ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಪೂರ್ವ ಸಮೀಕ್ಷೆಯ ವಿವರ ಹೊರಬಿದ್ದಿದ್ದು, ಪಂಚರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿರುವುದು ಕಂಡುಬಂದಿದೆ. ಇಂಡಿಯಾ ಟಿವಿ-ಸಿಎನ್ಎಕ್ಸ್ ನಡೆಸಿದ ಸಮೀಕ್ಷೆಯ ಮೊದಲ ಭಾಗದ ವಿವರ ಪ್ರಕಟಗೊಂಡಿದ್ದು, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ ಹಾಗೂ ಹಿಮಾಚಲಪ್ರದೇಶಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಭರ್ಜರಿ ಜಯ ಗಳಿಸುವುದು ಗೋಚರಿಸಿದೆ.
ಈ ಸಲ ಬಿಜೆಪಿ ಕೇರಳದಲ್ಲಿ ಖಾತೆ ತೆರೆಯಲಿದ್ದು, ತಮಿಳುನಾಡು ಸೇರಿ ದಕ್ಷಿಣದ ರಾಜ್ಯಗಳಲ್ಲಿ ಬಹಳಷ್ಟು ಸುಧಾರಣೆ ತೋರಲಿದೆ. ಉತ್ತರಪ್ರದೇಶದ 80 ಸ್ಥಾನಗಳ ಪೈಕಿ 77ರಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಜಯ ಗಳಿಸುವ ಸಾಧ್ಯತೆ ಅಧಿಕವಾಗಿದೆ. ಅದರಲ್ಲೂ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಬರೀ 3 ಸ್ಥಾನಗಳಿಗೆ ಸೀಮಿತವಾಗಲಿದೆ ಎಂದು ಈ ಸಮೀಕ್ಷೆ ಹೇಳಿದೆ. ಉತ್ತರಪ್ರದೇಶದ ರೋಹಿಲ್ಖಂಡದ 12 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದು, ಒಂದು ಕ್ಷೇತ್ರದಲ್ಲಷ್ಟೇ ಸಮಾಜವಾದಿ ಪಕ್ಷ ಮುಂದಿದೆ. ಬುಂದೇಲ್ಖಂಡದ ಎಲ್ಲ ನಾಲ್ಕು ಕ್ಷೇತ್ರಗಳಲ್ಲೂ
ಬಿಜೆಪಿ ಮುಂಚೂಣಿಯಲ್ಲಿದೆ. ‘ರಾಮಾಯಣ’ ಧಾರಾವಾಹಿಯ ರಾಮನ ಪಾತ್ರಧಾರಿ ಅರುಣ್ ಗೋವಿಲ್ ಮೇರಠ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದು, ವಿಐಪಿ ಕ್ಷೇತ್ರ ಎನಿಸಿರುವ ರಾಯ್ಬರೇಲಿಯಲ್ಲೂ ಬಿಜೆಪಿ ಮುಂದಿದೆ.
ಅಸ್ಸಾಂ-ಬಿಹಾರದಲ್ಲೂ ಪಾರಮ್ಯ: ಬಿಹಾರದ 40 ಕ್ಷೇತ್ರಗಳ ಪೈಕಿ ಎನ್ಡಿಎ 38 ಸ್ಥಾನಗಳಲ್ಲಿ ಗೆಲ್ಲಲಿದ್ದು, ಬಿಜೆಪಿಗೆ 17 ಹಾಗೂ ಜೆಡಿಯುಗೆ 14 ಸ್ಥಾನಗಳು ಲಭಿಸಲಿವೆ ಎಂದು ಸಮೀಕ್ಷೆ ಹೇಳಿದೆ. ಸಮೀಕ್ಷೆಯ ಸದ್ಯದ ವಿವರಗಳ ಪ್ರಕಾರ ಪಶ್ಚಿಮಬಂಗಾಳದಲ್ಲಿ ಬಿಜೆಪಿ 22 ಸ್ಥಾನಗಳಲ್ಲಿ ಮುಂದಿದ್ದರೆ, ಟಿಎಂಸಿ 19 ಸ್ಥಾನಗಳಲ್ಲಿ ಮುಂದಿದೆ. ಅಲ್ಲದೆ ನೈಋತ್ಯ ಬಂಗಾಳದಲ್ಲಿ ಬಿಜೆಪಿ 12 ಹಾಗೂ ಟಿಎಂಸಿ 5 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆ ಹೇಳಿದೆ. ಅಸ್ಸಾಮ್ 14 ಕ್ಷೇತ್ರಗಳಲ್ಲಿ ಬಿಜೆಪಿ 11ರಲ್ಲಿ ಜಯ ಗಳಿಸಲಿದೆ.
ಮುಂಚೂಣಿಯಲ್ಲಿ ಅಣ್ಣಾಮಲೈ: ತಮಿಳುನಾಡಿನಲ್ಲಿ ಎನ್ಡಿಎ ಮೈತ್ರಿಕೂಟ ಐದು ಸ್ಥಾನಗಳನ್ನು ಗಳಿಸಲಿದೆ. ಕೊಯಮತ್ತೂರು ಕ್ಷೇತ್ರದಿಂದ ಸ್ಪರ್ಧಿಸಿರುವ ಕೆ. ಅಣ್ಣಾಮಲೈ ಈ ಸಮೀಕ್ಷೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಮತ್ತೊಂದೆಡೆ ಶಿವಗಂಗಾ ಕ್ಷೇತ್ರದಲ್ಲಿ ಕಾರ್ತಿ ಚಿದಂಬರಂ ಮುಂದಿದ್ದಾರೆ ಎಂದು ಈ ಸಮೀಕ್ಷೆ ತಿಳಿಸಿದೆ. ಮಹಾರಾಷ್ಟ್ರದ 48 ಕ್ಷೇತ್ರಗಳ ಪೈಕಿ 27ರಲ್ಲಿ ಬಿಜೆಪಿ ಹಾಗೂ ಶಿವಸೇನೆ-ಶಿಂಧೆ ಬಣ 8 ಸ್ಥಾನಗಳನ್ನು ಗೆಲ್ಲಲಿದ್ದು, ಒಟ್ಟು 37 ಸ್ಥಾನ ಎನ್ಡಿಎ ಮೈತ್ರಿಕೂಟದ ಪಾಲಾಗಲಿದೆ ಎಂಬುದು ಸಮೀಕ್ಷೆಯಲ್ಲಿ ಕಂಡುಬಂದಿದೆ.
