

ಸಂದೀಪ್ ಸಾಲ್ಯಾನ್ ಬಂಟ್ವಾಳ
ಪತ್ರಿಕೆಗಳನ್ನು ಓದಿದ ಬಳಿಕ ಕೆಲವರು ಸಂಗ್ರಹಿಸಿಟ್ಟುಕೊಂಡರೆ ಹಲವರಿಗೆ ಅದು ನಿಷ್ಪ್ರಯೋಜಕ ಎನಿಸಿ ಬಿಡುತ್ತದೆ. ಕೆಲವರು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಬಳಸಿಕೊಳ್ಳುತ್ತಾರೆ. ಇನ್ನೂ ಕೆಲವರು ಸಂಗ್ರಹಿಸಿಟ್ಟುಕೊಂಡ ಪತ್ರಿಕೆಗಳು ಉಪಯೋಗಕ್ಕಿಲ್ಲ ಎಂದೆನಿಸಿದಾಗ ರದ್ದಿಗೆ ಮಾರಿ ಬಿಡುತ್ತಾರೆ. ಆದರೆ ಬಂಟ್ವಾಳದ ಚೆಂಡ್ತಿಮಾರಿನ ಕೃಷಿಕ ಸಿ.ಮುತ್ತಪ್ಪ ಪೂಜಾರಿ ತಾನು ಓದಿದ ಪತ್ರಿಕೆಗಳೆಲ್ಲವನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಈಗ ಅವರಿಗೆ 88 ವರ್ಷ. ಅವರ ಬಳಿ 50 ವರ್ಷಗಳಿಗಿಂತಲೂ ಹಳೆಯ ಪತ್ರಿಕೆಗಳ ಸಂಗ್ರಹವಿದೆ.
ಬಂಟ್ವಾಳ ಕಸ್ಬ ಗ್ರಾಮದ ಚೆಂಡ್ತಿಮಾರ್ ನಿವಾಸಿ ಸಿ.ಮುತ್ತಪ್ಪ ಪೂಜಾರಿ ವೃತ್ತಿಯಲ್ಲಿ ಕೃಷಿಕ. ಕೆಲವು ವರ್ಷಗಳ ಕಾಲ ಬೀಡಿ ಗುತ್ತಿಗೆ ವಹಿಸಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪ್ಪ ಅವರ ಒಡನಾಡಿ. ದಿನಪತ್ರಿಕೆಯನ್ನು ಓದುವುದೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ತಾನು ಯುವಕನಾಗಿದ್ದಾಗ ತಮ್ಮ ಮನೆಯ ಸಮೀಪದ ಒಂದು ಮನೆಗೆ ಪತ್ರಿಕೆ ಬರುತ್ತಿತ್ತು. ಸ್ಥಳೀಯರು ಓದಲು ಅದೇ ಪತ್ರಿಕೆಯನ್ನು ಅವಲಂಬಿಸಿದ್ದುದರಿಂದ ಮುತ್ತಪ್ಪ ಪೂಜಾರಿಗೆ ಎಲ್ಲ ಸುದ್ದಿಗಳನ್ನು ಓದಲು ಆಗುತ್ತಿರಲಿಲ್ಲ. ಅದಕ್ಕಾಗಿ ತಮ್ಮ ಮನೆಗೆ ಪತ್ರಿಕೆಯನ್ನು ಹಾಕಿಸಲು ಆರಂಭಿಸಿದ್ದರು. ಪತ್ರಿಕೆಯ ಮೇಲೆ ಅಪಾರವಾದ ಪ್ರೀತಿ, ಅಭಿಮಾನ ಇದ್ದುದರಿಂದ ಓದಿದ ಬಳಿಕ ಎಲ್ಲೆಂದರಲ್ಲಿ ಎಸೆಯದೆ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ.
ಇದೀಗ ಅವರ ಮನೆಯ ಮಲಗುವ ಕೋಣೆಯ ತುಂಬಾ ಪತ್ರಿಕೆಗಳೇ ತುಂಬಿವೆ. ಮಲಗುವ ಮಂಚವನ್ನು ಇಡುವ ಸ್ಥಳ ಬಿಟ್ಟು ಉಳಿದೆಲ್ಲ ಜಾಗಗಳನ್ನು ಪತ್ರಿಕೆಯ ರಾಶಿ ಆವರಿಸಿದೆ. ತಾನು ಪ್ರತಿದಿನ ಓದಿದ ಪತ್ರಿಕೆಗಳನ್ನು ಕೊಠಡಿಯಲ್ಲಿ ಇಟ್ಟು ಹಾಳಾಗದಂತೆ ಎಚ್ಚರಿಕೆಯಿಂದ ಕಾಪಾಡಿಕೊಂಡು ಬಂದಿದ್ದಾರೆ. 1971ರ ಪತ್ರಿಕೆಗಳು ಈಗಲೂ ಇದ್ದೂ ಗೆದ್ದಲು ಹಿಡಿಯಂತೆ ನೀರು ಬಿದ್ದು ಹಾಳಾಗದಂತೆ, ಹರಿದು ಹೋಗದಂತೆ ಜೋಪಾನವಾಗಿ ಸಂಗ್ರಹಿಸಿಟ್ಟುಕೊಂಡಿದ್ದಾರೆ.
