

ಬೆಂಗಳೂರು:ರಾಜಧಾನಿಯಲ್ಲಿ ಮೈ ನಡುಗುವ ಚಳಿ ಕಾಣಿಸಿಕೊಂಡಿದೆ.ವಾಡಿಕೆಗಿಂತ ಅಧಿಕ ಮಳೆ ಬಿದ್ದಿರುವುದು, ಭೂಮಿಯಲ್ಲಿ ತೇವಾಂಶ ಇರುವುದು, ಮೋಡ ಕವಿದ ವಾತಾವರಣ,ಸೈಕ್ಲೋನ್ ಉಂಟಾಗಿರುವುದು ಹಾಗೂ ಉತ್ತರದಿಂದ ದಕ್ಷಿಣದತ್ತ ಗಾಳಿ ಬೀಸುತ್ತಿರುವುದೂ ಸೇರಿ ವಿವಿಧ ಕಾರಣಗಳಿಂದ ನಗರದಲ್ಲಿ ಕನಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 2-3 ಡಿ.ಸೆ.ಉಷ್ಣಾಂಶ ಕುಸಿದಿದೆ.
ಮೋಡ ಕವಿದ ವಾತಾವರಣ ಜತೆಗೆ ತಣ್ಣನೆ ಗಾಳಿ ಬೀಸುತ್ತಿದೆ. ಸಂಜೆ ಮತ್ತು ಮುಂಜಾನೆ ಇಬ್ಬನಿಯೂ ಬೀಳುತ್ತಿದೆ. ಹಾಗಾಗಿ, ರಾತ್ರಿ ಶುರುವಾಗುತ್ತಿದ್ದಂತೆ ಚಳಿ ಕಾಣಿಸಿಕೊಳ್ಳುತ್ತಿದೆ. ಮುಂಜಾನೆ ಇದರ ತೀವ್ರ ಇನ್ನಷ್ಟು ಹೆಚ್ಚಿರುತ್ತದೆ. ಮುಂದಿನ 2 ದಿನ ಬೆಂಗಳೂರಿನಲ್ಲಿ ಕನಿಷ್ಠ ಮತ್ತು ಗರಿಷ್ಠ ತಾಪಮಾನ ಕ್ರಮವಾಗಿ 25 ಮತ್ತು 15 ಡಿ.ಸೆ. ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ. ಸೋಮವಾರ ಕನಿಷ್ಠ ತಾಪಮಾನದಲ್ಲಿ 14 ಡಿ.ಸೆ.ಉಷ್ಣಾಂಶ ದಾಖಲಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿದ ಪರಿಣಾಮ ನಗರದಲ್ಲಿ ಡಿ.21ರಿಂದ ಮತ್ತೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ.
932 ಮಿಮೀ ಮಳೆ: ರಾಜಧಾನಿಯಲ್ಲಿ ಮೂರು ವರ್ಷದ ಬಳಿಕ ಈ ಬಾರಿ ಉತ್ತಮ ಮಳೆ ಸುರಿದಿದೆ. ಮುಂಗಾರು, ಹಿಂಗಾರು ಅವಧಿಯಲ್ಲಿ ವಾಡಿಕೆಗಿಂತ ಅಧಿಕ ವರ್ಷಧಾರೆಯಾಗಿದೆ. 2024ರ ಜ.1ರಿಂದ ಡಿ.16ರವರೆಗೆ ನಗರದಲ್ಲಿ ವಾಡಿಕೆಯಂತೆ 842 ಮಿಮೀ ಮಳೆಯಾಗಬೇಕಿತ್ತು. ಆದರೆ, 932 ಮಿಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.11 ಅಧಿಕವಾಗಿ ಸುರಿದಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ನೀಡಿರುವ ಅಂಕಿಅಂಶಗಳಿಂದ ತಿಳಿದು ಬಂದಿದೆ.
ಆರೋಗ್ಯ ಬಗ್ಗೆ ಎಚ್ಚರ: ಚಳಿ ಹಿನ್ನೆಲೆಯಲ್ಲಿ ವಾಯುವಿಹಾರ, ವ್ಯಾಯಾಮಕ್ಕೆ ಹೋಗುವವರು ತುಂಬ ಎಚ್ಚರಿಕೆಯಿಂದ ಇರಬೇಕು. ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರು, ಎಲಬು&ಕೀಲು ನೋವಿನಿಂದ ಬಳಲುತ್ತಿರುವವರು ಹೊರಹೋಗದಿರುವುದು ಉತ್ತಮ. ವಿಶೇಷವಾಗಿ ಮಕ್ಕಳು, ಹಿರಿಯ ನಾಗರಿಕರು ಆರೋಗ್ಯದ ಬಗ್ಗೆ ಗಮನಹರಿಸಬೇಕು. ಶೀತ, ನೆಗಡಿ, ಕೆಮ್ಮು ಮತ್ತು ಜ್ವರ ಸೇರಿ ಇತರ ಕಾಯಿಲೆಗಳು ಎದುರಾಗಲಿವೆ. ಕಾಲಿನ ಹಿಮ್ಮಡಿ, ತುಟಿ ಸೇರಿ ಕೈಕಾಲಿನ ಚರ್ಮ ಒಣಗಲಿದೆ. ಈ ಬಗ್ಗೆ ಜನರು ಅಗತ್ಯ ಮುನ್ನಚ್ಚರಿಕಾ ಕ್ರಮ ತೆಗೆದು ಕೈಗೊಳ್ಳಬೇಕು. ದೇಹವನ್ನು ಬೆಚ್ಚಗಿರಿಸಿಕೊಳ್ಳುವ ಜತೆಗೆ ಕುದಿಸಿ ಆರಿಸಿದ ನೀರು, ಬಿಸಿ, ಶುಚಿಯಾದ ಆಹಾರ ಸೇವಿಸಬೇಕು. ಫ್ರೀಡ್ಜ್ನಲ್ಲಿ ಹೆಚ್ಚು ಹೊತ್ತು ಇಟ್ಟ ಆಹಾರವನ್ನು ಸೇವಿಸಬಾರದು. ದೂಳಿನಿಂದ ದೂರವಿದ್ದು, ಚೆನ್ನಾಗಿ ಒಣಗಿಸಿದ ಬಟ್ಟೆಯನ್ನು ಮೈ ತುಂಬಾ ಧರಿಸುವುದು ಸೂಕ್ತ.
ಕಳೆದ ವರ್ಷ ಮಳೆ ಕೊರತೆಯಿಂದಾಗಿ ನಗರದಲ್ಲಿ ಚಳಿ ಇರಲಿಲ್ಲ. ಈ ಬಾರಿ ವಾಡಿಕೆಗಿಂತ ಅಧಿಕ ಚಳಿ ಕಾಣಿಸಿಕೊಂಡಿದೆ. ನವೆಂಬರ್ ಮತ್ತು ಪ್ರಸಕ್ತ ತಿಂಗಳಲ್ಲಿ ಸೈಕ್ಲೋನ್ ಉಂಟಾದ ಕಾರಣದಿಂದ ಥಂಡಿ ಹೆಚ್ಚಳವಾಗಿದೆ.
| ಡಾ.ಶ್ರೀನಿವಾಸ ರೆಡ್ಡಿ. ಹವಾಮಾನ ತಜ್ಞ.