

ನವದೆಹಲಿ: ಕರೊನಾ ಕಂಟಕ ದೇಶವನ್ನಾವರಿಸಿದ್ದು ಅದನ್ನು ತಡೆಯಲು ದೇಶದಲ್ಲಿ ಲಾಕ್ಡೌನ್ ಘೋಷಿಸಿದ್ದು ಏಪ್ರಿಲ್ 14ರ ತನಕ ಮುಂದುವರಿಯಲಿದೆ. ಈ ಅವಧಿಯಲ್ಲಿ ಜನರಿಗೆ ತೊಂದರೆ ಆಗಬಾರದು ಎಂದು ಸರ್ಕಾರ ಹಲವು ಉಪಕ್ರಮಗಳನ್ನು ತೆಗೆದುಕೊಂಡಿದೆ. ಇದೇ ರೀತಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೂ ಕೆಲವು ಉಪಕ್ರಮಗಳನ್ನು ಘೋಷಿಸಿವೆ. ಅಂಥ ಉಪಕ್ರಮಗಳ ಪೈಕಿ ಭಾರತೀಯ ಸಂಚಾರ ನಿಗಮ್ ಲಿಮಿಟೆಡ್(ಬಿಎಸ್ಎನ್ಎಲ್) ಘೋಷಿಸಿರುವ ಉಪಕ್ರಮ ಗ್ರಾಹಕರ ಮುಖದಲ್ಲಿ ನಗು ಮೂಡಿಸಿದೆ.
ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಅವರು ಸೋಮವಾರ ಈ ವಿಚಾರವನ್ನು ಪ್ರಕಟಿಸಿದ್ದು, ಏಪ್ರಿಲ್ 20ರ ತನಕ ಬಿಎಸ್ಎನ್ಎಲ್ನ ಪ್ರೀಪೇಯ್ಡ್ ಗ್ರಾಹಕರ ಸಿಮ್ನ ಸೇವೆಗಳು ಕಡಿತಗೊಳ್ಳುವುದಿಲ್ಲ. ಎಲ್ಲರ ಖಾತೆಗಳಿಗೆ 10 ರೂಪಾಯಿ ಇನ್ಸೆಂಟಿವ್ ಲಭ್ಯವಿದ್ದು, ಅದು ತನ್ನಿಂತಾನೇ ಬಿಎಸ್ಎನ್ಎಲ್ಗೆ ಪಾವತಿಯಾಗಲಿದ್ದು ಔಟ್ ಗೋಯಿಂಗ್ ಕರೆ ಸೌಲಭ್ಯ ಮುಂದುವರಿಯಲಿದೆ. ಬಡವರಿಗೆ ಮತ್ತು ಅಗತ್ಯ ಇರುವವರಿಗೆ ಈ ಉಪಕ್ರಮ ನೆರವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮುನ್ನ, ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಎಲ್ಲ ಟೆಲಿಕಾಂ ಕಂಪನಿಗಳಿಗೂ ಅವರ ಪ್ರೀಪೇಯ್ಡ್ ಬಳಕೆದಾರರ ಸಿಮ್ನ ಕರೆಯ ವ್ಯಾಲಿಡಿಟಿ ಅವಧಿಯನ್ನು ವಿಸ್ತರಿಸುವಂತೆ ಹೇಳಿತ್ತು. ಅಲ್ಲದೆ, 21 ದಿನಗಳ ಲಾಕ್ ಡೌನ್ ಅವಧಿಯಲ್ಲಿ ಅಡ್ಡಿ ಇಲ್ಲದ ಸೇವೆಗಳು ಚಂದಾದಾರರಿಗೆ ಸಿಗುತ್ತಿದೆ ಎಂಬುದನ್ನು ಕಂಪನಿಗಳು ಖಾತರಿಪಡಿಸಿಕೊಳ್ಳಬೇಕು. ಅಕಸ್ಮಾತ್ ಯಾರಿಗಾದರೂ ತೊಂದರೆ ಆದಲ್ಲಿ, ಆದ್ಯತೆ ಮೇರೆಗೆ ಅದನ್ನು ಸರಿಪಡಿಸಿಕೊಳ್ಳಬೇಕು ಎಂದೂ ಹೇಳಿತ್ತು. (ಏಜೆನ್ಸೀಸ್)