ಬಾಂಗ್ಲ ವಿಮೋಚನೆ ವರದಿಗಳು
1971ರಲ್ಲಿ ಬಾಂಗ್ಲಾ ವಿಮೋಚನಾ ಯುದ್ದಕ್ಕೆ ಸಂಬಂಧಪಟ್ಟ ವರದಿಗಳು ಪ್ರಕಟವಾದ ಪತ್ರಿಕೆಯ ಸಂಗ್ರಹ ಮುತ್ತಪ್ಪ ಪೂಜಾರಿಯವರಲ್ಲಿದೆ. ಬಾಂಗ್ಲ ವಿಮೋಚನೆಗೆ ಸಂಬಂಧಪಟ್ಟ ಪ್ರತಿದಿನದ ವರದಿಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದು, ಅದೆಲ್ಲವನ್ನು ಅವರು ಪ್ರತ್ಯೇಕವಾಗಿ ಎತ್ತಿಟ್ಟುಕೊಂಡಿದ್ದಾರೆ. 54 ವರ್ಷಗಳ ಹಿಂದಿನ ಪತ್ರಿಕೆಗಳು ಈಗಲೂ ಸ್ವಲ್ಪವೂ ಹಾಳಾಗದೆ ಮುತ್ತಪ್ಪ ಪೂಜಾರಿ ಅವರಲ್ಲಿ ಜೋಪಾನವಾಗಿರುವುದು ಅವರಿಗೆ ಪತ್ರಿಕೆಯ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ. ಮಾತ್ರವಲ್ಲದೆ ಆ ಟನೆಗೆ ಸಂಬಂಧಿಸಿದ ಅಪಾರವಾದ ಜ್ಞಾನವೂ ಅವರಲ್ಲಿದೆ.
ನಾರಾಯಣ ಗುರುಗಳ ಅನುಯಾಯಿ
ಬ್ರಹ್ಮಶ್ರೀ ನಾರಾಯಣಗುರುಗಳ ಅನುಯಾಯಿಯಾಗಿರುವ ಮುತ್ತಪ್ಪ ಪೂಜಾರಿ ಬಳಿ ನಾರಾಯಣ ಗುರುಗಳಿಗೆ ಸಂಬಂಧಪಟ್ಟ ಪುಸ್ತಕಗಳಿವೆ. ಅವರು ಮಲಗುವ ಮಂಚದ ಮೇಲೆ ಬ್ರಹ್ಮಶ್ರೀ ನಾರಾಯಣ ಗುರುಗಳು ಹಾಗೂ ದೇಶದ ಸಂವಿಧಾನದ ಪುಸ್ತಕಗಳು ಸದಾ ಇರುತ್ತದೆ.
ನನ್ನ ಇಪ್ಪತೈದನೇ ವರ್ಷದಿಂದ ಓದಿದ ಪತ್ರಿಕೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಹವ್ಯಾಸ ಬೆಳೆಸಿಕೊಂಡಿದ್ದೇನೆ. ಪತ್ರಿಕೆಗಳನ್ನು ಓದಿದ ಬಳಿಕ ಅವುಗಳನ್ನು ಜೋಪಾನವಾಗಿಟ್ಟುಕೊಂಡು ಬಂದಿದ್ದೇನೆ. ಮನೆಯವರು ಏನಾದರೂ ಅವಶ್ಯಕತೆಗೆ ಪೇಪರ್ ಕೇಳಿದರೂ ನಾನು ಸಂಗ್ರಹಿಸಿಟ್ಟ ಪತ್ರಿಕೆಗಳನ್ನು ಕೊಟ್ಟಿಲ್ಲ. ಸಿ.ಮುತ್ತಪ್ಪ ಪೂಜಾರಿ ಪತ್ರಿಕೆ ಸಂಗ್ರಹಕಾರ