

ವಿಜಯನಗರ: ಹೊಸಪೇಟೆಯಿಂದ ಕಂಪ್ಲಿಗೆ ತೆರಳುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದ್ದಕ್ಕಿದ್ದಂತೆ ಅರ್ಧಕ್ಕೇ ವಾಪಸ್ ಬಂದಿದ್ದಾರೆ. ಹಾಗೆ ಅವರು ಅರ್ಧ ದಾರಿಯಲ್ಲೇ ಮರಳಿ ಬರಲು ಕಾರಣ ಅದೊಂದು ಫೋನ್ ಕರೆ.
ಹೊಸಪೇಟೆಯಲ್ಲಿ ಬಿಜೆಪಿ ಕಾರ್ಯಕಾರಿಣಿ ಮುಗಿದ ಬಳಿಕ ವಿಜಯನಗರ ಜಿಲ್ಲೆಯ ಕಂಪ್ಲಿಯಲ್ಲಿ ಕೆರೆ ಹಾಗೂ ನೂತನ ಪೊಲೀಸ್ ಠಾಣೆ ಉದ್ಘಾಟನೆ ಮಾಡಲು ಮುಖ್ಯಮಂತ್ರಿಯವರು ಹೋಗಬೇಕಾಗಿತ್ತು. ಹೀಗಾಗಿ ಅವರು ಅಲ್ಲಿಂದ ಹೊರಟಿದ್ದರು.
ಆದರೆ ಅವರು ಹಾಗೆ ಹೊರಟ ಸ್ವಲ್ಪ ಸಮಯದಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕರೆ ಮಾಡಿದ್ದರು. ಫೋನ್ ಕರೆಗೆ ಪ್ರತಿಕ್ರಿಯಿಸಿದ ಸಿಎಂ, ಅರ್ಧದಲ್ಲೇ ತಿರುಗಿ ಮತ್ತೆ ಹೊಸಪೇಟೆಗೆ ತೆರಳಿದರು. ಈ ಬೆಳವಣಿಗೆ ಪಕ್ಷದ ಕಾರ್ಯಕರ್ತರು ಹಾಗೂ ಬಿಜೆಪಿ ವಲಯದಲ್ಲಿ ಕುತೂಹಲ ಕೆರಳಿಸಿದೆ. ಕರೆ ಮಾಡಿದ ಕಾರಣವೇನು, ವಿಷಯ ಯಾವುದು ಎನ್ನುವುದು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.