ಕೃಷಿ ಪ್ರವಾಸೋದ್ಯಮ ಸನ್ನಿಹಿತ; ವರ್ಷದೊಳಗೆ ಯೋಜನೆ ಪ್ರಾಯೋಗಿಕವಾಗಿ ಜಾರಿ

Agri
Published on

ಬೆಂಗಳೂರು: ನಗರ ಪ್ರದೇಶದ ಜನಕ್ಕೆ ಕೃಷಿ ಸಂಸ್ಕೃತಿ ಪರಿಚಯಕ್ಕಾಗಿ ಪ್ರವಾಸೋದ್ಯಮ ಇಲಾಖೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಜತೆ ಕೈಜೋಡಿಸಿ ಅಗ್ರಿ ಟೂರಿಸಂ ಆರಂಭಿಸಲು ಸರ್ಕಾರ ಮುಂದಾಗಿದೆ. ಉನ್ನತಾಧಿಕಾರಿಗಳು ಮತ್ತು ಪರಿಣತರೊಂದಿಗೆ ಈ ಕುರಿತು ಸಭೆ ನಡೆಸಿದ ಬಳಿಕ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಈ ಮಾಹಿತಿ ನೀಡಿದ್ದಾರೆ. ಸುಸ್ಥಿರ ಕೃಷಿ ಪ್ರವಾಸೋದ್ಯಮ ಯೋಜನೆ ಕುರಿತು ಸಭೆ ಸೇರಿ ಚರ್ಚೆ ಮಾಡಿ, ಹೊಸ ನಿರ್ಧಾರಕ್ಕೆ ಬಂದಿದ್ದೇವೆ. ಪ್ರಾಯೋಗಿಕವಾಗಿ ಒಂದು ಅಥವಾ ಎರಡು ಕಡೆಗಳಲ್ಲಿ ಒಂದು ವರ್ಷದ ಅವಧಿಯಲ್ಲಿ ಈ ಯೋಜನೆ ಅನುಷ್ಠಾನಗೊಳಿಸುವ ಉದ್ದೇಶವಿದೆ ಎಂದರು.

ಅಗ್ರಿ ಟೂರಿಸಂ ಕುರಿತು ಶಾಲಾ ಪಠ್ಯದಲ್ಲಿ ಅಳವಡಿಸಲು ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದೇವೆ. ಲಾಕ್​ಡೌನ್ ಮುಗಿದ ಬಳಿಕ ಶಾಲೆ-ಕಾಲೇಜುಗಳು ಆರಂಭವಾದ ಮೇಲೆ ನಗರ ಪ್ರದೇಶಗಳ ಶಾಲಾ ಮಕ್ಕಳನ್ನು ಕೃಷಿ ಪ್ರವಾಸಕ್ಕೆ ಕರೆದೊಯ್ಯುವ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುತ್ತದೆ. | ಬಿ.ಸಿ. ಪಾಟೀಲ ಕೃಷಿ ಸಚಿವ

ನಮ್ಮ ನಾಗರಿಕತೆ ಕೃಷಿ ಸಂಸ್ಕೃತಿಯಿಂದ ಬೆಳೆದಿದೆ. ಕೃಷಿಕರ ಬದುಕು ಪರಿಚಯ ಮಾಡುವ ಉದ್ದೇಶ ಅಗ್ರಿ ಟೂರಿಸಂ ಹಿಂದಿದೆ ಎಂದರು. ಮರಕೋತಿ ಆಟ, ಜೋಕಾಲಿ, ಗೋಲಿ, ಬುಗುರಿ, ಕಬಡ್ಡಿ ಸೇರಿ ಗ್ರಾಮೀಣ ಸಾಂಸ್ಕೃತಿಕ ಕ್ರೀಡೆಗಳನ್ನು ಪ್ರವಾಸಿಗರಿಗೆ ಆಡಿಸುವುದು, ಭತ್ತ ನಾಟಿ, ಜಮೀನು ಉಳುಮೆ ಸೇರಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿ ಪರಿಚಯದ ಜತೆಗೆ ರೈತರಿಗೆ ಲಾಭದಾಯಕವಾಗಿ ಮಾಡಲು ಆಲೋಚಿಸಲಾಗಿದೆ ಎಂದು ತಿಳಿಸಿದರು.

