ಮೃತ ವೈದ್ಯರ ಹೆಸರಲ್ಲಿ ಕ್ಲಿನಿಕ್!; ವಿದೇಶಕ್ಕೆ ಹೋದವರ ಹೆಸರೂ ದುರ್ಬಳಕೆ, ರಿಜಿಸ್ಟ್ರಾರ್​ರಿಂದಲೇ ಅಕ್ರಮ..

Clinic
Published on

| ಹರೀಶ್ ಬೇಲೂರು ಬೆಂಗಳೂರು

ಮೃತಪಟ್ಟವರು, ಹೊರ ರಾಜ್ಯ ಹಾಗೂ ಹೊರದೇಶಕ್ಕೆ ಹೋಗಿರುವ ಅಸಲಿ ವೈದ್ಯರ ಹೆಸರಲ್ಲಿ ನಕಲಿ ವೈದ್ಯರಿಗೆ ಕ್ಲಿನಿಕ್ ಆರಂಭಿಸಲು ಹಾಗೂ ಚಿಕಿತ್ಸೆ ನೀಡಲು ಕರ್ನಾಟಕ ಆಯುರ್ವೆದಿಕ್ ಮತ್ತು ಯುನಾನಿ ವೈದ್ಯ ಮಂಡಳಿಯೇ (ಕೆಎಯುಪಿ) ಅನುಮತಿ ನೀಡಿರುವ ಕಳವಳಕಾರಿ ವಿಚಾರ ಬೆಳಕಿಗೆ ಬಂದಿದೆ. ಪ್ರತಿ ನೋಂದಣಿ ಪ್ರಮಾಣಪತ್ರಕ್ಕೆ ಅಂದಾಜು 4 ರಿಂದ 5 ಲಕ್ಷ ರೂ.ವರೆಗೆ ಲಂಚ ಪಡೆದು ನೂರಾರು ನಕಲಿ ವೈದ್ಯರಿಗೆ ಮಂಡಳಿಯ ರಿಜಿಸ್ಟ್ರಾರ್​ಗಳೇ ಪರವಾನಗಿ ವಿತರಿಸಿರುವುದು ಆಯುಷ್ ಇಲಾಖೆಯ ತಾಂತ್ರಿಕ ಸಮಿತಿಯ ಆಂತರಿಕ ಹಾಗೂ ಸಿಐಡಿ ತನಿಖೆಯಲ್ಲಿ ದೃಢಪಟ್ಟಿದೆ.

1998-99, 2000-01, 2009-10 ಹಾಗೂ 2018ರಿಂದ 2020ರ ಅವಧಿಯಲ್ಲಿ ಈ ಅವ್ಯವಹಾರ ನಡೆದಿದೆ. ವೈದ್ಯ ವೃತ್ತಿ ನಡೆಸಲು ಅರ್ಹತೆ ಹೊಂದಿಲ್ಲದ ಬೇನಾಮಿ ವ್ಯಕ್ತಿಗಳು ಕಾನೂನುಬಾಹಿರವಾಗಿ ವೈದ್ಯರ ನೋಂದಣಿ ಪ್ರಮಾಣಪತ್ರ ಪಡೆದು ಕ್ಲಿನಿಕ್​ಗಳನ್ನು ತೆರೆದು ಚಿಕಿತ್ಸೆ ನೀಡುತ್ತಿದ್ದಾರೆ. ರೋಗಿಗಳ ಜೀವದೊಂದಿಗೆ ಚೆಲ್ಲಾಟ ಆಡುವುದರ ಜತೆಗೆ ಕೋಟ್ಯಂತರ ರೂ. ಲೂಟಿ ಹೊಡೆಯುತ್ತಿದ್ದಾರೆ. ನಕಲಿ ವೈದ್ಯರ ಬಗ್ಗೆ ಸಿಐಡಿ ಹಾಗೂ ತಾಂತ್ರಿಕ ಸಲಹಾ ಸಮಿತಿ ಪ್ರತ್ಯೇಕವಾಗಿ ವರದಿಗಳನ್ನು ಕೊಟ್ಟಿದ್ದರೂ, ಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಉದಾಸೀನ ಧೋರಣೆ ಅನುಸರಿಸಿದೆ.

