ಕೆಪಿಸಿಸಿ ಅಧ್ಯಕ್ಷ ಗಾದಿ 3 ದಿನದಲ್ಲಿ ಸ್ಪಷ್ಟತೆ?: ಎಐಸಿಸಿ ಸ್ವಯಂ ಗಡುವು ಗುಲಾಂ, ಅಹ್ಮದ್ ಪಟೇಲ್ ಜತೆ ಸೋನಿಯಾ ಚರ್ಚೆ

Congress
Published on

ಬೆಂಗಳೂರು: ರಾಜ್ಯ ಕಾಂಗ್ರೆಸ್​ಗೆ ಅಧ್ಯಕ್ಷರ ನೇಮಕ ವಿಚಾರದಲ್ಲಿ ಅಖಿಲ ಭಾರತ ಕಾಂಗ್ರೆಸ್​ಗೆ ವಿಚಿತ್ರ ಧರ್ಮಸಂಕಟ ಎದುರಾಗಿದ್ದು, ಇನ್ನು ಮೂರು ದಿನದಲ್ಲಿ ಒಂದು ಸ್ಪಷ್ಟತೆ ತಂದುಕೊಳ್ಳಲು ಹೈಕಮಾಂಡ್ ಸ್ವಯಂ ಕಾಲಮಿತಿ ಹಾಕಿಕೊಂಡಿದೆ.

ಗುಂಪುಗಾರಿಕೆ, ನಾಯಕರ ನಡುವಿನ ಮೇಲಾಟದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸಂಘಟನೆ ಸಡಿಲಗೊಂಡು ಏಳು ತಿಂಗಳಾಗುತ್ತ ಬಂದಿದೆ. ಕೆಪಿಸಿಸಿ ಅಧ್ಯಕ್ಷರು ರಾಜೀನಾಮೆ ಕೊಟ್ಟು ಎರಡು ತಿಂಗಳು ಕಳೆದಿದೆ. ಇಷ್ಟಾದರೂ ಒಂದು ತೀರ್ವನಕ್ಕೆ ಬರಲು ಎಐಸಿಸಿಗೆ ಸಾಧ್ಯವಾಗಿಲ್ಲ.

ಈಗಿನ ಸಂದರ್ಭದಲ್ಲಿ ಪಕ್ಷದ ಜವಾಬ್ದಾರಿ ಹೊರಲು ಎಲ್ಲ ಆಯಾಮಗಳಲ್ಲೂ ಡಿ.ಕೆ.ಶಿವಕುಮಾರ್ ಸೂಕ್ತ ಎಂದು ಭಾವಿಸಿದ್ದ ವರಿಷ್ಠರು, ಅವರ ಹೆಸರನ್ನು ಅಂತಿಮಗೊಳಿಸಿದ್ದರು. ರಾಜ್ಯದ ಪ್ರಮುಖ ನಾಯಕರ ಗಮನಕ್ಕೂ ತಂದಿದ್ದರು. ಆದರೆ, ಡಿಕೆಶಿ ಎದುರಿಸುತ್ತಿರುವ ಜಾರಿ ನಿರ್ದೇಶನಾಲಯ, ತೆರಿಗೆ ಇಲಾಖೆ ಪ್ರಕರಣದ ಹಿನ್ನೆಲೆಯಲ್ಲಿ ಅವರಿಗೆ ಜವಾಬ್ದಾರಿ ಹೊರಿಸಿದರೆ ಮುಂದೇನಾಗಬಹುದೆಂಬ ಆತಂಕ ಹೈಕಮಾಂಡ್​ಗೆ ಕಾಡುತ್ತಿದೆ. ಹಾಗಾಗಿ ಮತ್ತೊಂದು ಸುತ್ತು ಆಪ್ತ ಬಳಗದಲ್ಲಿರುವ ಗುಲಾಂ ನಬಿ ಆಜಾದ್, ಅಹ್ಮದ್ ಪಟೇಲ್, ಕೆ.ಸಿ.ವೇಣುಗೋಪಾಲ್ ಜತೆ ರ್ಚಚಿಸಿ ಮೂರು ದಿನದೊಳಗೆ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