ಮಹಾರಾಷ್ಟ್ರ ಮತ್ತಿತರ ಕಡೆಗಳಲ್ಲಿ ಅಗ್ರಿ ಟೂರಿಸಂ ಯಶಸ್ವಿಯಾಗಿದೆ. ಈ ಯೋಜನೆಗೆ ರೈತರನ್ನೇ ಪ್ರಮುಖ ಪಾಲುದಾರರನ್ನಾಗಿ ಮಾಡಿಕೊಂಡು ಮುನ್ನಡೆಸುವ ಯೋಚನೆ ಇದೆ ಎಂದು ಹೇಳಿದರು. ಈ ಯೋಜನೆ ಜಾರಿಗೆ ಮುನ್ನ ಅನೇಕ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಸ್ವ ಸಹಾಯ ಗುಂಪುಗಳಿಗೆ ತರಬೇತಿ ನೀಡಲಾಗುವುದು. ಈಗಿನಿಂದಲೇ ಆರಂಭಿಸಲಾಗುವುದು ಎಂದರು.

ನಮ್ಮಲ್ಲಿ ಶ್ರೀಮಂತ ಸಂಸ್ಕೃತಿ ಇದೆ. ಶ್ರೀಮಂತ ಪ್ರಕೃತಿ ಸಂಪತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ. ಅಗ್ರಿ ಟೂರಿಸಂ ಕೃಷಿಗೆ ಮತ್ತು ಕೃಷಿಕರಿಗೆ ಶಕ್ತಿ ತುಂಬಲು ಸಹಕಾರಿಯಾಗಲಿದೆ. ರೈತರ ಉತ್ಪನ್ನಗಳಿಗೆ ಮಾರುಕಟ್ಟೆಯೂ ದೊರೆಯುತ್ತದೆ. ನಗರ ಪ್ರದೇಶದ ಜನರಿಗೆ ಕೃಷಿ ಕುರಿತು ಮಾಹಿತಿ ಸಿಗಲಿದೆ. | ನಾರಾಯಣಗೌಡ ತೋಟಗಾರಿಕೆ ಸಚಿವ

ಅಗ್ರಿ ಟೂರಿಸಂ ಜತೆ ದಲಿತ ಸಂಸ್ಕೃತಿ ಪರಿಚಯಿಸುವ ಪ್ರಯತ್ನವನ್ನೂ ಮಾಡುತ್ತೇವೆ. ಈ ಸಂಬಂಧ ಡಿಸಿಎಂ ಗೋವಿಂದ ಕಾರಜೋಳ ಜತೆ ಸಮಾಲೋಚಿಸಿರುವುದಾಗಿ ರವಿ ಹೇಳಿದರು. ಕೋವಿಡ್-19 ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ವರ್ಚುಯೆಲ್ ಟೂರಿಸಂ ಪ್ರಾರಂಭಿಸಿ ಪ್ರವಾಸಿಗರಲ್ಲಿ ಕುತೂಹಲ ಮೂಡಿಸುವ ಕ್ರಮ ಅನಿವಾರ್ಯ ಎಂದರು.‘

ಹೋಟೆಲ್ ಆರಂಭಕ್ಕೆ ಅವಕಾಶ: ಟ್ರಾನ್ಸ್​ಪೋರ್ಟ್, ಟೂರಿಸಂ ಮತ್ತು ಆತಿಥ್ಯ ಒಂದಕ್ಕೊಂದು ಸಂಬಂಧ ಹೊಂದಿವೆ. ಸಾರಿಗೆಗೆ ಅವಕಾಶ ಕೊಟ್ಟ ನಂತರ ಹೋಟೆಲ್​ಗಳ ಆರಂಭಕ್ಕೂ ಅವಕಾಶ ಕೊಡುವಂತೆ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇನೆ. ಕೇಂದ್ರದ ಮಾರ್ಗಸೂಚಿ ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಿ.ಟಿ. ರವಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net