ನಿಯಮದ ಪ್ರಕಾರ ರಾಜ್ಯದಲ್ಲಿ ಮಾನ್ಯತೆ ಹೊಂದಿರುವ ಕಾಲೇಜುಗಳಲ್ಲಿ ಐದೂವರೆ ವರ್ಷ ಬ್ಯಾಚುಲರ್ ಆಫ್ ಆಯುರ್ವೆದಿಕ್ ಮೆಡಿಸಿನ್ ಆಂಡ್ ಸರ್ಜರಿ (ಬಿಎಎಂಎಸ್), ಬ್ಯಾಚುಲರ್ ಆಫ್ ಯುನಾನಿ ಮೆಡಿಸಿನ್ ಆಂಡ್ ಸರ್ಜರಿ (ಬಿಯುಎಂಎಸ್) ಹಾಗೂ ಬ್ಯಾಚುಲರ್ ಆಫ್ ಯೋಗ ಆಂಡ್ ನ್ಯಾಚುರೋಪಥಿ (ಬಿವೈಎಎಸ್) ಕೋರ್ಸ್ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಕೆಎಯುಪಿಯಲ್ಲಿ ನೋಂದಾಯಿಸಿ ಪ್ರಮಾಣಪತ್ರ, ಬಾರ್​ಕೋಡ್ ಮತ್ತು ಗುರುತಿನ ಚೀಟಿ ಪಡೆಯಬೇಕು. ಈವರೆಗೆ ಅಂದಾಜು 60 ಸಾವಿರ ವೈದ್ಯರು ಕೆಎಯುಪಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. 1965ರಿಂದ ಅರ್ಹ ವಿದ್ಯಾರ್ಹತೆ ಹೊಂದಿ ವೃತ್ತಿನಿರತರಾದ ವೈದ್ಯರಿಗೆ ಆಜೀವ ನೋಂದಣಿ ನೀಡುವ ನಿಯಮ ಜಾರಿಗೆ ತರಲಾಗಿತ್ತು. 

ಹೀಗಾಗಿ ಎಲ್ಲ ವೈದ್ಯರು ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿದ್ದರು. ಈ ನಿಯಮ ಜಾರಿಗೆ ಬಂದು 57 ವರ್ಷ ಕಳೆದಿದ್ದು, ಕೆಲವರು ಮೃತಪಟ್ಟಿದ್ದಾರೆ. ಅದೇ ರೀತಿ ಹೊರರಾಜ್ಯ ಹಾಗೂ ವಿದೇಶಕ್ಕೆ ಹೋದವರ ಹೆಸರಿನಲ್ಲಿ ವೈದ್ಯ ಪ್ರಮಾಣಪತ್ರಗಳನ್ನು ಕೊಡುವ ಅವ್ಯವಹಾರ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದಲೇ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ, ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ ಎನ್ನುವುದು ವೈದ್ಯರ ಆರೋಪ.

ಕಡತಗಳೇ ನಾಪತ್ತೆ!: 2018-19 ಮತ್ತು 2019-20ರ ಅವಧಿಯಲ್ಲಿ ಮಂಡಳಿ ನೋಂದಣಾಧಿಕಾರಿ ಹುದ್ದೆಯಿಂದ ಬಿಡುಗಡೆ ಹೊಂದುವ ಸಂದರ್ಭದಲ್ಲಿ ಎಲ್ಲ ಮ್ಯಾನ್ಯುಯಲ್ ವಹಿಗಳು, ರಿಜಿಸ್ಟರ್​ಗಳು ಸೇರಿ ಇತರ ದಾಖಲೆಗಳ ಸಂಪೂರ್ಣ ಕಾರ್ಯಭಾರವನ್ನು ಹೊಸದಾಗಿ ನೇಮಕಗೊಂಡಿರುವ ನೋಂದಣಾಧಿಕಾರಿಗೆ ನೀಡಬೇಕು. ನಕಲಿ ವೈದ್ಯರಿಗೆ ಮಾಡಲಾದ ಶಿಫಾರಸುಗಳನ್ನು ಪತ್ತೆ ಹಚ್ಚುವುದನ್ನು ತಪ್ಪಿಸಲು ವೆಂಕಟರಾಮಯ್ಯ, ಉದ್ದೇಶಪೂರ್ವಕವಾಗಿ ಕಡತಗಳನ್ನು ನಾಪತ್ತೆ ಮಾಡಿರುವುದರ ಬಗ್ಗೆ ತಾಂತ್ರಿಕ ಸಮಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಕಲಿ ವೈದ್ಯರಿಗೆ ಶಿಕ್ಷೆಯೇನು?: ಮೊದಲ ಬಾರಿಗೆ ಸಿಕ್ಕಿಬೀಳುವ ನಕಲಿ ವೈದ್ಯರಿಗೆ 25 ಸಾವಿರ ರೂ., 2ನೇ ಬಾರಿ ಸಿಕ್ಕಿ ಬಿದ್ದರೆ 2.5 ಲಕ್ಷ ರೂ. ಮತ್ತು 1 ವರ್ಷ ಜೈಲು ಶಿಕ್ಷೆ, 3ನೇ ಬಾರಿ ಸಿಕ್ಕಿಬಿದ್ದರೆ 5 ಲಕ್ಷ ರೂ. ದಂಡ, 3 ವರ್ಷ ಜೈಲು ಶಿಕ್ಷೆ ಇದೆ.

