

ಬೆಂಗಳೂರು: ಸೋನಿಯಾ ಗಾಂಧಿಯವರನ್ನು ಓಲೈಸುವ ನೆಪದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದ ಪೋಪ್ ಆಗುವುದಕ್ಕೆ ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ವಿ. ಸುನೀಲ್ ಕುಮಾರ್ ಟೀಕಿಸಿದ್ದಾರೆ.
ಜಾತಿಗಣತಿ ಹೆಸರಿನಲ್ಲಿ ಅನಗತ್ಯ ಗೊಂದಲಗಳನ್ನು ಮುಖ್ಯಮಂತ್ರಿಯವರು ಪದೇಪದೆ ಮಾಡುತ್ತಿದ್ದಾರೆ. ಸಮಾಜವನ್ನು ಒಡೆಯುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಹಿಂದೂ ಉಪ ಜಾತಿಗಳಲ್ಲಿ 47 ಉಪಜಾತಿಗಳಿಗೆ ಕ್ರಿಶ್ಚಿಯನ್ ಎಂದು ಸೃಷ್ಟಿ ಮಾಡಿದ್ದಾರೆ. ಇದಕ್ಕೆ ಪ್ರಬಲವಾಗಿ ವಿರೋಧಗಳು ವ್ಯಕ್ತವಾಗುತ್ತಿದ್ದರೂ ಸರ್ಕಾರ ಮೊಂಡುವಾದಕ್ಕೆ ನಿಂತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದು ಯಾವ ಯಾವ ಅಭಿಪ್ರಾಯಗಳು ಬರುತ್ತದೆ ಎಂದು ಚರ್ಚೆ ಮಾಡಬೇಕು ಹಾಗೂ ರಾಜ್ಯದಲ್ಲಿರುವ ಸಕಲ ಸಮಾಜಗಳ ಸಭೆಯನ್ನು ಕರೆದು, ಅವರೆಲ್ಲರ ಅಭಿಪ್ರಾಯ ಪಡೆದು ಮತ್ತು ಸಹಮತವನ್ನು ಕ್ರೋಡೀಕರಿಸಿಕೊಂಡು ಬೇಸಿಗೆ ಕಾಲದಲ್ಲಿ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮಾಡುವುದು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಹೇಳಿದರು.
ಜಾತಿ ಸಮೀಕ್ಷೆಯಂಥ ಐಡಿಯಾವನ್ನು ಸಿದ್ದರಾಮಯ್ಯಗೆ ಯಾರು ಕೊಡುತ್ತಾರೆ ಗೊತ್ತಿಲ್ಲ. ಆದರೆ ಇದು ಎಡಪಂಥೀಯರ ಕುತಂತ್ರ ಎಂದು ಕೆಲವರು ನನಗೆ ಹೇಳಿದ್ದಾರೆ. ಎಡಪಂಥೀಯರಿಗೆ ತಲೆ ಜಿಡ್ಡು ಹಿಡಿದಿದೆ. ಕಾಂಗ್ರೆಸ್ಸಿನವರಿಗೆ ತಲೆಯೇ ಇಲ್ಲ. ಅದಕ್ಕಾಗಿ ಎಡಪಂಥೀಯರ ವಿಚಾರಗಳನ್ನು ಪಡೆದು ಇವರು ಜನರ ಮೇಲೆ ಹೇರಲು ಹೊರಟಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.
ಸಮೀಕ್ಷೆಗೂ ಜನಗಣತಿಗೂ ವ್ಯತ್ಯಾಸವಿದೆ. ಜನಗಣತಿಯನ್ನು ರಾಜ್ಯ ಸರ್ಕಾರ ಮಾಡಲು ಸಾಧ್ಯವಿಲ್ಲ. ಅದೇನಿದ್ದರೂ ಕೇಂದ್ರ ಸರ್ಕಾರ ಮಾಡಬೇಕು. ಈ ಸಮೀಕ್ಷೆ ಹೆಸರಿನಲ್ಲಿ ಜನಗಣತಿ ಮಾಡಲು ಮುಂದಾಗಿದ್ದಾರೆ ಎಂದು ಆಕ್ಷೇಪಿಸಿದರು.