

ಬೆಂಗಳೂರು: ಕರೊನಾ ನಿಯಂತ್ರಣಕ್ಕಾಗಿ ಅಗತ್ಯ ಸವಲತ್ತು ಕಲ್ಪಿಸಿದ್ದರೂ ಸೋಂಕಿತರು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಅಲೆದಾಡುತ್ತಿರುವ ದೂರುಗಳು ಬರುತ್ತಿವೆ. ಜನ ಸಾಯ್ತಾ ಇದ್ದಾರೆ, ಆದರೆ, ನೀವು ಮಾನವೀಯತೆ ಮರೆತು ವರ್ತಿಸುತ್ತಿದ್ದೀರಿ ಎಂದು ಅಧಿಕಾರಿಗಳ ಮೇಲೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹರಿಹಾಯ್ದಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಬೆಳಗ್ಗೆಯಿಂದ ಸಂಜೆಯವರೆಗೆ ವಲಯವಾರು ಸರಣಿ ಸಭೆಗಳನ್ನು ನಡೆಸಿದ ಅವರು, ಸೋಂಕು ಕಾಲಿಟ್ಟಾಗಿನಿಂದಲೂ ನಿಮಗೆಲ್ಲ (ಅಧಿಕಾರಿಗಳು) ಮುಕ್ತ ಅವಕಾಶ ನೀಡಿರುವೆ. ಆದರೂ ಮನಸ್ಸಿಟ್ಟು ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: ವಾಹನಗಳಲ್ಲಿ ಇನ್ನು ಹೆಚ್ಚುವರಿ ಟೈಯರ್ ಅವಶ್ಯಕತೆ ಇಲ್ಲ!
ಪ್ರಮುಖ ಸೂಚನೆಗಳ 1 ರೋಗಲಕ್ಷಣ ಇಲ್ಲದ, ಯಾವುದೇ ಇತರ ಕಾಯಿಲೆಗಳಿಲ್ಲದ ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸಿ ಅನಗತ್ಯ ದಟ್ಟಣೆ ಉಂಟುಮಾಡಬಾರದು. ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳು, ಚಿಕಿತ್ಸೆಯ ಅಗತ್ಯವಿರುವವರಿಗೆ ಕೂಡಲೇ ಸಿಗುವಂತಹ ವ್ಯವಸ್ಥೆ ರೂಪಿಸಬೇಕು. 2 ಪರೀಕ್ಷೆಯಲ್ಲಿ ಒಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಲ್ಲಿ ಕೂಡಲೇ ಅವರನ್ನು ಆಸ್ಪತ್ರೆಗೆ ಅಥವಾ ಕೇರ್ ಸೆಂಟರ್ಗೆ ವರ್ಗಾಯಿಸಲು ಕ್ರಮ ಕೈಗೊಳ್ಳಬೇಕು. ಆ ಮೂಲಕ ಸೋಂಕು ಇನ್ನಷ್ಟು ಹರಡುವ ಸಾಧ್ಯತೆಗಳನ್ನು ತಪ್ಪಿಸಬೇಕು. ಜನರಲ್ಲಿ ಆತಂಕ ಉಂಟಾಗದಂತೆ ಎಚ್ಚರ ವಹಿಸಬೇಕು. ಗಂಭೀರ ಪರಿಸ್ಥಿತಿಯಲ್ಲಿರುವ ಸೋಂಕಿತರಿಗೆ ತರಬೇತಿ ಹೊಂದಿದ ವೈದ್ಯರಿಂದ ಚಿಕಿತ್ಸೆ ದೊರೆಯುವುದನ್ನು ಖಾತರಿ ಪಡಿಸಿ ಆ ಮೂಲಕ ಸಾವಿನ ಸಂಖ್ಯೆ ತಗ್ಗಿಸಬೇಕು. 3 ರೋಗಲಕ್ಷಣ ಇರುವವರಿಗೆ ಕೂಡಲೇ ಚಿಕಿತ್ಸೆ ನೀಡು ವುದು ಹಾಗೂ ಸೋಂಕಿತರ ಪ್ರಾಣ ಉಳಿಸುವುದು ಆದ್ಯ ಕರ್ತವ್ಯ. ಸಂರ್ಪತರ ಪತ್ತೆ ಹಚ್ಚುವ ಕಾರ್ಯ ಪರಿಣಾಮಕಾರಿಯಾಗಿಸಿ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡದಂತೆ ಎಚ್ಚರಿಕೆ ವಹಿಸಬೇಕು. 