ಸಿಐಡಿ ತನಿಖೆಯಲ್ಲಿ ಗೊತ್ತಾಗಿದ್ದು...

  • 1998-99ರಲ್ಲಿ ಡಾ. ಶ್ರೀನಿವಾಸ ವರ್ವ, 2000-2001ರಲ್ಲಿ ಡಾ. ಹನುಮೇಗೌಡ ಹಾಗೂ 2009-10ರಲ್ಲಿ ವೆಂಕಟರಾಮಯ್ಯ ಕೆಎಯುಪಿಯಲ್ಲಿ ರಿಜಿಸ್ಟ್ರಾರ್ ಆಗಿದ್ದಾಗ ಅಕ್ರಮ
  • ನೂರಾರು ನಕಲಿ ವೈದ್ಯ ವಿದ್ವತ್ ಪ್ರಮಾಣಪತ್ರ ಕೊಟ್ಟಿರುವುದು ದೃಢಪಟ್ಟಿದೆ. ಕರ್ನಾಟಕ ಆಯುರ್ವೆದ ಮಿಸಲೇನಿಯಸ್ ಪ್ರಾವಿಷನಲ್ ಆಕ್ಟ್ ಪ್ರಕಾರ ಹೊರರಾಜ್ಯಗಳಿಂದ ವೈದ್ಯ ವಿಶಾರದ, ವೈದ್ಯ ವಿದ್ವಾನ್ ಮತ್ತು ಭಾಷಕ್ ಮುಂತಾದ ಪದವಿ ಮತ್ತು ಪ್ರಮಾಣಪತ್ರ ಪಡೆದವರಿಗೆ ಕೆಎಯುಪಿಯಲ್ಲಿ ನೋಂದಣಿ ಮಾಡಬಾರದೆಂಬ ನಿಯಮವಿದೆ. ಆದರೂ, 66 ವೈದ್ಯ ವಿದ್ವಾನ್​ಗಳಿಗೆ ಅಕ್ರಮವಾಗಿ ನೋಂದಣಿ ಮಾಡಿಕೊಟ್ಟು ನಕಲಿ ಪ್ರಮಾಣಪತ್ರಗಳನ್ನು ಡಾ. ಹನುಮೇಗೌಡ ವಿತರಿಸಿದ್ದಾರೆ.
  • ಮಂಡಳಿ ರಿಜಿಸ್ಟ್ರಾರ್ ಆಗಿದ್ದ ವೇಳೆ ಮತ್ತು ನಂತರದ ಅವಧಿಯಲ್ಲೂ ಡಾ. ಶ್ರೀನಿವಾಸ ವರ್ವ, 51 ನಕಲಿ ಪ್ರಮಾಣಪತ್ರಗಳನ್ನು ನೀಡಿದ್ದಾರೆ.
  • ಆಯುಷ್ ಇಲಾಖೆಯ ನೋಂದಣಾಧಿಕಾರಿಯಾಗಿದ್ದ ಡಾ. ವೆಂಕಟರಾಮಯ್ಯ, 117 ಜನರಿಗೆ ನಕಲಿ ಪ್ರಮಾಣಪತ್ರ ಕೊಟ್ಟಿದ್ದಾರೆ. ಈ ಪ್ರಮಾಣಪತ್ರಗಳನ್ನು ಹಿಂದಿನ ನೋಂದಣಾಧಿಕಾರಿಗಳು ಹಣಕ್ಕಾಗಿ ಕೊಟ್ಟಿದ್ದಾರೆ ಎಂದು ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದ್ದಾರೆಂದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ.
  • ಹೈಕೋರ್ಟ್ ರದ್ದುಪಡಿಸಿರುವ ಈ ಪ್ರಕರಣವನ್ನು ಮರು ಪರಿಶೀಲಿಸಿ ಮೇಲ್ಮನವಿ ಸಲ್ಲಿಸಲು ಸರ್ಕಾರ ಆದೇಶಿಸಬೇಕೆಂದು ಸಿಐಡಿ ತನಿಖೆಯಲ್ಲಿ ಉಲ್ಲೇಖವಾಗಿದೆ.

