

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣವನ್ನೆಲ್ಲ ಅಧಿಕಾರಿಗಳ ತಲೆಗೆ ಕಟ್ಟಿ ಮುಚ್ಚಿ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹುನ್ನಾರ ಹೂಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಮಂಡಲ ಅಧಿವೇಶನದಲ್ಲಿ ಪ್ರತಿಪಕ್ಷಗಳು ನಿಲುವಳಿ ಸೂಚನೆ ಮಂಡಿಸಿರುವುದು, ಎಸ್ ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಾದ ಹಣ ವಾಪಸ್ ಸರ್ಕಾರದ ಖಜಾನೆಗೆ ಸೇರಬೇಕು. ದುರ್ಬಳಕೆ ಮಾಡಿದವರ ವಿರುದ್ಧ ಕಾನೂನು ಕ್ರಮವಾಗಬೇಕು ಎಂಬ ಕಾರಣಕ್ಕೆ ಎಂದು ಸಮಜಾಯಿಷಿ ನೀಡಿದರು.
ಹಗರಣದ ಬಗ್ಗೆ ಬಿಜೆಪಿ ಸುಮ್ಮನೆ ಆರೋಪ ಮಾಡಿಲ್ಲ. 40 ಪುಟಗಳ ದಾಖಲೆ, ಅಧಿಕಾರಿಗಳಿಬ್ಬರ ಸಂಭಾಷಣೆ ಕ್ಲಿಪ್ಪಿಂಗ್ ಸಹಿತ ಚರ್ಚಿಸಿದ್ದೇವೆ. ಆದರೆ ಸದನದಲ್ಲಿ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ ಎಂದು ಟೀಕಿಸಿದರು.
ಎಲ್ಲವೂ ಅಧಿಕಾರಿಗಳೇ ಮಾಡಿದ್ದೇ ಎನ್ನುತ್ತೀರಿ. ನಿಮ್ಮ ಪರಿಭಾಷೆಯಲ್ಲಿ ಕೇಳುವುದಾದರೆ ನೀವೇನು ಕತ್ತೆ ಕಾಯುತ್ತಿದ್ದೀರಾ ? ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರರಿಂದ ರಾಜೀನಾಮೆ ಪಡೆದಿದ್ದೇಕೆ ?. ಸಿದ್ದರಾಮಯ್ಯ, ಶಿವಕುಮಾರ್, ಸುರ್ಜೆವಾಲಾ ತನಿಖಾ ತಂಡ ರಚಿಸಿದ್ದರ ಔಚಿತ್ಯವೇನು ? ಎಂದು ಆರ್.ಅಶೋಕ್ ಪ್ರಶ್ನಿಸಿದರು.
ರಾಜ್ಯ ಸರ್ಕಾರದ ಹಣ ಫಟಾಫಟ್ ಅಂತ ಕಳ್ಳ ಖಾತೆಗೆ ಅಲ್ಲಿಂದ ತೆಲಂಗಾಣಕ್ಕೆ ವರ್ಗಾವಣೆಯಾಗಿದೆ. ಇದರಲ್ಲಿ ಅನಗತ್ಯವಾಗಿ ಕೇಂದ್ರ ಸರ್ಕಾರ, ಕೇಂದ್ರ ಸಚಿವರನ್ನು ಎಳೆದು ತಂದಿದ್ದಾರೆ. ಸಿಎಂ, ಡಿಸಿಎಂ ಹೆಸರು ಹೇಳಲು ನಾಗೇಂದ್ರ ಮೇಲೆ ಒತ್ತಡ ತಂದಿದ್ದಾರೆ ಎನ್ನುತ್ತಿದ್ದಾರೆ. ಇದನ್ನು ಹೇಳಿದವರು ಯಾರು ? ಅವರಿಗೆ ಹೇಗೆ ಗೊತ್ತಾಯಿತು ? ಎಂದು ಕೇಳಿದರು.
ಅಕ್ರಮವಾಗಿ ವರ್ಗಾವಣೆಯಾದ ಹಣ ಚುನಾವಣೆಗೆ ಬಳಕೆಯಾಗಿದೆ ಎಂದು ಇಡಿಯವರು ಪ್ರಕಟಣೆ ನೀಡಿದ್ದಾರೆ. ಮಾಜಿ ಸಚಿವ ನಾಗೇಂದ್ರರನ್ನು ಜೈಲಿಗೆ ಕಳುಹಿಸಿದ್ದಾರೆ. ಶಾಸಕ ಬಸನಗೌಡ ದದ್ದಲ್ ವಿಚಾರಣೆ ಮಾಡಿದ್ದಾರೆ. ಕ್ಲೀನ್ ಚಿಟ್ ನೀಡುತ್ತಿದ್ದೀರಿ. ತಾಕತ್ತಿದ್ದರೆ ಇ.ಡಿಯವರ ವಿರುದ್ಧ ಕೇಸ್ ದಾಖಲಿಸಿ ಎಂದು ಆರ್.ಅಶೋಕ್ ಸವಾಲು ಹಾಕಿದರು.
ಬಿಜೆಪಿ ಆಡಳಿತದ ಕಾಲದಲ್ಲಿ 21 ಹಗರಣಗಳಾಗಿವೆ ಎಂದು ಪಟ್ಟಿ ನೀಡಿದ್ದಾರೆ. ಪ್ರತಿಪಕ್ಷ ನಾಯಕರಾಗಿ ಸದನದಲ್ಲಿ ಇದನ್ನೆಲ್ಲ ಚರ್ಚಿಸಲಿಲ್ಲ. ಹೊರಗೂ ಧ್ವನಿ ಎತ್ತಲಿಲ್ಲ. ನೀವು ಅಧಿಕಾರಕ್ಕೆ 15 ತಿಂಗಳಾದವು 40 ಪರ್ಸೆಂಟ್ ಆರೋಪದ ತನಿಖಾ ವರದಿ ಇನ್ನೂ ಹೊರ ಬಂದಿಲ್ಲ. ಹಗರಣಗಳ ಬಗ್ಗೆ ತನಿಖೆ ನಡೆಸಿ, ಕ್ರಮವಹಿಸಿರಿ. ಇಂತಹ ಗೊಡ್ಡು ಬೆದರಿಕೆಗಳಿಗೆ ಬಿಜೆಪು ಹೆದರಲ್ಲ ಎಂದರು.
ನೀವು 21 ಹಗರಣಗಳ ಬಗ್ಗೆ ಹೇಳಿದ್ದೀರಿ. ನಾವು ಕಾಂಗ್ರೆಸ್ ನ 70 ಹಗರಣಗಳ ಬಗ್ಗೆ ದಾಖಲೆ ಸಹಿತ ಪುಸ್ತಕವನ್ನೇ ಪ್ರಕಟಿಸಿದ್ದೇವೆ ಎಂದ ಆರ್.ಅಶೋಕ್, ಹಗರಣಕ್ಕೆ ಬೆಚ್ಚಿ ಬಿದ್ದ ಸಿಎಂ ಸಿದ್ದರಾಮಯ್ಯ ಜಾತಿ ಶೆಲ್ಟರ್ ತೆಗೆದುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.