

ಬೆಂಗಳೂರು: ಪೌರಾಣಿಕ, ಆಧ್ಯಾತ್ಮಿಕ ಪ್ರಸಿದ್ಧ ಕ್ಷೇತ್ರ, ಪ್ರವಾಸಿ ತಾಣವಾದ ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ಸರ್ಕಾರದ ನೀಲಿನಕ್ಷೆ ಸಿದ್ಧವಿದೆ. ಅಭಿವೃದ್ಧಿಗೆ ಬೇಕಾದ 77.28 ಎಕರೆ ಜಮೀನಿನ ಕೊರತೆ ಅಡ್ಡಿಯಾಗಿರುವುದನ್ನು ಸಿಎಂ ಸಿದ್ದರಾಮಯ್ಯ ಗಮನಿಸಿದರು.
ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆ ಬುಧವಾರ ನಡೆಸಿದ ಅವರು, ತಲಾ 100 ಕೋಟಿ ರೂ.ನಂತೆ ಎರಡು ಹಂತಗಳಲ್ಲಿ ಒಟ್ಟು 200 ಕೋಟಿ ರೂ ಬಿಡುಗಡೆಯಾಗಿದ್ದರೆ, 10 ಕೋಟಿ ರೂ. ವೆಚ್ಚವಾಗಿದ್ದರೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಪ್ರವಾಸಿಗರು, ಯಾತ್ರಿಕರು ಸಂಖ್ಯೆ ವರ್ಷಕ್ಕಿಷ್ಟು ಹೆಚ್ಚುತ್ತಿರುವುದನ್ನು ಪರಿಗಣಿಸಿ ಅಭಿವೃದ್ಧಿ ರೂಪರೇಷೆ ಸಿದ್ಧಪಡಿಸಲಾಗಿದೆ. ಒಟ್ಟು 101.30 ಎಕರೆ ಬೇಕಾಗಿದ್ದು, ಇದರಲ್ಲಿ 77.28 ಎಕರೆ ಖಾಸಗಿ ಜಮೀನು ಖರೀದಿಸಬೇಕಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದರು.
ಖಾಸಗಿ ಜಮೀನು ಖರೀದಿಗೆ ಈಗಿರುವ ಅನುದಾನ ಸಾಲುವುದಿಲ್ಲವೆಂದಾಗ ಹೆಚ್ಚುವರಿ ಆರ್ಥಿಕ ನೆರವು ಒದಗಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿ, ಅಭಿವೃದ್ಧಿ ಕಾಮಗಾರಿಗಳಿಗೆ ವೇಗದ ಸ್ಪರ್ಶ ನೀಡಬೇಕು ಎಂದು ಸೂಚಿಸಿದರು.
ಹನುಮ ಜಯಂತಿ ಸಂದರ್ಭದಲ್ಲಿ ಲಕ್ಷಾಂತರ ಜನರು ಬೆಟ್ಟಕ್ಕೆ ಭೇಟಿ ನೀಡುತ್ತಅರೆ. ಉತ್ತರ ಭಾರತದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಯಾತ್ರಿಕರು ಉಳಿದುಕೊಳ್ಳಲು ಧರ್ಮಛತ್ರ, ಹಿರಿಯ ಭಕ್ತರಿಗೆ ಬೆಟ್ಟವೇರಲು ಮೆಟ್ಟಿಲುಗಳ ವ್ಯವಸ್ಥೆ, ಸಮುದಾಯ ಭವನ ನಿರ್ಮಾಣ ಇತರ ಪ್ರವಾಸಿ ಸೌಲಭ್ಯಗಳನ್ನು ಒದಗಿಸಿ ಅಭಿವೃದ್ಧಿಪಡಿಸಲು ತಿಳಿಸಿದರು.
ಮಂಜೂರಾಗಿರುವ ಬಹುತೇಕ ಕಾಮಗಾರಿಗಳು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಜಮೀನುಗಳಲ್ಲಿವೆ. ಹೀಗಾಗಿ ಅರಣ್ಯ ಇಲಾಖೆ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯಲು ಅಗತ್ಯ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಪ್ರಸಕ್ತ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಅಂಜನಾದ್ರಿ ಬೆಟ್ಟವೂ ಸೇರಿ ರಾಜ್ಯದ 11 ಪ್ರವಾಸಿ ತಾಣಗಳಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ರೋಪ್‌ವೇಗಳನ್ನು ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ, ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಪ್ರವಾಸೋದ್ಯಮ ಇಲಾಖೆ ಹಿರಿಯ ಅಧಿಕಾರಿಗಳು ಇದ್ದರು.