

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಕೋಟ್ಯಂತರ ಗ್ರಾಹಕರ ( SBI Account Holders ) ಹಿತದೃಷ್ಟಿಯಿಂದ ಹಾಗೂ ಬ್ಯಾಂಕಿಂಗ್ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅತ್ಯಂತ ಪ್ರಮುಖ ಸೂಚನೆಯೊಂದನ್ನು ಹೊರಡಿಸಿದೆ.
ಕಳೆದ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಯಾವುದೇ ಹಣಕಾಸಿನ ವಹಿವಾಟು ನಡೆಸದಿರುವ ಖಾತೆಗಳು ಹಾಗೂ ಕನಿಷ್ಠ ಒಂದು ವರ್ಷದಿಂದ ನಿರಂತರವಾಗಿ 'ಶೂನ್ಯ ಬ್ಯಾಲೆನ್ಸ್' (Zero Balance) ಹೊಂದಿರುವ ಖಾತೆಗಳು ಸೈಬರ್ ಅಪರಾಧಿಗಳ ದುರ್ಬಳಕೆಗೆ ಈಡಾಗುವ ಅಪಾಯವಿದೆ ಎಂದು ಬ್ಯಾಂಕ್ ಗುರುತಿಸಿದೆ. ಇಂತಹ ಶಂಕಿತ ಅಥವಾ ಅಕ್ರಮ ಚಟುವಟಿಕೆಗಳನ್ನು ತಡೆಯಲು ಪ್ರತಿಯೊಬ್ಬ ಗ್ರಾಹಕರೂ ತಕ್ಷಣವೇ ತಮ್ಮ ಕೆವೈಸಿ (KYC) ವಿವರಗಳನ್ನು ನವೀಕರಿಸಬೇಕು (Update) ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.
ಬ್ಯಾಂಕಿನ ನಿಯಮಗಳ ಪ್ರಕಾರ, ಯಾವುದೇ ವಹಿವಾಟು ನಡೆಸದೆ ಸ್ಥಗಿತಗೊಂಡಿರುವ ಅಥವಾ ನಿಷ್ಕ್ರಿಯವಾಗಿರುವ ಖಾತೆಗಳನ್ನು ಮರುಸಕ್ರಿಯಗೊಳಿಸಲು ಗ್ರಾಹಕರಿಗೆ 30 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ನಿಗದಿತ ಅವಧಿಯೊಳಗೆ ಗ್ರಾಹಕರು ತಮ್ಮ ಕೆವೈಸಿ ಅಪ್‌ಡೇಟ್ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ಅಂತಹ ಖಾತೆಗಳನ್ನು ತಾತ್ಕಾಲಿಕವಾಗಿ ಫ್ರೀಜ್ ಮಾಡಲಾಗುವುದು ಅಥವಾ ಸಂಪೂರ್ಣವಾಗಿ ಬ್ಲಾಕ್ ಮಾಡಲಾಗುವುದು ಎಂದು ಎಸ್ಬಿಐ ಸ್ಪಷ್ಟಪಡಿಸಿದೆ. ಆರ್ಥಿಕ ನಷ್ಟ ಹಾಗೂ ಬ್ಯಾಂಕಿಂಗ್ ಸೇವೆಯಲ್ಲಿ ಅಡಚಣೆ ಉಂಟಾಗುವುದನ್ನು ತಪ್ಪಿಸಲು ತಕ್ಷಣವೇ ಸ್ಪಂದಿಸುವಂತೆ ಆಡಳಿತ ಮಂಡಳಿ ಕೋರಿದೆ.
