ಬೆದರಿಸಿ, ಜೀವ ಬೆದರಿಕೆಯೊಡ್ಡಿ ಅನಗತ್ಯ ನನ್ನ ಹೆಸರು ಹೇಳುವಂತೆ ಕಿರುಕುಳ ಕೊಟ್ಟಿದ್ದಾರೆ: ಸಿಎಂ ಸಿದ್ದರಾಮಯ್ಯ

ವಿಜಯವಾಣಿ - 2024-07-23T155022.381
Published on

ಬೆಂಗಳೂರು: ನಾವು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ನಡೆದಿಲ್ಲ ಎಂದು ಹೇಳಿಲ್ಲ. ವಿರೋಧ ಪಕ್ಷದವರು ಪದೇ ಪದೇ 187.33 ಕೋಟಿ ರೂ.ಗಳ ದುರುಪಯೋಗವಾಗಿದೆ ಎಂದು ಆರೋಪಿಸಿದ್ದಾರೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಂ.ಜಿ ರಸ್ತೆ ಶಾಖೆಯಿಂದ ತೆಲಂಗಾಣಕ್ಕೆ ಹೋಗಿರುವುದು 89.63 ಕೋಟಿ ರೂ.ಗಳು. ಎಸ್ಐಟಿ ರಚನೆಯಾದ ಮೇಲೆ ತ್ವರಿತವಾಗಿ ತನಿಖೆ ಕೈಗೊಂಡಿದ್ದಾರೆ. ಈಗಾಗಲೇ 12 ಜನರನ್ನು ಬಂಧಿಸಿದ್ದು, ಬೇರೆ ಬೇರೆ ಜನರು ಹಂಚಿಕೊಂಡಿದ್ದ ಮೊತ್ತದಲ್ಲಿ 34 ಕೋಟಿ ರೂಪಾಯಿ ನಗದನ್ನು ಹಿಂಪಡೆದಿದ್ದಾರೆ. ಒಟ್ಟು 85.25 ಕೋಟಿ ಹಿಂಪಡೆದು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಅಕ್ರಮವಾಗಿರುವುದು 85.63 ಕೋಟಿಗಳು. ಎಸ್.ಐ.ಟಿ ಅವರು ಶೇ.95% ತನಿಖೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

"ಅಕ್ರಮವಾಗಲು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ, ಉಪವ್ಯವಸ್ಥಾಪಕರು, ಕ್ರೆಡಿಟ್ ಅಧಿಕಾರಿಗಳು ಕಾರಣ ಎಂದು ಬ್ಯಾಂಕಿನಿಂದ ದೂರು ನೀಡಲಾಗಿದ್ದು ಸಿಬಿಐ ತನಿಖೆ ಮಾಡುತ್ತಿದೆ. ಅವರೇನು ಮಾಡಿದ್ದಾರೆಂದು ತಿಳಿದಿಲ್ಲ. ಇ.ಡಿಯವರು ಸ್ವಯಂ ಪ್ರೇರಿತವಾಗಿ ತನಿಖೆ ಪ್ರಾರಂಭ ಮಾಡಿದ್ದು, ನಾಗೇಂದ್ರ ಹಾಗೂ ದದ್ದಲ್ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ನಾಗೇಂದ್ರರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನದಲ್ಲಿಟ್ಟಿದ್ದಾರೆ. ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ, ಹೆಚ್ಚುವರಿ ನಿರ್ದೇಶಕ ಕಲ್ಲೇಶ್ ಎಂಬುವರು ಹೇಳಿಕೆಯನ್ನು ಕೊಟ್ಟಿದ್ದರೂ ಇವರೇ ಆದೇಶ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಹಾಗೂ ಇತರೆ ಸಚಿವರ ಹೆಸರನ್ನು ಬರೆದು ಕೊಡುವಂತೆ ಒತ್ತಾಯ ಮಾಡಿದ್ದಾರೆ" ಎಂದು ಬಿಜೆಪಿ ವಿರುದ್ಧ ನೇರ ವಾಗ್ದಾಳಿ ನಡೆಸಿದರು.

"ಬಜೆಟ್​ನಲ್ಲಿ ಒಮ್ಮೆ ಅನುಮೋದನೆಯಾದ ಮೇಲೆ ಅನುದಾನ ಕಾರ್ಯದರ್ಶಿಗಳಿಗೆ, ಅಲ್ಲಿಂದ ಅದನ್ನು ನಿರ್ದೇಶಕರಿಗೆ ಹಾಗೂ ನಿರ್ದೇಶಕರು ಅನುದಾನವನ್ನು ವ್ಯವಸ್ಥಾಪಕ ನಿರ್ದೇಶಕರಿಗೆ ಕೊಡುತ್ತಾರೆ. ಇದು ಪ್ರಕ್ರಿಯೆ. ಜಾರಿ ನಿರ್ದೇನಾಲಯದವರು ಕಲ್ಲೇಶ್ ಅವರಿಗೆ ಹೆದರಿಸಿ, ಬೆದರಿಸಿ, ಜೀವ ಭಯ ಉಂಟು ಮಾಡಿ ಅನಗತ್ಯವಾಗಿ ನನ್ನ ಹೆಸರು ಹೇಳುವಂತೆ ಕಿರುಕುಳ ನೀಡಿದ್ದಾರೆ. ಪ್ರಕರಣದಲ್ಲಿ ಕಾನೂನಿನ ಪ್ರಕಾರ ನನ್ನ ಮೇಲೆ ಆರೋಪ ಬರುವಂತೆ ಮಾಡಲು ಒತ್ತಾಯಿಸಿದ್ದಾರೆ. ಕಲ್ಲೇಶ್ ದೂರು ನೀಡಿ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಏನೇನು ನಡೆಯಿತು ಎಂದು ಹೇಳಿದ್ದಾರೆ" ಎಂದರು.

