ಡ್ರ್ಯಾಗನ್ ಹಣ್ಣಿನ ಕೃಷಿಯತ್ತ ರೈತರ ಚಿತ್ತ

ವಿಜಯವಾಣಿ (3)
Published on

ಸಾಂಪ್ರದಾಯಿಕತೆಗೆ ಜೋತುಬಿದ್ದರೆ ಕೃಷಿ ಕಷ್ಟ ಎಂಬುದನ್ನು ಅರಿತುಕೊಂಡಿರುವ ರೈತರು ವಾಣಿಜ್ಯ ಬೆಳೆಗಳತ್ತ ಗಮನಹರಿಸುತ್ತಿದ್ದು, ವರ್ಷ ಪೂರ್ತಿ ಬೇಡಿಕೆ ಇರುವ, ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ನೀಡುವ ಕೃಷಿಯತ್ತ ಗಮನ ಹರಿಸುತ್ತಿದ್ದಾರೆ. ಇದೀಗ ಡ್ರ್ಯಾಗನ್​ ​ಫ್ರೂಟ್​ಗೆ ವ್ಯಾಪಕ ಬೇಡಿಕೆ ಇದ್ದು, ಇದು ಜಗತ್ತಿನಾದ್ಯಂತ ಮಾರುಕಟ್ಟೆ ಹೊಂದಿದೆ. ರೈತರು ಆ ಬೆಳೆಯತ್ತ ಆಕರ್ಷಿತರಾಗುತ್ತಿದ್ದು, ಉಷ್ಣವಲಯದ ಬೆಳೆಯಾದ ಡ್ರ್ಯಾಗನ್​  ಫ್ರೂಟನ್ನು ಕರಾವಳಿ ಭಾಗದಲ್ಲಿ ಬೆಳೆಯಲು ಮುಂದಾಗಿರುವುದು ವಿಶೇಷ.

| ಹರೀಶ್ ಬೇಲೂರು, ಬೆಂಗಳೂರು

ಸಾಂಪ್ರದಾಯಿಕ ಬೆಳೆಗಳಾದ ಭತ್ತ ಹಾಗೂ ಅಡಕೆ ಕೃಷಿಯತ್ತಲೇ ಗಿರಕಿ ಹೊಡೆಯುತ್ತಿದ್ದ ಕರಾವಳಿ ಹಾಗೂ ನೀರಾವರಿ ಪ್ರದೇಶದ ರೈತರು ಇದೀಗ ಹೆಚ್ಚು ಲಾಭದಾಯಕ ಎನಿಸಿಕೊಂಡಿರುವ ಹಣ್ಣಿನ ಬೆಳೆಗಳತ್ತ ಮುಖಮಾಡಿದ್ದಾರೆ. ಅಡಕೆ ಮಾರುಕಟ್ಟೆ ಅನಿಶ್ಚಿತತೆ, ಹೆಚ್ಚುತ್ತಿರುವ ವೆಚ್ಚ ಹಾಗೂ ಕಾರ್ವಿುಕರ ಸಮಸ್ಯೆ ಇವರನ್ನು ಡ್ರ್ಯಾಗನ್​  ಹಣ್ಣಿನ ಬೆಳೆಯತ್ತ ಸೆಳೆಯುತ್ತಿದೆ.

ಬಹುಕಾಲದಿಂದ ಈ ಪ್ರದೇಶದಲ್ಲಿ ಅಡಕೆ ಪ್ರಬಲ ವಾಣಿಜ್ಯ ಬೆಳೆ. ಆದರೆ, ಬೆಲೆ ಏರಿಳಿತ, ಗುಟ್ಕಾ, ತಂಬಾಕಿನ ನಿಷೇಧ ಸವಾಲುಗಳ ನಡುವೆ ಪರ್ಯಾಯ ಬೆಳೆಗಳತ್ತ ರೈತರು ಚಿತ್ತ ಹರಿಸಿದ್ದಾರೆ. ಇದೀಗ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವ ಡ್ರ್ಯಾಗನ್​ ಹಣ್ಣು, ಕರಾವಳಿ ಪ್ರದೇಶಗಳಲ್ಲಿ ಪರ್ಯಾಯ ವಾಣಿಜ್ಯ ಬೆಳೆಯಾಗಿ ಹೊರಹೊಮ್ಮುತ್ತಿದೆ. ಆದ್ದರಿಂದ, ಹೆಚ್ಚಿನ ರೈತರು ಅಡಕೆ ಪರ್ಯಾಯವಾಗಿ ಡ್ರಾಗನ್ ಫ್ರೂಟ್ ಕೃಷಿ ಮಾಡುತ್ತಿದ್ದಾರೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಈ ಪ್ರದೇಶದಲ್ಲಿ ಭತ್ತದಂತಹ ಸಾಂಪ್ರದಾಯಿಕ ಬೆಳೆ ಕ್ಷೀಣಿಸುತ್ತಿದೆ. ಆದರೆ, ದಾವಣಗೆರೆ, ಕೋಲಾರ, ಚಿತ್ರದುರ್ಗ ಮಾತ್ರವಲ್ಲದೆ ಎತ್ತಿನಹೊಳೆ ನೀರಾವರಿ ಯೋಜನೆಗೆ ಒಳಪಡುವ ಬೆಂ.ಗ್ರಾಮಾಂತರ ಕೋಲಾರ ಮತ್ತು ಚಿಕ್ಕಬಳ್ಳಾಪುರ ರೈತರು ಅಡಕೆ ಕೃಷಿಯತ್ತ ಚಿತ್ತ ಹರಿಸುತ್ತಿರುವುದು ಗಮನಾರ್ಹ.