4 ಸಂರ್ಪತರು ಕ್ವಾರಂಟೈನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಅಧಿಕಾರಿಗಳು ಖಾತ್ರಿ ಪಡಿಸಿಕೊಳ್ಳಬೇಕು. ನಿತ್ಯ ಅವರ ಮನೆಗೆ ಭೇಟಿ ನೀಡಿ ಅವರ ಸ್ಥಿತಿಗತಿ ವಿಚಾರಿಸಬೇಕು. 5 ಕರೊನಾ ಆಸ್ಪತ್ರೆಗಳ ನಿರ್ವಹಣೆ, ಆಹಾರ ಪೂರೈಕೆ, ಸ್ವಚ್ಛತೆ, ಚಿಕಿತ್ಸೆ ಮೊದಲಾದ ವಿಷಯಗಳ ಕುರಿತು ಹೆಚ್ಚಿನ ಗಮನ ಕೊಡಬೇಕು.ಭೇಟಿ ಕಾಲಕ್ಕೆ ವ್ಯವಸ್ಥೆಗಳಲ್ಲಿ ಯಾವುದೇ ಲೋಪದೋಷಗಳಿದ್ದರೆ ಸರಿಪಡಿಸಬೇಕು.
ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ: ಪದೇಪದೆ ಸಭೆ ಕರೆದು ಹೇಳುವುದು, ಕೇಳುವುದಕ್ಕೆ ನಾನಿಲ್ಲಿ ಕುಳಿತಿಲ್ಲ. ಕರೊನಾ ನಿಯಂತ್ರಣ ವಿಷಯದಲ್ಲಿ ಇನ್ನು ಮುಂದೆ ಯಾವುದೇ ದೂರು ಬಂದರೂ ಸಹಿಸಲ್ಲ. ಜವಾಬ್ದಾರಿ ಹೊತ್ತ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ನಿರ್ದಾಕ್ಷಿಣ್ಯ ಕ್ರಮ ವಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಏನಾದರೂ ಸಮಸ್ಯೆಯಿದ್ದರೆ ವಲಯದ ಉಸ್ತುವಾರಿ ಸಚಿವರ ಗಮನಕ್ಕೆ ತಂದು ತಕ್ಷಣವೇ ಬಗೆಹರಿಸಿಕೊಳ್ಳಬೇಕು. ಅದನ್ನೇ ನೆಪ ಮಾಡಿಕೊಂಡು ಕಾಲಹರಣ ಮಾಡಿದರೆ ಸಹಿಸುವುದಿಲ್ಲ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳೇ ಹೊಣೆ: ಕರೊನಾ ಸೋಂಕು ತಗುಲಿರುವುದು ದೃಢಪಟ್ಟ ಕೂಡಲೇ ಆಂಬುಲೆನ್ಸ್ ಬರುವುದು ವಿಳಂಬ ಅಥವಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ವಿನಾ ಕಾರಣ ನಿರಾಕರಿಸಿದಲ್ಲಿ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.
ಜಾಹೀರಾತು ಕೊಡಿ: ಸಹಾಯವಾಣಿಗೆ ಕರೆ ಬಂದ ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕಿದೆ. ಸೋಂಕಿತರು ಯಾವ ವಿಷಯಕ್ಕೆ ಯಾವ ಸಹಾಯವಾಣಿಗೆ ಕರೆ ಮಾಡಬೇಕು ಎನ್ನುವುದರ ಕುರಿತು ಜಾಹೀರಾತು ನೀಡಬೇಕು ಎಂದು ಯಡಿಯೂರಪ್ಪ ಸೂಚಿಸಿದರು. ಹೈಕೋರ್ಟ್ ಅನುಮತಿ ನೀಡಿರುವ ಕಾರಣ ವಾರ್ಡ್ಗಳಲ್ಲಿ ಕರೊನಾ ಬಗ್ಗೆ ಮಾಹಿತಿ ನೀಡುವ ಫಲಕಗಳನ್ನು ಹಾಕಬೇಕು ಎಂದರು.
