

ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಒಮಿಕ್ರಾನ್ ಕ್ಷಿಪ್ರಗತಿಯಲ್ಲಿ ಏರುತ್ತಿದ್ದರೆ, ಮತ್ತೊಂದೆಡೆ ಕರೊನಾ ಮೂರನೇ ಅಲೆಯ ಆತಂಕವೂ ಕಾಡುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಕರೊನಾ ಮೂರನೆಯ ಅಲೆಯ ವಾತಾವರಣ ಉಂಟಾಗಿದೆ ಎಂದು ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹೇಳಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇಂದು ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಕರೊನಾ ಹಾಗೂ ಒಮಿಕ್ರಾನ್ ತಡೆ-ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತಾಕೀತು ಮಾಡಿದರು.
ರಾಜ್ಯದಲ್ಲಿ ಕರೊನಾ ಮೂರನೇ ಅಲೆಯ ವಾತಾವರಣ ಕಾಣಿಸುತ್ತಿದೆ. ದೇಶದಲ್ಲಿ ಅತ್ಯಧಿಕ ಕೋವಿಡ್ ಪ್ರಕರಣ ಇರುವ 8ನೇ ರಾಜ್ಯ ಕರ್ನಾಟಕವಾಗಿದ್ದು, ಕರೊನಾ ಸೋಂಕಿನ ವಿಚಾರದಲ್ಲಿ ಈಗಾಗಲೇ ಕೇಂದ್ರ ಸರ್ಕಾರ ರಾಜ್ಯವನ್ನು ಗುರುತಿಸಿದೆ. ಹೀಗಾಗಿ ನಿಮ್ಮ ನಿಮ್ಮ ಜಿಲ್ಲೆಗಳಲ್ಲಿ ಬಹಳಷ್ಟು ಎಚ್ಚರಿಕೆ ಕ್ರಮಗಳು ಅವಶ್ಯಕವಾಗಿವೆ ಎಂದು ಸೂಚನೆ ನೀಡಿದರು.
ಈಗಾಗಲೇ ಸರ್ಕಾರದಿಂದ ಕೋವಿಡ್ ಕ್ರಮಗಳು ಜಾರಿಯಾಗಿವೆ, ಅದನ್ನು ಜನರು ಕಡ್ಡಾಯವಾಗಿ ಪಾಲಿಸುವಂತೆ ಕ್ರಮಕೈಗೊಳ್ಳಬೇಕು. ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಅಗತ್ಯ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು. ಬೆಡ್, ಆಕ್ಸಿಜನ್, ವೆಂಟಿಲೇಟರ್ ಸಮಗ್ರವಾಗಿ ಲಭ್ಯವಾಗುವಂತಿರಬೇಕು. ಆಸ್ಪತ್ರೆಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಆಗದ ರೀತಿ ಎಚ್ಚರಿಕೆ ವಹಿಸಬೇಕು ಎಂಬುದಾಗಿ ಅವರು ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.