ಕ್ಯಾನ್ಸರ್ ಕಾರಣಕ್ಕೆ ಸುಶೀಲ್ ಸ್ಪರ್ಧಿಸಲ್ಲ: ಬಿಹಾರದ ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಕಳೆದ 6 ತಿಂಗಳಿನಿಂದ ಕ್ಯಾನ್ಸರ್ನಿಂದ ಬಳಲುತ್ತಿರುವುದಾಗಿ ಹೇಳಿದ್ದಲ್ಲದೆ, ಅದೇ ಕಾರಣಕ್ಕೆ ಮುಂದಿನ ಲೋಕಸಭಾ ಚುನಾವಣೆಗೂ ಸ್ಪರ್ಧಿಸುತ್ತಿಲ್ಲ ಎಂದು ಘೋಷಿಸಿದ್ದಾರೆ. ‘ಲೋಕಸಭಾ ಚುನಾವಣೆಗೆ ಏನನ್ನೂ ಮಾಡಲಾಗುತ್ತಿಲ್ಲ, ನಾನು ಎಲ್ಲವನ್ನೂ ಪ್ರಧಾನಿ ಮೋದಿಗೆ ತಿಳಿಸಿದ್ದೇನೆ’ ಎಂದಿದ್ದಾರೆ.
ಪ್ರಚಾರಕ್ಕಿಳಿದ ಜಯಲಲಿತಾ-ಕರುಣಾನಿಧಿ!: ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ದಿ. ಜಯಲಲಿತಾ, ದಿ. ಕರುಣಾನಿಧಿಯೂ ಈ ಸಲದ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ! ಅರ್ಥಾತ್, ಡಿಜಿಟಲ್ ರೂಪದಲ್ಲಿ ಅವತರಿಸಿರುವ ಅವರು ಮತ ಯಾಚನೆ ಆರಂಭಿಸಿದ್ದಾರೆ. ಅಂದರೆ, ಕೃತಕ ಬುದ್ಧಿಮತ್ತೆ ಹಾಗೂ ಡೀಪ್ಫೇಕ್ ಮುಂತಾದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ, ಸಾಕ್ಷಾತ್ ಅವರೇ ಎನ್ನುವಂಥ ವಿಡಿಯೋಗಳನ್ನು ಸೃಷ್ಟಿಸಿ ಆ ಮೂಲಕ ಭಾರಿ ಪ್ರಚಾರಕ್ಕೆ ರಾಜಕೀಯ ಪಕ್ಷಗಳು ಮುಂದಾಗಿವೆ. ಇಬ್ಬರು ಕಡುವಿರೋಧಿ ರಾಜಕಾರಣಿಗಳು ಹೀಗೆ ‘ಜೀವಂತ’ ಕಾಣಿಸಿಕೊಂಡಿರುವುದು ಪ್ರಚಾರಕ್ಕೂ ‘ಹೊಸ ಜೀವ’ ತುಂಬಿದೆ. ಎಐಎಡಿಎಂಕೆ ಪಕ್ಷದ ಜಯಲಲಿತಾ 2016ರಲ್ಲಿ ನಿಧನರಾಗಿದ್ದರೂ ಅವರೇ ಮಾತನಾಡಿರುವಂಥ ವಿಡಿಯೋ ಸೃಷ್ಟಿಸಲಾಗಿದ್ದು, ‘ನಾವು ಭ್ರಷ್ಟ ಮತ್ತು ನಿಷ್ಪ ್ರೊಜಕ ರಾಜ್ಯ ಸರ್ಕಾರವನ್ನು ಹೊಂದಿದ್ದೇವೆ. ನನ್ನೊಂದಿಗೆ ನಿಲ್ಲಿ, ನಾವು ಜನರಿಗಾಗಿಯೇ ಇರುವುದು..’ ಎಂದು ಆಕೆ ಅದರಲ್ಲಿ ಹೇಳಿದ್ದಾರೆ.
ಕರುಣಾನಿಧಿ 2018ರಲ್ಲಿ ಸಾವಿಗೀಡಾಗಿದ್ದರೂ, ಅವರನ್ನೂ ಡೀಪ್ಫೇಕ್ ಮೂಲಕ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ. ಅವರು ತಮ್ಮ ಪುತ್ರ, ಹಾಲಿ ಸಿಎಂ ಎಂ.ಕೆ.ಸ್ಟಾಲಿನ್ ಕುರಿತು ಮೆಚ್ಚುಗೆಯ ಮಾತನಾಡಿ ಮತ ಯಾಚಿಸುವ ದೃಶ್ಯ ಸೃಷ್ಟಿಸಲಾಗಿದೆ.
ಯಡಿಯೂರಪ್ಪ ಮಗನನ್ನು ಸೋಲಿಸಲು ಅಮಿತ್ ಷಾ ಆಶೀರ್ವಾದ ಸಿಕ್ಕಿದೆ: ಈಶ್ವರಪ್ಪ