ಕಣ್ಣು ಮುಚ್ಚಿದೆ ಸಿಸಿ ಕ್ಯಾಮರಾ

Bdk_CC Camera
Published on

ಬದಿಯಡ್ಕ: ಇತ್ತೀಚೆಗೆ ಹಾಡಹಗಲೇ ನೀರ್ಚಾಲು ಹೃದಯ ಭಾಗದಲ್ಲಿ ಮಹಿಳೆಯ ಕುತ್ತಿಗೆಯಿಂದ ಚಿನ್ನಾಭರಣ ದೋಚಿದ ಘಟನೆ ನಡೆದಿದ್ದು, ಕಳ್ಳರ ಪತ್ತೆಗೆ ಇದುವರೆಗೆ ಸಾಧ್ಯವಾಗಿಲ್ಲ. ನೀರ್ಚಾಲು ಪೇಟೆಯ ಸಿಸಿ ಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ತನಿಖೆ ನಡೆಸುವಂತೆ ನಾಗರಿಕರು ಒತ್ತಾಯಿಸಿದ್ದರು. ಸಿಸಿ ಕ್ಯಾಮರಾ ಕಾರ್ಯನಿರ್ವಹಿಸುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. *ಸಿಸಿ ಕ್ಯಾಮರಾ ಹಿನ್ನೆಲೆ: ನೀರ್ಚಾಲು ಪೇಟೆಯಲ್ಲಿ ಐದು ವರ್ಷಗಳ ಹಿಂದೆ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನೀರ್ಚಾಲು ಘಟಕ ಐದು ಕ್ಯಾಮರಾ ಅಳವಡಿಸಿತ್ತು. ಬದಿಯಡ್ಕ ಪೊಲೀಸ್ ಠಾಣೆಗೆ ನೇರ ಸಂಪರ್ಕ ಕಲ್ಪಿಸಲು ವೈಫೈ, 32 ಇಂಚಿನ ಡಿಸ್ಪ್ಲೇ ಸಹಿತ ಐದು ಲಕ್ಷ ರೂ.ಗಳನ್ನು ವ್ಯಾಪಾರಿಗಳ ಸಂಘಟನೆಯೇ ಭರಿಸಿತ್ತು. ಜನರ ಸುರಕ್ಷತೆಗಾಗಿ ಸ್ವಂತ ವೆಚ್ಚದಲ್ಲಿ ನಿರ್ಮಿಸಿದ್ದ ಸಿಸಿ ಟಿವಿ ಕ್ಯಾಮರಾ ವ್ಯವಸ್ಥೆಯನ್ನು ನಿಭಾಯಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಇದೀಗ ಸುರಕ್ಷತೆ ಭೀತಿ ಹೆಚ್ಚಾಗಿದ್ದು, ಸಿಸಿ ಕ್ಯಾಮರಾ ವ್ಯವಸ್ಥೆ ಸರಿಪಡಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಲಕ್ಷಾಂತರ ರೂ.ವ್ಯಯಿಸಿ ಸಿಸಿ ಟಿವಿ, ಕ್ಯಾಮರಾ ವ್ಯವಸ್ಥೆಗೊಳಿಸಿತ್ತು. ಠಾಣೆಯಲ್ಲಿ ವೀಕ್ಷಿಸಲು ಡಿಸ್ಪ್ಲೇ ಅಳವಡಿಸಲಾಗಿತ್ತು. ಪೊಲೀಸರೇ ಬುಡಮೇಲುಗೊಳಿಸಿರುವುದು ಖಂಡನೀಯ. ಈ ಬಗ್ಗೆ ಉನ್ನತ ಪೊಲೀಸ್ ಅಧಿಕೃತರಿಗೆ ದೂರು ನೀಡಲಾಗುವುದು. ಸುಬ್ರಹ್ಮಣ್ಯ ಭಟ್, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನೀರ್ಚಾಲು ಘಟಕ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net