ಕರಾವಳಿ ರೈತರಿಗೆ ಪರ್ಯಾಯ ಕೃಷಿ ಅನ್ವೇಷಣೆ ಹೊಸದಲ್ಲ. ಹಿಂದೊಮ್ಮೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಸ್ಥಾಪನೆ ಉಡುಪಿಯಿಂದ ಬಂಟ್ವಾಳದವರೆಗೆ ಕಬ್ಬು ಕೃಷಿ ಆರಂಭಿಸಲು ಕಾರಣವಾಗಿತ್ತು. ಸರ್ಕಾರದ ಪ್ರೋತ್ಸಾಹದಿಂದ ರೇಷ್ಮೆ ಕೃಷಿ ಕೂಡ ಅಲ್ಪಾವಧಿಗೆ ಪ್ರವರ್ಧಮಾನಕ್ಕೆ ಬಂದಿತು. ದ್ವಿತೀಯ ಬೆಳೆಯಾಗಿ ಕಾಫಿ, ವೆನಿಲ್ಲಾ, ಕೋಕೋ ಜನಪ್ರಿಯತೆ ಕಂಡುಕೊಂಡವು. ಕೆಲವರು ಹೂವಿನ ಕೃಷಿಯನ್ನೂ ಪ್ರಯೋಗಿಸಿದರು. ಇದೀಗ ಉಷ್ಣವಲಯದ ಹಣ್ಣುಗಳಾದ ಡ್ರ್ಯಾಗನ್​, ರಂಬುಟಾನ್ ಮತ್ತು ಮ್ಯಾಂಗೋಸ್ಟೀನ್ ಈ ಪ್ರದೇಶದಲ್ಲಿ ಯಶಸ್ವಿಯಾಗಿ ಬೇರೂರಿದೆ. ಅಲ್ಲದೆ, ಉಡುಪಿ-ಕಾಸರಗೋಡು ಟ್ರಾನ್ಸ್​ಮಿಷನ್ ಲೈನ್ ಬಳಕೆಯಾಗದ ಕೃಷಿ ಭೂಮಿಗೆ ಹೊಸ ಅವಕಾಶ ಜತೆಗೆ ಕರಾವಳಿ ಪ್ರದೇಶದ ಡ್ರ್ಯಾಗನ್​ ಫ್ರೂಟ್ ಕ್ರಾಂತಿ ಇಲ್ಲಿನ ಕೃಷಿ ಭವಿಷ್ಯವನ್ನು ಮರು ವ್ಯಾಖ್ಯಾನಿಸಬಹುದು. ರೈತರು ಕೇವಲ ಬೆಳೆ ಬದಲಾಯಿಸುವ ಜತೆಗೆ ಕರಾವಳಿ ಕರ್ನಾಟಕದಲ್ಲಿ ಹೊಸ ಹಾದಿ ಸೃಷ್ಟಿಸುತ್ತಿದ್ದಾರೆ.

ಹೆಚ್ಚುತ್ತಿರುವ ಬೇಡಿಕೆ

ಮಾರುಕಟ್ಟೆಯಲ್ಲಿ ಪ್ರತಿ ಡ್ರ್ಯಾಗನ್ ಹಣ್ಣಿಗೆ 80-100 ರೂ.ದರ ಇದೆ. ಹೆಚ್ಚಿನ ರೈತರು ಈ ಬೆಳೆಗೆ ಬದಲಾಗುತ್ತಿದ್ದಂತೆ ರಫ್ತು ಮತ್ತು ಆಹಾರ ಸಂಸ್ಕರಣಾ ಘಟಕಗಳಿಗೆ ಉನ್ನತ ದರ್ಜೆಯ ಹಣ್ಣಿಗೆ ಬೇಡಿಕೆ ಬರಲಾರಂಭಿಸಿದೆ. ಇದು ಆದಾಯ ತರುವ ಬೆಳೆಯಾಗಿದೆ. ದಕ್ಷಿಣ ಕನ್ನಡ ಸೇರಿ ಕರಾವಳಿಯ ಜಿಲ್ಲೆಯ ರೈತರು ಆರ್ಥಿಕ ಸದೃಢರಾಗುತ್ತಿದ್ದಾರೆ. ಡ್ರ್ಯಾಗನ್ ಹಣ್ಣಿನ ಕೃಷಿ ವೆಚ್ಚವೂ ಕಡಿಮೆ ಇರಲಿದೆ. ಆರಂಭಿಕ ಸಿದ್ಧತಾ ವೆಚ್ಚ ಹೆಚ್ಚಾಗಿದ್ದರೂ ಬೇಗ ಫಲ ನೀಡಲು ಪ್ರಾರಂಭಿಸುತ್ತದೆ. ಇದರಿಂದಾಗಿ ಕಡಿಮೆ ಅವಧಿಯಲ್ಲಿ ದುಪ್ಪಟ್ಟು ಆದಾಯ ತರಲಿದೆ. ಮಾರುಕಟ್ಟೆಯಲ್ಲಿ ಸಾವಯವ ಡ್ರ್ಯಾಗನ್ ಹಣ್ಣಿನ ಬೇಡಿಕೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

