ಡೀಸೆಲ್ ಈಗ ದುಬಾರಿ; ಪೆಟ್ರೋಲಲ್ಲ!

Petrol
Published on

ನವದೆಹಲಿ: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ತೆರಿಗೆ, ಸೆಸ್ ಮತ್ತಿತರ ಕಾರಣಗಳಿಂದಾಗಿಯೇ ಹೆಚ್ಚಾಗಿದ್ದು, ಕಳೆದ ಎರಡು ವಾರಗಳ ಸತತ ಏರಿಕೆಯ ಪರಿಣಾಮ ದರ ಗಗನಮುಖಿಯಾಗಿ ಸಾಗಿದೆ. ದೇಶದ ಪೆಟ್ರೋಲಿಯಂ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಇದೇ ಮೊದಲ ಸಲ ಡೀಸೆಲ್ ದರ ಪೆಟ್ರೋಲ್ ದರಕ್ಕಿಂತ ಹೆಚ್ಚಾಗಿ ದಾಖಲೆ ಬರೆದಿದೆ. ಈ ದಾಖಲೆ ನಿರ್ಮಾಣವಾಗಿರುವುದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ!

ಗಗನಮುಖಿ ಬೆಲೆಯ ಹಿಂದಿನ ಲೆಕ್ಕಾಚಾರ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಾರ ಡೀಸೆಲ್ ಮೂಲದ ಪ್ರತಿ ಲೀಟರಿಗೆ 22.93 ರೂಪಾಯಿ ಆದರೆ, ಪೆಟ್ರೋಲ್ ದರ 22.11 ರೂಪಾಯಿ. ಇತ್ತೀಚಿನ ಎರಡು ವಾರಗಳ ಅವಧಿಯಲ್ಲಿ ಡೀಸೆಲ್​ ಮತ್ತು ಪೆಟ್ರೋಲ್ ಮೂಲ ಬೆಲೆ 7.10 ರೂಪಾಯಿ ಮತ್ತು 1.67 ರೂಪಾಯಿ ಏರಿಕೆಯಾಗಿದೆ. ದೆಹಲಿ ಸರ್ಕಾರ ಮೇ ತಿಂಗಳ ಆರಂಭದಲ್ಲಿ ಡೀಸೆಲ್ ಮೇಲಿನ ವ್ಯಾಟ್ ಅನ್ನು ಶೇಕಡ 16.75 ರಿಂದ ಶೇಕಡ 30ಕ್ಕೆ, ಪೆಟ್ರೋಲ್​ ಮೇಲಿನ ವ್ಯಾಟ್​ ಅನ್ನು ಶೇಕಡ 27ರಿಂದ 30ಕ್ಕೆ ಏರಿಕೆ ಮಾಡಿತ್ತು. ಸದ್ಯ ಕೇಂದ್ರೀಯ ಅಬಕಾರಿ ಸುಂಕ ಡೀಸೆಲ್​ ಮೇಲೆ 31.83 ರೂಪಾಯಿ, ಪೆಟ್ರೋಲ್ ಮೇಲೆ 32.98 ರೂಪಾಯಿ ಇದೆ. ವ್ಯಾಟ್​ ಡೀಸೆಲ್​ ಮೇಲೆ 17.60 ರೂಪಾಯಿ, ಪೆಟ್ರೋಲ್ ಮೇಲೆ 17.71 ರೂಪಾಯಿ ಇದೆ. ಇವಲ್ಲದೆ ಕೆಲವು ಸೆಸ್​ ಕೂಡ ಇವೆ. ಹೀಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಮುಖಿಯಾಗಿ ಸಾಗಿದೆ.

ಸತತ 18ನೇ ದಿನವಾದ ಬುಧವಾರವೂ ಡೀಸೆಲ್ ದರ 48 ಪೈಸೆ ಹೆಚ್ಚಳವಾಗಿದೆ. ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕಳೆದ 18 ದಿನದಲ್ಲಿ ಪೆಟ್ರೋಲ್ ಬೆಲೆ ಒಟ್ಟು 8.52 ರೂಪಾಯಿ ಹಾಗೂ ಡೀಸೆಲ್ -10.03 ರೂಪಾಯಿ ಹೆಚ್ಚಳವಾದಂತಾಗಿದೆ. ಪರಿಷ್ಕೃತ ದರದ ಅನ್ವಯ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ 79.76 ರೂಪಾಯಿ ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರಿಗೆ 79.88 ರೂಪಾಯಿಗೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್​ಗೆ 86.54 ರೂಪಾಯಿ, ಡೀಸೆಲ್​ಗೆ 78.22 ರೂಪಾಯಿ, ಚೆನ್ನೈನಲ್ಲಿ ಪೆಟ್ರೋಲ್ 83.04 ರೂಪಾಯಿ, ಡೀಸೆಲ್ 77.17 ರೂಪಾಯಿ, ಕೋಲ್ಕತದಲ್ಲಿ ಪೆಟ್ರೋಲ್ 81.45 ರೂಪಾಯಿ, ಡೀಸೆಲ್ 75.06 ರೂಪಾಯಿ ಆಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಬ್ರೆಂಟ್ ತೈಲ ಬೆಲೆ ಬುಧವಾರ ಶೇ.0.62 ಇಳಿಕೆ ಕಂಡು 42.01 ಡಾಲರ್ ತಲುಪಿದೆ. ವೆಸ್ಟ್ ಟೆಕ್ಸಸ್ ಇಂಟರ್​ವಿುೕಡಿಯೆಟ್ ದರ್ಜೆಯ ಕಚ್ಚಾತೈಲ ಬೆಲೆ ಶೇ.0.73 ಇಳಿಕೆ ಕಂಡು 39.64 ಡಾಲರ್ ತಲುಪಿದೆ.

ತೈಲ ದರ ಏರಿಕೆಗೆ ಕಿಡಿಕಾರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಕರೊನಾ ಅನ್​ಲಾಕ್ ಜತೆಗೆ ಇಂಧನ ದರವನ್ನು ಅನ್​ಲಾಕ್ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. ಕರೊನಾ ಹಿನ್ನೆಲೆ 82 ದಿನಗಳ ಕಾಲ ಸ್ಥಗಿತವಾಗಿದ್ದ ಇಂಧನ ದರದ ನಿತ್ಯ ಪರಿಷ್ಕರಣೆ ಕಳೆದ ಜೂ.7ರಿಂದ ಆರಂಭವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net