ಎರಡು ತಿಂಗಳಿಂದ ಯಾರನ್ನ ಅಧ್ಯಕ್ಷರನ್ನಾಗಿ ಮಾಡಬೇಕು? ಯಾರನ್ನ ಮಾಡಬಾರದು? ಎಂಬ ಪರ-ವಿರೋಧ ಲಾಬಿಗಳು ದೆಹಲಿಯಲ್ಲಿ ನಡೆದಿತ್ತು. ಇದೀಗ ಶೀಘ್ರವೇ ಅಧ್ಯಕ್ಷರನ್ನು ಘೋಷಿಸಿ, ಇಲ್ಲವಾದರೆ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ನಷ್ಟವಾಗುತ್ತದೆ ಎಂಬ ಒತ್ತಡ ಹೆಚ್ಚಾಗಿದೆ. ಎರಡು ದಿನಗಳ ಹಿಂದಷ್ಟೆ ದೆಹಲಿಗೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೂಡಲೇ ಅಧ್ಯಕ್ಷರನ್ನು ನೇಮಿಸಿ ಎಂದು ಒತ್ತಾಯಿಸಿ ಬಂದಿದ್ದಾರೆ.

ಪಕ್ಷದ ಮೂಲ ನಿವಾಸಿಗಳು ಮತ್ತು ಸಿದ್ದರಾಮಯ್ಯ ಬಣ ಎಂಬ ಎರಡು ಗುಂಪು ಸಮಬಲ ಹೊಂದಿರುವಾಗ ಬೇರೆ ಯಾರನ್ನೇ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದರೂ ಗೊಂದಲ ಸೃಷ್ಟಿಯಾಗಬಹುದು. ಮಾಜಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಅವಕಾಶ ಕೊಡುವ ಬಗ್ಗೆ ಚರ್ಚೆ ನಡೆದಿತ್ತಾದರೂ ಅವರೇ ಒಪ್ಪಿಲ್ಲ ಎನ್ನಲಾಗಿದೆ. ಹೀಗಾಗಿ ಪರ್ಯಾಯ ದಾರಿ ಕಾಣದೆ ಎಐಸಿಸಿ ದಿನ ದೂಡುತ್ತಿದೆ ಎಂದು ತಿಳಿದುಬಂದಿದೆ.

ಹಲವರಿಗೆ ಜವಾಬ್ದಾರಿ ಸಾಧ್ಯತೆ

ಸದ್ಯದ ಮಾಹಿತಿ ಪ್ರಕಾರ ಡಿ.ಕೆ.ಶಿವಕುಮಾರ್, ಸತಿಶ್ ಜಾರಕಿಹೊಳಿ, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ್, ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ್ ಅವರಿಗೆ ವಿವಿಧ ಜವಾಬ್ದಾರಿ ನೀಡುವ ಸಾಧ್ಯತೆ ಇದೆ. ಜತೆಗೆ ಪ್ರತಿಪಕ್ಷ ನಾಯಕ ಸ್ಥಾನ ಮತ್ತು ಶಾಸಕಾಂಗ ಪಕ್ಷದ ನಾಯಕ ಸ್ಥಾನವನ್ನು ಬೇರ್ಪಡಿಸುವ ಪ್ರಸ್ತಾವನೆ ಸದ್ಯಕ್ಕೆ ಕೈಬಿಡಲಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ನಷ್ಟ ಮಾಡಬೇಕು ಮತ್ತು ರಾಷ್ಟ್ರ ಮಟ್ಟದಲ್ಲಿ ಮುಜುಗರ ಮಾಡಬೇಕೆಂಬ ಉದ್ದೇಶದಿಂದಲೇ ಡಿಕೆಶಿ ಮೇಲೆ ಕ್ರಮಕೈಗೊಳ್ಳುವಂತೆ ಸರ್ಕಾರಿ ಯಂತ್ರದ ಮೇಲೆ ಬಿಜೆಪಿ ಒತ್ತಡ ಹಾಕುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ಹೈಕಮಾಂಡ್ ಯೋಚನೆ ಮಾಡುವಂತಾಗಿದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net