

ನವದೆಹಲಿ: ಜಿಎಸ್ಟಿ ಕೌನ್ಸಿಲ್ ಸಭೆಯನ್ನು ಮುಂದಿನ ತಿಂಗಳಿಗೆ ಮುಂದೂಡಲಾಗಿದೆ. ಸಂಸತ್ ಅಧಿವೇಶನ ನಡೆಯುವ ಅವಧಿಯಲ್ಲೇ ಜಿಎಸ್ಟಿ ಕೌನ್ಸಿಲ್ ಸಭೆ ನಡೆಸುವುದು ಸಾಧ್ಯವಾಗದು ಎನ್ನುವ ಕಾರಣಕ್ಕೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜಿಎಸ್ಟಿ ಕೌನ್ಸಿಲ್ ಸಭೆ ಸೆಪ್ಟೆಂಬರ್ 19ಕ್ಕೆ ನಿಗದಿಯಾಗಿತ್ತು. ಇದು 42ನೇ ಮೀಟಿಂಗ್ ಆಗಿದ್ದು, ಅಕ್ಟೋಬರ್ 5ರಂದು ನಡೆಯಲಿದೆ. ಸಭೆ ಮುಂದೂಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕಳೆದ ತಿಂಗಳೇ ತೆಗೆದುಕೊಂಡಿತ್ತು. ಕೌನ್ಸಿಲ್ನ 41ನೇ ಮೀಟಿಂಗ್ ಆಗಸ್ಟ್ 27ಕ್ಕೂ 42ನೇ ಸಭೆಯನ್ನು ಸೆಪ್ಟೆಂಬರ್ 19ಕ್ಕೆ ಮುಂದೂಡಿ ನಿಶ್ಚಯಿಸಲಾಗಿತ್ತು. ಆದರೆ, ಈ ಮಧ್ಯೆ ಸಂಸತ್ ಅಧಿವೇಶನ ನಿಗದಿಯಾದ ಕಾರಣ ಮತ್ತೆ ಮುಂದೂಡಿಕೆ ಆಗಿದೆ.
ಜಿಎಸ್ಟಿ ಆದಾಯ ಸಂಗ್ರಹದಲ್ಲಿ 2.35 ಲಕ್ಷ ಕೋಟಿ ರೂಪಾಯಿ ಕೊರತೆ ಉಂಟಾದ ಕಾರಣ ನಷ್ಟಭರ್ತಿಗೆ ಸಾಲದ ರೂಪದ ನೆರವಿನ ಪರಿಹಾರೋಪಾಯವನ್ನು ಎರಡು ರೀತಿಯಿಂದ ರಾಜ್ಯಗಳ ಮುಂದೆ ಕೇಂದ್ರ ಸರ್ಕಾರ ಇರಿಸಿತ್ತು. ಇದಕ್ಕೆ ಪಶ್ಚಿಮ ಬಂಗಾಳ, ಕೇರಳ, ದೆಹಲಿ, ತೆಲಂಗಾಣ, ಛತ್ತೀಸ್ಗಢ, ತಮಿಳುನಾಡುಗಳು ವಿರೋಧ ವ್ಯಕ್ತಪಡಿಸಿದ್ದವು. ಗುಜರಾತ್, ಬಿಹಾರ, ಮಧ್ಯಪ್ರದೇಶ, ಕರ್ನಾಟಕ, ತ್ರಿಪುರಾ ಸೇರಿ ಏಳು ರಾಜ್ಯಗಳು 97,000 ಕೋಟಿ ರೂಪಾಯಿ ಸಾಲ ಪಡೆಯಲು ನಿರ್ಧರಿಸಿವೆ. ಈ ಬೆಳವಣಿಗೆಯ ಕಾರಣ 42ನೇ ಮೀಟಿಂಗ್ ಮಹತ್ವ ಪಡೆದುಕೊಂಡಿದೆ. (ಏಜೆನ್ಸೀಸ್)