  • ಒಮ್ಮೆ ಡ್ರ್ಯಾಗನ್ ಹಣ್ಣಿನ ಕೃಷಿ ಮಾಡಿದರೆ 25 ವರ್ಷದವರೆಗೆ ಆದಾಯ ಬರುತ್ತದೆ
  • ಡ್ರ್ಯಾಗನ್ ಕೃಷಿಯಲ್ಲಿ ಸಾವಯವ ಬೇಸಾಯ ಪದ್ಧತಿ ಅನುಸರಿಸುವ ಜತೆಗೆ ನೀರಾವರಿ ವ್ಯವಸ್ಥೆ ಇರಲಿ
  • ಹಣ್ಣುಗಳು ಆರೋಗ್ಯಕ್ಕೆ ಉತ್ತಮ, ಡೆಂಘಗೆ ರಾಮಬಾಣ, ಅಧಿಕ ಪೋಷಕಾಂಶಗಳಿವೆ
  • ಹಣ್ಣಿನಲ್ಲಿ ರೋಗ ನಿರೋಧಕ ಶಕ್ತಿ, ಜೀವಸತ್ವ ಮತ್ತು ಖನಿಜ ಅಂಶ ಹೇರಳ
  • ಕಡಿಮೆ ತೇವಾಂಶ ಇರುವ ಬಯಲು ಪ್ರದೇಶಗಳಲ್ಲೂ ಬೆಳೆಯಬಹುದು
  • ಒಂದು ಋತುವಿನಲ್ಲಿ 3 ಬಾರಿ ಫಲ ನೀಡಲಿದೆ
  • ಒಂದು ಮರವು 50-60 ಹಣ್ಣು ಬಿಡಲಿದೆ
  • ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವ ಜತೆಗೆ ಹೃದಯದ ಆರೋಗ್ಯ ಹೆಚ್ಚಿಸಲಿದೆ

ಬದಲಾವಣೆಗೆ ನಾಂದಿ

ಡ್ರ್ಯಾಗನ್ ಹಣ್ಣಿನ ಕೃಷಿ ಬದಲಾಣೆಗೆ ಹೊಸ ನಾಂದಿ ಹಾಡುತ್ತಿದೆ. ವರ್ಷದಿಂದ ವರ್ಷಕ್ಕೆ ರಾಜ್ಯದ ಸಾವಿರಾರು ಎಕರೆ ಪ್ರದೇಶಗಳಲ್ಲಿ ಈ ಹಣ್ಣನ್ನು ಬೆಳೆಯಲಾಗುತ್ತಿದೆ. ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್ ಸೇರಿ ದೇಶದ ವಿವಿಧ ರಾಜ್ಯಗಳಲ್ಲೂ ಈ ಹಣ್ಣನ್ನು ಬೆಳೆಯಲಾಗುತ್ತಿದೆ. ವಿಶ್ವದಾದ್ಯಂತ ಗಮನ ಸೆಳೆದಿರುವ ಈ ಹಣ್ಣಿನತ್ತ ರಾಜ್ಯದಲ್ಲೂ ಸಾಕಷ್ಟು ಯುವ ರೈತರು ದೃಷ್ಟಿಹರಿಸಿದ್ದಾರೆ. ರಾಗಿ, ಜೋಳ ಸೇರಿ ಇತರ ಬೆಳೆಗಳಿಗಿಂತ ಅಲ್ಪ ಭೂಮಿಯಲ್ಲಿ ಡ್ರ್ಯಾಗನ್ ಹಣ್ಣಿನ ಕೃಷಿಗೆ ಒತ್ತು ನೀಡಲಾಗುತ್ತಿದೆ. ಕೆಲ ರೈತರು ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಮೇಳದಲ್ಲೂ ಡ್ರ್ಯಾಗನ್ ಹಣ್ಣಿನ ಮಾಹಿತಿ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net