

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ವಿವಿಧ ಬೇಡಿಕೆಗಳಿಗೆ ಮನ್ನಣೆ ಸಿಕ್ಕಿಲ್ಲ ಎಂದು ಆರೋಪಿಸಿ ದೈಹಿಕ ಶಿಕ್ಷಣ ಶಿಕ್ಷಕರು ಕೊಣಾಜೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಕಪ್ಪು ಪಟ್ಟಿ ಧರಿಸಿ ಭಾಗವಹಿಸಿದರು.
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ ಹಾಗೂ ದೇರಳಕಟ್ಟೆ ಕ್ಲಸ್ಟರ್ ವತಿಯಿಂದ ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಉಳ್ಳಾಲ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಪಂದ್ಯಾಕೂಟದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಕಪ್ಪುಬಟ್ಟೆ ಧರಿಸಿ ಭಾಗವಹಿಸುವ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.
ಸರ್ಕಾರ ನಿರ್ಲಕ್ಷೃ ಧೋರಣೆ ತಾಳಿದರೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ನಮ್ಮಿಂದ ತೊಂದರೆ ಆಗಬಾರದೆನ್ನುವ ನೆಲೆಯಲ್ಲಿ ಕ್ರೀಡಾಕೂಟಗಳಲ್ಲಿ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಆ.29ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯೊಂದಿಗೆ ಸಂಘದಿಂದ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಹಲವು ಶಿಕ್ಷಕರ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಮೈಸೂರು ವಿಭಾಗ ಕಾರ್ಯಾಧ್ಯಕ್ಷ ತ್ಯಾಗಮ್ ಹರೇಕಳ ಹೇಳಿದರು.
ಮಂಗಳೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್ ಶೆಟ್ಟಿ ಮಾತನಾಡಿ, ದೈಹಿಕ ಶಿಕ್ಷಣ ಶಿಕ್ಷಕರ ಬೇಡಿಕೆಗಳು ನ್ಯಾಯಯುತವಾಗಿದ್ದು, ನಾವೂ ಬೆಂಬಲ ಸೂಚಿಸಿದ್ದೇವೆ. ಸೇವಾ ಹಿರಿತನದಲ್ಲಿ ಸಮಾನ ಹುದ್ದೆ ಮತ್ತು ಸಮಾನ ವೇತನ ಇರುವ ಶಿಕ್ಷಕರ ಮಧ್ಯೆ ತಾರತಮ್ಯ, ಅಸಮಾನತೆ ಇರಬಾರದು. ಸಹಶಿಕ್ಷಕರಿಗೆ ಸಿಗುವ ಎಲ್ಲ ಸೌಲಭ್ಯಗಳು ದೈಹಿಕ ಶಿಕ್ಷಣ ಶಿಕ್ಷಕರಿಗೂ ಸಿಗಬೇಕು ಎಂದರು.
ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ಕ್ರೀಡಾಕೂಟ ಉದ್ಘಾಟಿಸಿದರು. ದೇರಳಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಸದಸ್ಯ ಮಹಮ್ಮದ್ ಹನೀಫ್, ಮುಖ್ಯಶಿಕ್ಷಕ ಮೇಬಲ್ ಗ್ರೆಟ್ಟ ವೇಗಸ್, ಬಿಆರ್‌ಪಿ ತಹಸಿನ್, ಸಿಆರ್‌ಪಿ ಹರೀಶ್, ಗೀತಾ ಶೆಟ್ಟಿ, ರೆಹನ, ನೋಡಲ್ ಶಿಕ್ಷಕ ಟೈಟಸ್ ಡಿಸೋಜ, ಶಿಕ್ಷಕಿ ವೀಣಾ ದೇಸ್ಸಾ ಮುಂತಾದವರು ಉಪಸ್ಥಿತರಿದ್ದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ರಾಧಾಕೃಷ್ಣರಾವ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಪರೀಕ್ಷಕಿ ಲಿಲ್ಲಿ ಪಾಯ್ಸ ಪ್ರಾಸ್ತಾವಿಕ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕರ ತಾಲೂಕು ಸಂಘದ ಕಾರ್ಯದರ್ಶಿ ಮೋಹನ್ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.