

ಲಖನೌ: ದೇಸಾದ್ಯಂತ ಸದ್ದು ಮಾಡಿದ್ದ ಉಡುಪಿ ಹಾಸ್ಟೆಲ್ ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣ ಮಾಸುವ ಮುನ್ನವೇ ಇದೀಗ ಅದೇ ರೀತಿಯ ಘಟನೆಯೊಂದು ಉತ್ತರಪ್ರದೇಶದ ಗಾಜಿಪುರ ಜಿಲ್ಲೆಯ ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.
ಹಾಸ್ಟೆಲ್ನಲ್ಲಿರುವ ಸಹಪಾಠಿಗಳ ಖಾಸಗಿ ಫೋಟೋ ಹಾಗೂ ವಿಡಿಯೋವನ್ನೂ ಮೊಬೈಲ್ ಫೋನಿನಲ್ಲಿ ಚಿತ್ರೀಕರಿಸಿ ವಿದ್ಯಾರ್ಥಿನಿಯೋರ್ವಳು ಅದನ್ನು ಕಾಲೇಜ್ ಸೀನಿಯರ್ಗಳಿಗೆ ಕಳುಹಿಸಿ ಬ್ಲ್ಯಾಕ್ಮೇಲ್ ಮಾಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಮಂತಾಶಾ ಕಜ್ಮಿ ಹಾಗೂ ಮೊಹಮ್ಮದ್ ಅಮೀರ್ ಎಂಬಾತನನ್ನೂ ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ಮೊಬೈಲ್ ಫೋನ್, ಲ್ಯಾಪ್ಟಾಪ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನೂ ವಶಕ್ಕೆ ಪಡೆಯಲಾಗಿದೆ.
ಗಾಜಿಪುರದಲ್ಲಿರುವ ಸರ್ಕಾರಿ ಹೋಮಿಯೋಪತಿ ಕಾಲೇಜಿನ ಮೊದಲನೇ ವರ್ಷದ ವಿದ್ಯಾರ್ಥಿನಿ ಮಂತಾಶಾ ಕಜ್ಮಿ ಹಾಸ್ಟೆಲ್ನಲ್ಲಿ ವಾಸವಿದ್ದ ತನ್ನ ಸಹಪಾಠಿಗಳ ಖಾಸಗಿ ಫೋಟೋ ಹಾಗೂ ವಿಡಿಯೋವನ್ನೂ ಚಿತ್ರೀಕರಿಸಿ ಬಳಿಕ ಅದನ್ನು ಆಕೆಯ ಸೀನಿಯರ್ ಮೊಹಮ್ಮದ್ ಅಮೀರ್ ಎಂಬಾತನಿಗೆ ಕಳುಹಿಸುತ್ತಿದ್ದಳು.
ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು ಸಂತ್ರಸ್ತ ವಿದ್ಯಾರ್ಥಿನಿಯರಿಗೆ ಫೋಟೋ ಹಾಗೂ ವಿಡಿಯೋಗಳನ್ನೂ ತೋರಿಸಿ ಬ್ಲ್ಯಾಕ್ಮೇಲ್ ಮಾಡಲು ಶುರು ಮಾಡಿದ್ದಾರೆ. ನೊಂದ ವಿದ್ಯಾರ್ಥಿನಿಯರು ಈ ಕುರಿತು ಪೊಲೀಸರಿಗೆ ಹಾಗೂ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದ್ದು, ಆರೋಪಿಗಳಿಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಅವರ ಬಳಿ ಇದ್ದ ಮೊಬೈಲ್ ಫೋನ್, ಲ್ಯಾಪ್ಟಾಪ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನೂ ವಶಕ್ಕೆ ಪಡೆದಿದ್ದಾರೆ. ಕಾಲೇಜು ಆಡಳಿತ ಮಂಡಳಿ ಈ ಇಬ್ಬರು ವಿದ್ಯಾರ್ಥಿನಿಗಳನ್ನೂ ಆರು ತಿಂಗಳ ಕಾಲ ಅಮಾನತು ಮಾಡಿ ಆದೇಶ ಹೊರಡಿಸಿದೆ.
ವಿಡಿಯೋ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಗಾಜಿಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಓಂವೀರ್ ಸಿಂಗ್ ವಿಚಾರವನ್ನೂ ಗಂಭೀರವಾಗಿ ಪರಿಗಣಿಸಲಾಗಿದ್ದು, ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿತ ವಿದ್ಯಾರ್ಥಿಗಳಿಬ್ಬರು ತಮ್ಮ ಮೊಬೈಲ್ ಫೋನ್ಗಳನ್ನೂ ಫಾರ್ಮ್ಯಾಟ್ ಮಾಡಿದ್ದಾರೆ.
ಈ ಸಂಬಂಧ ಅಧಿಕಾರಿಗಳು ತಂಡ ಅಳಿಸಿಹೋಗಿರುವ ಡೇಟಾ ರಿಟ್ರೈವ್ ಮಾಡುವುದರಲ್ಲಿ ನಿರತವಾಗಿದ್ದು, ಕಾನೂನು ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಗಾಜಿಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಓಂವೀರ್ ಸಿಂಗ್ ತಿಳಿಸಿದ್ದಾರೆ.