

ವಿಜಯವಾಣಿ ಸುದ್ದಿಜಾಲ ಕಡಬ
ಕೈೊಲ ಗ್ರಾಮ ಪಂಚಾಯಿತಿ ಅಧೀನದಲ್ಲಿರುವ ಕೈೊಲ ಜನತಾ ಕಾಲನಿಯಲ್ಲಿರುವ ಕುಡಿಯುವ ನೀರು ಸರಬರಾಜು ಯೋಜನೆಯ ಬೃಹತ್ ಟ್ಯಾಂಕ್ ಕುಸಿಯುವ ಅಪಾಯವಿದ್ದು, ಈ ಹಿನ್ನೆಲೆಯಲ್ಲಿ ಟ್ಯಾಂಕ್ ಸಮೀಪದಲ್ಲಿರುವ 6 ಮನೆಯವರನ್ನು ಮನೆ ಖಾಲಿ ಮಾಡುವಂತೆ ಕೈೊಲ ಗ್ರಾಮ ಪಂಚಾಯಿತಿ ನೋಟಿಸ್ ನೀಡಿದೆ.
ಇದಕ್ಕೆ ಪ್ರಶ್ನಿಸುತ್ತಿರುವ ಮನೆಯವರು ಟ್ಯಾಂಕ್ ನೆಲಸಮ ಮಾಡಿ, ಆ ವೇಳೆಯಲ್ಲಿ ನಾವುಗಳು 2 ಅಥವಾ 3 ದಿನ ಸಂಬಂಧಿಕರ ಮನೆಗಾದರೂ ಹೋಗುತ್ತೇವೆ. ಆದರೆ ಪೂರ್ಣ ಪ್ರಮಾಣದಲ್ಲಿ ಮನೆ ತೊರೆಯಲು ಅಸಾಧ್ಯ ಎಂದು ಪಿಡಿಒ ಸಂದೇಶ್ ಮುಂದೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರು ಎದುರಾಗಿರುವ ಸಮಸ್ಯೆಗಳನ್ನು ಕೆಪಿಸಿಸಿ ಸಂಯೋಜಕ ಕೃಷ್ಣಪ್ಪ ರಾಮಕುಂಜ ಅವರಿಗೆ ತಿಳಿಸಿದ್ದು, ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆಯ ಗಂಭೀರತೆ ತಿಳಿಸಿದರು. ಸ್ಥಳೀಯ ನಿವಾಸಿಗಳಾದ ಆಮಿನಮ್ಮ, ಮಹಮ್ಮದ್ ರಫೀಕ್, ಮೈಮುನಾ ಅಬ್ಬಾಸ್, ಅಬೂಬಕ್ಕರ್ ಸಿದ್ದಿಕ್, ಅಶ್ರಫ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಷ್ಣಪ್ಪ ಅವರಿಗೆ ಅಹವಾಲು ಸಲ್ಲಿಸಿದರು. ಕಡಬ ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ಎಚ್.ಆದಂ, ಸಾಮಾಜಿಕ ಕಾರ‌್ಯಕರ್ತೆ ಸಲೀಕಾ ಕೆವ್ಮಾರ, ಪಂಚಾಯಿತಿ ಸದಸ್ಯರಾದ ನಝೀರ್ ಪೂರಿಂಗ, ಸಜ್ಜದ್, ಸಫೀಯಾ, ಪಂಚಾಯಿತಿ ಕಾರ‌್ಯದರ್ಶಿ ಪಮ್ಮ, ಪುನರ್ವಸತಿ ಕಾರ‌್ಯಕರ್ತೆ ಆತಿಕಮ್ಮ ಮೊದಲಾದವರಿದ್ದರು.
ಟ್ಯಾಂಕ್ ಅಪಾಯ ಸಿತ್ಥಿಯಲ್ಲಿದೆ. ಪರಿಸರ ನಿವಾಸಿಗಳು ಕಾಳಜಿ ಕೇಂದ್ರಕ್ಕೆ ಹೋಗುವುದಕ್ಕೂ ಸಮಸ್ಯೆ ಇದೆ. ಈ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿದ್ದು, ಶ್ರೀಘ್ರವಾಗಿ ಟ್ಯಾಂಕ್ ನೆಲಸಮಗೊಳಿಸುವ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಕೃಷ್ಣಪ್ಪ ರಾಮಕುಂಜ ಕೆಪಿಸಿಸಿ ಸಂಯೋಜಕ