

ಬೈಂದೂರು: ಜೀವಿತಾವಧಿಯಲ್ಲಿ ನಾವು ಎಲ್ಲಿ ಹೋದರೂ ಅಲ್ಲಿನ ವಾತಾವರಣಕ್ಕೆ ಅನುಗುಣವಾಗಿ ಬದುಕಬೇಕಾಗುತ್ತದೆ. ವರ್ಷಗಳ ಇತಿಹಾಸವಿರುವ ಭಾರತ್ ಸೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಇದಕ್ಕೆ ಬೇಕಾದ ತರಬೇತಿ ಜತೆಗೆ ಮಾಹಿತಿ ನೀಡುತ್ತದೆ. ರಾಷ್ಟ್ರಪ್ರೇಮವಿರುವ ಯುವಜನರಿಗೆ ಅಲ್ಲಲ್ಲಿ ಶಿಬಿರ ಆಯೋಜಿಸಿ ಆ ಮೂಲಕ ಒಳ್ಳೆಯ ವಿಚಾರ ಹಾಗೂ ಜೀವನಾನುಭವ ಕಲಿಸುತ್ತದೆ ಎಂದು ಭಾರತ್ ಸೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ್ ಶೆಟ್ಟಿ ಹೇಳಿದರು.
ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಶನಿವಾರ ರಾಜ್ಯದ 31 ಜಿಲ್ಲೆಗಳಿಂದ ಆಗಮಿಸಿದ ಸುಮಾರು 250 ರೇಂಜರ್ಸ್ ಮತ್ತು ರೋವರ್ಸ್‌ಗಳಿಗೆ ಆಯೋಜಿಸಿದ ರಾಜ್ಯಮಟ್ಟದ ಕಡಲತೀರ ಚಾರಣ, ಪ್ರಕೃತಿ ಅಧ್ಯಯನ ಮತ್ತು ಸ್ವಚ್ಛತಾ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸ್ಥಳೀಯ ಸಂಸ್ಥೆ ಅಧ್ಯಕ್ಷ ನರಸಿಂಹ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಜಿಲ್ಲಾ ಸ್ಕೌಟ್ಸ್ ಆಯುಕ್ತ ಜನಾರ್ದನ ಕೊಡವೂರು, ಖಜಾಂಚಿ ಹರಿಪ್ರಸಾದ ರೈ, ಮಂಜುನಾಥ ಹೆಗ್ಡೆ, ಉಪ್ಪುಂದ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಶೆಟ್ಟಿ, ಸ್ಥಳಿಯ ಜೆಸಿಐ ವೈ.ಮಂಗೇಶ ಶ್ಯಾನುಭಾಗ, ಅಭಿಷೇಕ್, ಪುರುಷೋತ್ತಮದಾಸ್, ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಇದ್ದರು.
ಜಿಲ್ಲಾ ಕಾರ್ಯದರ್ಶಿ ಆನಂದ ಅಡಿಗ ಸ್ವಾಗತಿಸಿದರು. ಶಿಬಿರದ ನಾಯಕ ಪ್ರವೀಣ್ ಗಂಗೊಳ್ಳಿ ವರದಿ ವಾಚಿಸಿದರು. ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನ್ ಶೇಖರ್ ವಂದಿಸಿದರು. ಉಪನ್ಯಾಸಕ ಹರೀಶ ಕೋಟ್ಯಾನ್ ನಿರೂಪಿಸಿದರು.