

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ಗಳನ್ನೂ ಗೂಡ್ಸ್ ಆ್ಯಂಡ್ ಸರ್ವೀಸಸ್ ಟ್ಯಾಕ್ಸ್ (ಜಿಎಸ್ಟಿ) ವ್ಯಾಪ್ತಿಗೆ ತನ್ನಿ. ಆ ಮೂಲಕ ಆಟೋಮೊಬೈಲ್ ಇಂಧನದ ವಿಚಾರದಲ್ಲಿ ಏಕರೂಪತೆಯನ್ನು ಖಾತರಿಗೊಳಿಸಿ ಎಂದು ಕೈಗಾರಿಕಾ ಸಂಘಟನೆ ಅಸೋಚಾಮ್ ಮಂಗಳವಾರ ಸರ್ಕಾರವನ್ನು ಆಗ್ರಹಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ದರ 7.10 ರೂಪಾಯಿ ಮತ್ತು ಡೀಸೆಲ್ ದರ 1.67 ರೂಪಾಯಿ ಏರಿಕೆ ಮಾಡಿದ ಮರುದಿನವೇ ಅಸೋಚಾಮ್ ಈ ಕುರಿತು ಕೇಂದ್ರ ಸರ್ಕಾರವನ್ನು ಆಗ್ರಹಿಸಿರುವುದು ಗಮನಾರ್ಹ.
ಆದಷ್ಟು ಶೀಘ್ರವಾಗಿ ಪೆಟ್ರೋಲ್, ಡೀಸೆಲ್ಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವುದು ಅವಶ್ಯ. ಜಿಎಸ್ಟಿ ಕೌನ್ಸಿಲ್ನಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಿದ ಬಳಿಕ ಈ ತೀರ್ಮಾನ ಆಗಬೇಕು. ಭಾರತದ ಅರ್ಥವ್ಯವಸ್ಥೆಯಲ್ಲಿ ಜಿಎಸ್ಟಿ ಚಾಲ್ತಿಗೆ ಬಂದಿರುವ ಕಾರಣ ಒಟ್ಟಾರೆ ಹಿತ ದೃಷ್ಟಿಯಿಂದ ಈ ಬದಲಾವಣೆ ಆಗಬೇಕು ಎಂದು ಅಸೋಚಾಮ್ ಸೆಕ್ರೆಟರಿ ಜನರಲ್ ದೀಪಕ್ ಸೂದ್ ಹೇಳಿದ್ದಾರೆ.
COVID 19 ವೈರಸ್ ಸೋಂಕು ತಡೆಯಲು ಲಾಕ್ಡೌನ್ ಘೋಷಿಸಿದ ಬೆನ್ನಲ್ಲೆ ಸರ್ಕಾರ ಆರ್ಥಿಕ ಪ್ಯಾಕೇಜನ್ನು ಕೂಡ ಪ್ರಕಟಿಸಿತ್ತು. ಅರ್ಥ ವ್ಯವಸ್ಥೆಗೆ ಘಾಸಿಯಾಗಬಾರದು ಎಂಬ ಕಾರಣಕ್ಕೆ ಈ ಕ್ರಮವನ್ನು ಸರ್ಕಾರ ತೆಗೆದುಕೊಂಡಿತ್ತು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ತೆರಿಗೆಗಳನ್ನು ಹೆಚ್ಚಿಸಿದರೆ ಅರ್ಥ ವ್ಯವಸ್ಥೆಯ ಮೇಲೂ ಅದು ಪರಿಣಾಮ ಬೀರಲಿದೆ. ಬೇಡಿಕೆ ಕುಸಿದು ಆರ್ಥಿಕ ಪ್ಯಾಕೇಜ್ನ ಉದ್ದೇಶ ಸಾರ್ಥಕವಾಗದು ಎಂದು ಸೂದ್ ಎಚ್ಚರಿಸಿದ್ದಾರೆ.
ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ಗೆ 3 ರೂಪಾಯಿಯಂತೆ ಏರಿಸಿತ್ತು. ಇದರ ಮೂಲಕ ವಾರ್ಷಿಕ 39,000 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಸಂಗ್ರಹಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿತ್ತು. ಎರಡು ದಶಕಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಕನಿಷ್ಠ ಮಟ್ಟಕ್ಕೆ ತೈಲ ದರ ತಲುಪಿದ್ದರ ಪ್ರಯೋಜನ ಪಡೆಯಲು ಈ ಬೆಲೆ ಏರಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಲಾಕ್ಡೌನ್ನ ವ್ಯತಿರಿಕ್ತ ಪರಿಣಾಮ ತಡೆಯುವ ಕ್ರಮಕ್ಕೆ ವಿರುದ್ಧವಾಗಿ ಇಂಧನ ದರ ಹೆಚ್ಚಿಸಿದರೆ ಅದರ ಪರಿಣಾಮ ಎಲ್ಲದರ ಮೇಲೂ ಆಗಲಿದೆ. ಸರಕು ಸಾಗಣೆ ಮೇಲೆ ಆದರೆ ಉಳಿದ ಅಗತ್ಯವಸ್ತುಗಳ ಬೆಲೆಯೂ ಹೆಚ್ಚಲಿದೆ ಎಂದು ಪರಿಣತರು ಎಚ್ಚರಿಸಿದ್ದಾರೆ. (ಏಜೆನ್ಸೀಸ್)