

ಬಳ್ಳಾರಿ: ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯಾಧ್ಯಕ್ಷೆ ಎಂದು ಹೇಳಿಕೊಂಡುಮಹಿಳೆಯೊಬ್ಬರು 8 ಮಂದಿಯನ್ನು ಮದುವೆಯಾಗಿ ಸಾಲ ಕೊಡಿಸುವದಾಗಿ ಹೇಳಿ 38 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಂಚಿಸಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಉಡುಪಿ ನಿವಾಸಿ ತಬುಸುಮ್ ತಾಜ್ (40) 8 ಜನರನ್ನು ಮದುವೆಯಾಗಿ ವಂಚಿಸಿದ್ದಾಳೆಂದು ತಿಳಿದು ಬಂದಿದ್ದು, ಈಕೆಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಹೀನಾ ಎಂಟರ್ಪ್ರೈಸಸ್ ಎಂಬ ಕಚೇರಿ ತೆರದಿದ್ದ ತಬುಸುಮ್ ಮುದ್ರಾ ಲೋನ್, ಸರ್ಕಾರಿ ನೌಕರಿ, ಮೈನಾರಿಟಿ ಲೋನ್, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೊಡಿಸುತ್ತೇನೆ. ಇದಲ್ಲದೆ ವಿಧಾನಸಭಾಧ್ಯಕ್ಷ ಖಾದರ್ ಬಳಿ ಬ್ಲ್ಯಾಕ್ ಮನಿ ಇದೆ. ಅದನ್ನ ವೈಟ್ ಮಾಡಲು ಈ ಬ್ಯುಸಿನೆಸ್ ಮಾಡುತ್ತಿದ್ದೇವೆ ಎಂದು ಜನರನ್ನು ನಂಬಿಸಿದ್ದಳು. 1 ಕೋಟಿ ರೂ. ಲೋನ್ ಬೇಕಾದರೆ 15 ಲಕ್ಷ ರೂ. ಕೊಡಬೇಕು ಎಂದು ಬೇಡಿಕೆ ಇಡುತ್ತಿದ್ದಳು. 10 ದಿನದಲ್ಲಿ ಲೋನ್ ಕೊಡಲಾಗುತ್ತೆ ಎಂದು ಭರವಸೆ ನೀಡಿ ವಂಚಿಸುತ್ತಿದ್ದರು.
ರಾಜ್ಯದಾದ್ಯಂತ ಸಾವಿರಾರು ಜನರಿಗೆ 38 ಕೋಟಿ ರೂ.ಗೂ ಅಧಿಕ ಹಣವನ್ನು ಮೋಸ ಮಾಡಿದ್ದಾಳೆಂದು ತಿಳಿದು ಬಂದಿದೆ. ಕ್ರಿಮಿನಲ್ ಲಾಯರ್ ಮೂಲಕ ದುಡ್ಡು ವಾಪಸ್ ಕೇಳುವವರಿಗೆ ಈಕೆ ಕೇಸ್ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕಿಸುತ್ತಿದ್ದಳಂತೆ. ಇದಲ್ಲದೆ ಚೆಕ್ ಬರೆಸಿಕೊಂಡು ಚೆಕ್ಬೌನ್ಸ್ ಕೇಸ್ ದಾಖಲಿಸುವ ಬೆದರಿಕೆ ಹಾಕಿದ್ದಳೆಂದು ತಿಳಿದುಬಂದಿದೆ. ಈಕೆಯ ವಿರುದ್ಧ ತುಮಕೂರು, ಭದ್ರಾವತಿ, ಶಿವಮೊಗ್ಗ, ಮಂಗಳೂರು, ಉಡುಪಿ, ಮಣಿಪಾಲ, ಕಾಪು, ವಿಜಯನಗರ ಜಿಲ್ಲೆಯ ಹಡಗಲಿ, ಹೊಸಪೇಟೆ ಬಡಾವಣೆ ಹಾಗೂ ಶಹತ ಪೊಲೀಸ್ ಠಾಣೆಯಲ್ಲಿ ಈಕೆಯ ವಿರುದ್ಧ ಚೆಕ್ಬೌನ್ಸ್ ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿವೆ.
ಈಕೆಯ ವಂಚನೆಯ ವಿಚಾರ ತಿಳಿದ ಆರನೇ ಪತಿ ರಾಜಾಹುಸೇನ್ ಈ ಬಗ್ಗೆ ತಬುಸುಮ್ ಬಳಿ ಪ್ರಶ್ನಿಸಿದ್ದಾನೆ. ಆತನ ಮೇಲೂ ಕೇಸ್ ದಾಖಲಿಸುವ ಬೆದರಿಕೆ ಹಾಕಿದ್ದಾಳೆ. ಈ ಬಗ್ಗೆ ಆತ ಪೊಲೀಸರಿಗೆ ದೂರು ನೀಡಿದ್ದು, ಈಕೆಯ ವಿರುದ್ಧ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಂಚನೆ ಕೇಸ್ ದಾಖಲಾಗಿರುವುದು ಬೆಳಕಿಗೆ ಬಂದಿದೆ.