ಪ್ರತಿದಿನ ಒಂದು ಲಕ್ಷ ಟೆಸ್ಟ್: ಹೆಚ್ಚೆಚ್ಚು ತಪಾಸಣೆ, ಸೋಂಕಿತರಿಗೆ ಸಕಾಲಿಕ ಚಿಕಿತ್ಸೆ, ರೋಗಲಕ್ಷಣರಹಿತ ಸಂರ್ಪತರಿಗೆ ಕಟ್ಟುನಿಟ್ಟಿನ ಕ್ವಾರಂಟೈನ್ ನಿಂದ ಕರೊನಾ ನಿಯಂತ್ರಣ ಸಾಧ್ಯವಿದೆ. ಸದ್ಯಕ್ಕೆ ಪ್ರತಿದಿನ 48,000 ಟೆಸ್ಟ್ಗಳನ್ನು ಮಾಡುವ ಸಾಮರ್ಥ್ಯವಿದ್ದು ಮುಂದಿನ 15 ದಿನಗಳೊಳಗೆ ಪ್ರತಿದಿನದ ಕರೊನಾ ತಪಾಸಣೆ ಗುರಿ 1 ಲಕ್ಷಕ್ಕೆ ತಲುಪಿಸುವ ಗುರಿಯಿದೆ. ಅದೇ ರೀತಿ 24 ತಾಸುಗಳಲ್ಲಿ ತಪಾಸಣಾ ಫಲಿತಾಂಶ ಪಡೆಯುವುದಕ್ಕೂ ಆದ್ಯತೆ ನೀಡಬೇಕು ಎಂದು ಯಡಿಯೂರಪ್ಪ ಹೇಳಿದರು.
ರಾಜರಾಜೇಶ್ವರಿನಗರ, ದಾಸರಹಳ್ಳಿ, ಬೊಮ್ಮನಹಳ್ಳಿ ಹಾಗೂ ಮಹದೇವಪುರ ವಲಯಗಳ ಉಸ್ತುವಾರಿ ಸಚಿವರು, ಆರೋಗ್ಯ ಮತ್ತು ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಗುರುವಾರ ಮತ್ತು ಶುಕ್ರವಾರ ತಲಾ ಎರಡು ವಲಯಗಳ ಸಭೆ ನಡೆಯಲಿದೆ.
ವಾರಕ್ಕೊಮ್ಮೆ ವರದಿ ನೀಡಿ: ಪ್ರತಿ ವಾರಕ್ಕೊಮ್ಮೆ ಫಲಿತಾಂಶ ಸಹಿತ ಪ್ರಗತಿ ವರದಿಯನ್ನು ನೀಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಪ್ರತಿದಿನದ ಮಾಹಿತಿಯನ್ನು ಉಸ್ತುವಾರಿ ಸಚಿವರಿಗೆ ನೀಡಬೇಕು. ಕಂಟೇನ್ಮೆಂಟ್ ವಲಯಗಳಲ್ಲಿ ಯಾವುದೇ ಮುಲಾಜಿಗೆ ಒಳಗಾಗದೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬೆಂಗಳೂರು ಜನರ ರಕ್ಷಣೆ, ಜೀವನ ಸಹಜ ಸ್ಥಿತಿಗೆ ಮರಳುವುದು ಸೇರಿ ಆರ್ಥಿಕತೆ ಹಾಗೂ ಅಭಿವೃದಿಟಛಿ ಚಟುವಟಿಕೆಗಳನ್ನು ಸರಿದಾರಿಗೆ ತರಲೇಬೇಕು ಎಂದು ಸಿಎಂ ಹೇಳಿದರು.