"ಒಟ್ಟಾರೆಯಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿದೆ. ಅವರ ಉದ್ದೇಶ ನನ್ನ ಮತ್ತು ಸರ್ಕಾರದ ವರ್ಚಸ್ಸನ್ನು ಹಾಳು ಮಾಡಬೇಕು ಎನ್ನುವುದು. ನಮ್ಮ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿರುದ್ಧವಿದೆ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸಲು ಹೀಗೆ ಮಾಡುತ್ತಿದ್ದಾರೆ. ನಾವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ದುರ್ಬಲ ವರ್ಗದವರ, ಬಡವರ, ರೈತರ, ಕಾರ್ಮಿಕರ ಪರವಾಗಿ ಇದ್ದೇವೆ. ಆದರೂ ಹೇಗಾದರೂ ಮಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿರಬಾರದು, ದುರ್ಬಲಗೊಳಿಸಬೇಕೆಂಬ ಉದ್ದೇಶದಿಂದ ವಾಮಮಾರ್ಗವನ್ನು ಅನುಸರಿಸುತ್ತಿದ್ದಾರೆ" ಎಂದರು.

"ಆರ್ಥಿಕ ಇಲಾಖೆಯಾಗಲೀ, ನಾನಾಗಲೀ ಈ ಹಗರಣಕ್ಕೆ ಸಂಬಂಧಪಟ್ಟಿಲ್ಲ. ಹಗರಣ ಆಗಿದೆ ಎಂದು ತನಿಖೆ ಮಾಡಿಸುತ್ತಿದ್ದೇವೆ. ಮೃತ ಚಂದ್ರಶೇಖರ್ ಅವರ ಪತ್ನಿ ಕವಿತಾ ಅವರು ನೀಡಿರುವ ದೂರು, ಪದ್ಮನಾಭ ಅವರ ದೂರಿನನ್ವಯ ತನಿಖೆ ಸರಿಯಾದ ದಾರಿಯಲ್ಲಿ ಸಾಗಿದೆ. ಆದರೆ ಬಿಜೆಪಿ ಅಧಿಕಾರದ ಅವಧಿಯಲ್ಲಿ ನಡೆದಿರುವ ಭೋವಿ ಅಭಿವೃದ್ಧಿ ನಿಗಮ, ದೇವರಾಜ ಅರಸ್ ಟ್ರಕ್ ಟರ್ಮಿನಲ್, ಎಪಿಎಂಸಿ ಹಾಗೂ ಕೋವಿಡ್ ಹಗರಣಗಳಲ್ಲಿ ಇ.ಡಿ ಬರಲೇ ಇಲ್ಲ. ಬಿಜೆಪಿ ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಹೇಳುತ್ತಿದೆ. ಅವರು ವಿರೋಧಪಕ್ಷದಲ್ಲಿದ್ದಾಗ ಸಿಬಿಐ ಅನ್ನು ಚೋರ್ ಬಚಾವ್ ಸಂಸ್ಥೆ ಎನ್ನುತ್ತಿದ್ದರು. ಅವರ ಸರ್ಕಾರ ಕೇಂದ್ರದಲ್ಲಿರುವುದರಿಂದ ಸಿಬಿಐಗೆ ವಹಿಸುವಂತೆ ಒತ್ತಾಯಿಸುತ್ತಿದ್ದಾರೆ. ನಾವು ಈ ಹಿಂದೆ ಅನೇಕ ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆವು. ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕಿನ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಪರೇಶ್ ಮೆಹ್ತಾ, ಡಿ.ಕೆ.ರವಿ, ಗಣಪತಿ, ಒಂದಂಕಿ ಲಾಟರಿ ಪ್ರಕರಣಗಳನ್ನು ಸಿಬಿಐಗೆ ವಹಿಸಲಾಗಿದೆ. ಸರ್ಕಾರ ವಿವೇಚನೆಯನ್ನು ಆಧರಿಸಿ ಪ್ರಕರಣಗಳನ್ನು ವಹಿಸುತ್ತದೆ" ಎಂದು ಹೇಳಿದರು.

"ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗಸೂಚಿಗಳ ಪ್ರಕಾರ 25 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತವಿದ್ದರೆ ಸಿಬಿಐ ತನಿಖೆ ಮಾಡಬಹುದು. ತನಿಖೆಗೆ ನಮ್ಮ ತಕರಾರಿಲ್ಲ. ಆದರೆ ಕಾನೂನು ಬಾಹಿರವಾಗಿ ತನಿಖೆ ಮಾಡುವುದನ್ನು ಖಂಡಿಸುತ್ತೇವೆ. ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಮಾಡುತ್ತಿದ್ದು ಇದನ್ನು ಖಂಡಿಸಲು ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿಯೂ ಇದನ್ನು ನಾವು ಪ್ರಸ್ತಾಪಿಸಲಿದ್ದೇವೆ" ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net