ಚಿನ್ನದ ಬೆಲೆ ಸಾರ್ವಕಾಲಿಕ ಏರಿಕೆ, ಬೆಳ್ಳಿಯದ್ದೂ ಅದೇ ಕಥೆ...

Gold Rate 5 dec 19
Published on

ನವದೆಹಲಿ: ಚಿನ್ನದ ದರ ಗಗನಮುಖಿಯಾಗಿ ಸಾಗುತ್ತಿದ್ದು, ಸೋಮವಾರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ಎಂಸಿಎಕ್ಸ್​ನ ಆರಂಭಿಕ ವಹಿವಾಟಿನಲ್ಲಿ ಚಿನ್ನದ ದರ ಸೋಮವಾರ ಬೆಳಗ್ಗೆ 333 ರೂಪಾಯಿ ಏರಿದ್ದು, 10 ಗ್ರಾಂ 48,289 ರೂಪಾಯಿ ಆಗಿದೆ. ಬೆಳ್ಳಿ ದರವೂ ಪ್ರತಿ ಕಿಲೋಗೆ 554 ರೂಪಾಯಿ ಏರಿಕೆಯಾಗಿದ್ದು 49,245 ರೂಪಾಯಿ ಆಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಚಿನ್ನದ ಬೆಲೆ ಶೇಕಡ 25 ಏರಿಕೆಯಾಗಿದ್ದರೆ, ಈ ವರ್ಷ ಕೇವಲ ಆರೇ ತಿಂಗಳಲ್ಲಿ ಶೇಕಡ 23 ಏರಿಕೆ ದಾಖಲಿಸಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ದಾಖಲಿಸಿದ ಬೆನ್ನಿಗೆ ಭಾರತೀಯ ಮಾರುಕಟ್ಟೆಯಲ್ಲೂ ಏರಿಕೆ ಉಂಟಾಗಿದೆ. ಕರೊನಾ ವೈರಸ್ ಸೋಂಕು ಜಗತ್ತನ್ನು ವ್ಯಾಪಿಸಿದ ಬಳಿಕ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಒಂದು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಚಿನ್ನವೇ ಸುರಕ್ಷಿತ ಹೂಡಿಕೆ ಎಂಬ ಭಾವನೆ ಹೂಡಿಕೆದಾರರಲ್ಲಿ ಮೂಡಿದ್ದೇ ಈ ಏರಿಕೆ ಕಾರಣ ಎಂದು ಪರಿಣತರು ವಿಶ್ಲೇಷಿಸುತ್ತಿದ್ದಾರೆ.

ಗುಡ್​ ರಿಟರ್ನ್ಸ್​ ಪ್ರಕಾರ, ಭಾರತದಲ್ಲಿ 24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 4,787 ರೂಪಾಯಿಗೆ ಮಾರಾಟವಾಗುತ್ತಿದೆ. 24 ಕ್ಯಾರೆಟ್ ಚಿನ್ನದ ಬೆಲೆ ದೆಹಲಿಯಲ್ಲಿ ಪ್ರತಿ 10 ಗ್ರಾಂಗೆ 20 ರೂಪಾಯಿ ಏರಿಕೆಯಾಗಿ 46,780 ರೂಪಾಯಿ ಆದರೆ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 10 ರೂಪಾಯಿ ಏರಿಕೆಯಾಗಿ 47,970 ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 10 ರೂಪಾಯಿ ಏರಿಕೆಯಾಗಿ 45, 380 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನ 10 ಗ್ರಾಂಗೂ 10 ರೂಪಾಯಿ ಏರಿಕೆಯಾಗಿ 49,500 ರೂಪಾಯಿ ಆಗಿದೆ.

ಇದೇ ರೀತಿ ಬೆಳ್ಳಿ ದರ ದೆಹಲಿಯಲ್ಲಿ 1 ಕಿಲೋಗೆ 48,598 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ದರ ಪ್ರತಿ ಕಿಲೋಗೆ 10 ರೂಪಾಯಿ ಏರಿಕೆಯಾಗಿ 48,680 ರೂಪಾಯಿ ಆಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net