು ಎಲ್ಲಿಗೆ ಮುಟ್ಟುತ್ತದೆ ಎಂಬ ಕುತೂಹಲ ಮೂಡಿಸಿದೆ.

ನಾಲ್ವರು ಸೋದರಿಗೆ ಆಸ್ತಿಯಲ್ಲಿ ಪಾಲಿರುವ ಕಾರಣ ಪ್ರತಿಯೊಬ್ಬ ಸೋದರರನ್ನೂ ಕಾರ್ಯ ನಿರ್ವಾಹಕರಾಗಿ (ಎಕ್ಸಿಕ್ಯುಟರ್ಸ್) ನೇಮಿಸಬೇಕೆಂಬುದು ಪತ್ರದಲ್ಲಿರುವ ಅಂಶವಾಗಿದೆ. ಆದರೆ, ಕುಟುಂಬದ ಹಿರಿಯ ಸದಸ್ಯ ಶ್ರೀಚಂದ್ ಹಿಂದುಜಾ ಅವರ ಬಳಿಯಲ್ಲೇ ಸಮಗ್ರ ಆಸ್ತಿ ಇದೆ. ಶ್ರೀಚಂದ್ ಮತ್ತು ಅವರ ಪುತ್ರಿ ವಿನೂ, 2014ರ ಪತ್ರಕ್ಕೆ ಯಾವುದೇ ಬೆಲೆಯಿಲ್ಲ ಎಂದು ಘೊಷಿಸಬೇಕೆಂದು ಹೇಳಿರುವುದರಿಂದ ಕಾನೂನು ವಿವಾದ ಸೃಷ್ಟಿಯಾಗಿದೆ.

ಅತಿ ಶ್ರೀಮಂತ ಕುಟುಂಬ ಹಿಂದುಜಾ ಕುಟುಂಬ ಜಗತ್ತಿನ ಅತಿ ಶ್ರೀಮಂತ ಕುಟುಂಬಗಳಲ್ಲಿ ಒಂದು. ಒಂದು ಶತಮಾನಕ್ಕೂ ಹಳೆಯದಾದ ಹಿಂದುಜಾ ಸಮೂಹದ ಕೈಗಾರಿಕೆಗಳು ಅಪಾರ ಆಸ್ತಿ ಗಳಿಸಿವೆ. ಈ ಸಮೂಹ ಈಗ 40ಕ್ಕೂ ಹೆಚ್ಚು ದೇಶಗಳಲ್ಲಿ ಹಣಕಾಸು, ಮಾಧ್ಯಮ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದೆ. ಹಿಂದುಜಾ ಸೋದರರ ಹೆಸರು ಬೊಫೋರ್ಸ್ ಹಗರಣದಲ್ಲಿ ಕೇಳಿಬಂದಿತ್ತು.

ಲಂಡನ್​ನ ನ್ಯಾಯಾಧೀಶರೊಬ್ಬರು ಮಂಗಳವಾರ ನೀಡಿದ ಒಂದು ತೀರ್ಪು ಬ್ರಿಟನ್​ನಲ್ಲೆ ನೆಲೆಯಿರುವ ಕುಟುಂಬದ ವಿವಾದವನ್ನು ಬೆಳಕಿಗೆ ತಂದಿದೆ. ಇತರ ಮೂವರು ಸೋದರರಾದ ಗೋಪಿಚಂದ್, ಪ್ರಕಾಶ್ ಮತ್ತು ಅಶೋಕ್, ಹಿಂದುಜಾ ಬ್ಯಾಂಕ್ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆಂದು ನ್ಯಾಯಾಧೀಶರು ಹೇಳಿದ್ದಾರೆ. ಹಿಂದುಜಾ ಬ್ಯಾಂಕ್ ಸಂಪೂರ್ಣವಾಗಿ ಶ್ರೀಚಂದ್ ಹೆಸರಿನಲ್ಲಿದೆ. ಈ ತಕರಾರಿನ ಹಿನ್ನೆಲೆಯಲ್ಲಿ ಪತ್ರಕ್ಕೆ ಯಾವುದೇ ಕಾನೂನು ಸಿಂಧುತ್ವವಿಲ್ಲ ಹಾಗೂ ಅದನ್ನು ಉಯಿಲು ಪತ್ರದಂತೆ ಬಳಸಲು ಸಾಧ್ಯವಿಲ್ಲ ಎಂದು ಘೊಷಿಸುವಂತೆ ಶ್ರೀಚಂದ್ ಮತ್ತು ವಿನೂ ಕೋರಿರುವುದಾಗಿ ಜಡ್ಜ್ ಹೇಳಿದ್ದಾರೆ.

ನಾಲ್ಕೂ ಸೋದರರು ಸಹಿ ಹಾಕಿದ ಪತ್ರ ತನ್ನ ಆಶಯಗಳನ್ನು ಪ್ರತಿಬಿಂಬಿಸುವುದಿಲ್ಲ. ಆದ್ದರಿಂದ ಕುಟುಂಬದ ಆಸ್ತಿಯನ್ನು ಪ್ರತ್ಯೇಕಿಸಬೇಕೆಂದು ಶ್ರೀಚಂದ್ 2016ರಲ್ಲೇ ಕೋರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net