ಗ್ರಾಹಕರ ಅನುಕೂಲಕ್ಕಾಗಿ ಈ ಕೆವೈಸಿ ಪ್ರಕ್ರಿಯೆಯನ್ನು ಆಫ್‌ಲೈನ್ ಹಾಗೂ ಆನ್‌ಲೈನ್ ಎರಡೂ ಮಾದರಿಗಳಲ್ಲಿ ಅತ್ಯಂತ ಸರಳೀಕರಣಗೊಳಿಸಲಾಗಿದೆ. ನೇರವಾಗಿ ಬ್ಯಾಂಕ್‌ಗೆ ತೆರಳಲು ಬಯಸುವ ಗ್ರಾಹಕರು ತಮ್ಮ ಹತ್ತಿರದ ಎಸ್ಬಿಐ ಶಾಖೆಗೆ ಭೇಟಿ ನೀಡಿ, ಸೂಕ್ತ ಗುರುತಿನ ಚೀಟಿಗಳಾದ ಆಧಾರ್ ಕಾರ್ಡ್, ಪಾನ್ ಕಾರ್ಡ್, ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ವಿಳಾಸದ ಪುರಾವೆ ದಾಖಲೆಗಳನ್ನು ಸಲ್ಲಿಸಿ ನೇರವಾಗಿ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ.
ಬ್ಯಾಂಕ್ ಶಾಖೆಗೆ ತೆರಳಲು ಸಮಯವಿಲ್ಲದವರು ಮನೆಯಲ್ಲೇ ಕುಳಿತು ಡಿಜಿಟಲ್ ರೂಪದಲ್ಲಿ ಈ ಕೆಲಸವನ್ನು ಮುಗಿಸಬಹುದು. ಎಸ್ಬಿಐ ಯೋನೋ (YONO) ಮೊಬೈಲ್ ಆ್ಯಪ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಲಾಗಿನ್ ಮೂಲಕ ಗ್ರಾಹಕರು ತಮ್ಮ ಕೆವೈಸಿ ವಿವರಗಳನ್ನು ಸುಲಭವಾಗಿ ಅಪ್‌ಡೇಟ್ ಮಾಡಬಹುದು. ಇದರ ಜತೆಗೆ ಎಸ್ಬಿಐ ಎಟಿಎಂ (ATM) ಕೇಂದ್ರಗಳಿಗೆ ತೆರಳಿ ಆಧಾರ್ ಆಧಾರಿತ ದೃಢೀಕರಣದ ಮೂಲಕವೂ ಈ ಪ್ರಕ್ರಿಯೆಯನ್ನು ಅತ್ಯಂತ ಸರಳವಾಗಿ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
ಒಂದು ವೇಳೆ ಗ್ರಾಹಕರ ವಿಳಾಸ, ಮೊಬೈಲ್ ಸಂಖ್ಯೆ ಅಥವಾ ಇತರ ಯಾವುದೇ ವೈಯಕ್ತಿಕ ವಿವರಗಳಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೆ, ಅವರು ಬ್ಯಾಂಕ್ ಶಾಖೆಗೆ ಅಲೆಯುವ ಅಗತ್ಯವಿರುವುದಿಲ್ಲ. ಅಂತಹ ಗ್ರಾಹಕರು ತಮ್ಮ ಸಂಬಂಧಿತ ದಾಖಲೆಗಳನ್ನು ಬ್ಯಾಂಕ್‌ನಲ್ಲಿ ನೋಂದಾಯಿಸಲಾದ ಅಧಿಕೃತ ಇಮೇಲ್ (Email) ಅಥವಾ ಎಸ್ಎಮ್‌ಎಸ್ (SMS) ಮೂಲಕ ಕಳುಹಿಸಿ ಪರಿಶೀಲನೆಗೆ ಒಳಪಡಿಸಬಹುದು. ಆನ್‌ಲೈನ್ ವಂಚನೆಗಳಿಂದ ಪಾರಾಗಲು ಹಾಗೂ ಖಾತೆ ಬ್ಲಾಕ್ ಆಗುವುದನ್ನು ತಡೆಯಲು ಬ್ಯಾಂಕ್ ನೀಡಿದ ಈ ಸೂಚನೆಯನ್ನು ತಕ್ಷಣವೇ ಪಾಲಿಸುವುದು ಸೂಕ್ತ, (ಏಜೆನ್ಸೀಸ್).