ನಕಲಿ ದಂಧೆ ಹೇಗೆ?

  • ಮೃತರು, ಹೊರ ರಾಜ್ಯ, ವಿದೇಶಕ್ಕೆ ತೆರಳಿದವರ ಕೆಎಯುಪಿ ನೋಂದಣಿ ರದ್ದಾಗುತ್ತದೆ. ಈ ಸಂಖ್ಯೆಯನ್ನು ಬೇರೆಯವರಿಗೆ ನೀಡುವಂತಿಲ್ಲ.
  • ರದ್ದಾದ ನೋಂದಣಿ ಸಂಖ್ಯೆ ಬಳಸಿಕೊಂಡು ನಕಲಿ ವೈದ್ಯರಿಗೆ ಪ್ರಮಾಣಪತ್ರ ವಿತರಣೆ
  • ಅಕ್ರಮ ಪ್ರಮಾಣಪತ್ರದಲ್ಲಿ ಹೆಸರು, ಭಾವಚಿತ್ರ ಅಂಟಿಸಿಕೊಂಡು ಕ್ಲಿನಿಕ್ ತೆರೆಯುವ ನಕಲಿ ವೈದ್ಯರು
  • ಕ್ಲಿನಿಕ್ ಮೇಲೆ ದಾಳಿ ನಡೆಸದಂತೆ ಮೇಲಧಿಕಾರಿಗಳಿಗೆ ಲಕ್ಷಾಂತರ ರೂ. ಲಂಚ ನೀಡುವ ನಕಲಿ ವೈದ್ಯರು

ತಾಂತ್ರಿಕ ಸಮಿತಿ ವರದಿಯಲ್ಲೇನಿದೆ?

  • 2018ರ ಆಗಸ್ಟ್​ರಿಂದ 2020ರ ಸೆಪ್ಟೆಂಬರ್​ವರೆಗೆ ಕೆಎಯುಪಿಗೆ 2ನೇ ಬಾರಿ ರಿಜಿಸ್ಟ್ರಾರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಸಂದರ್ಭದಲ್ಲಿಯೂ ಡಾ. ವೆಂಕಟರಾಮಯ್ಯ ನಕಲಿ ವೈದ್ಯರಿಗೆ ಪ್ರಮಾಣಪತ್ರ ಕೊಟ್ಟಿದ್ದಾರೆ.
  • ಬೇನಾಮಿ ವ್ಯಕ್ತಿಗಳ ಹೆಸರುಗಳನ್ನು ರಿಜಿಸ್ಟರ್​ನಲ್ಲಿ ಸೇರಿಸಲು ಮ್ಯಾನ್ಯುವಲ್ ನೋಂದಣಿ ರಿಜಿಸ್ಟರ್ ಅನ್ನೇ ಬದಲಾಯಿಸಿದ್ದಾರೆ.
  • 13 ನಕಲಿ ವೈದ್ಯರಿಗೆ ಕ್ಲಿನಿಕ್ ಪರವಾನಗಿ ಹೊಂದಲು ಅರ್ಹರು ಎಂದು ತುಮಕೂರು, ಬಳ್ಳಾರಿ ಮತ್ತು ಕೋಲಾರ ಜಿಲ್ಲೆಗಳ ಆಯುಷ್ ಅಧಿಕಾರಿಗಳಿಗೆ ಸುಳ್ಳು ಶಿಫಾರಸು ಪತ್ರ
  • ಒಂದೇ ಪದ್ಧತಿಯಲ್ಲಿ ಒಂದೇ ನೋಂದಣಿ ಸಂಖ್ಯೆಯನ್ನು ಒಬ್ಬರಿಗಿಂತ ಹೆಚ್ಚು ಜನರಿಗೆ ನೋಂದಣಿ ಮಾಡಿಕೊಟ್ಟಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net