

ಕೇರಳದ ಕೋಯಿಕ್ಕೋಡ್ನ ಕರಿಪ್ಪೂರ್ ವಿಮಾನ ನಿಲ್ದಾಣದ ರನ್ವೇದಲ್ಲಿ ಏರ್ ಇಂಡಿಯಾ ವಿಮಾನ ಅಪಘಾತವಾಗಿ 18 ಮಂದಿ ಮೃತಪಟ್ಟಿದ್ದು, 140ಕ್ಕೂ ಅಧಿಕ ಜನರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಮಾನ ಅಪಘಾತದಲ್ಲಿ ಗಾಯಗೊಂಡವರ ರಕ್ಷಣೆಗೆ ತೆರಳಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಈ ಏರ್ ಇಂಡಿಯಾ ವಿಮಾನದಲ್ಲಿದ್ದ ಇಬ್ಬರು ಪ್ರಯಾಣಿಕರಲ್ಲಿ ಕರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಮುಂಜಾಗೃತಾ ಕ್ರಮವಾಗಿ ರಕ್ಷಣೆಗೆ ಹೋಗಿದ್ದ ಸಿಐಎಸ್ಎಫ್ ತಂಡದವರು ಕ್ವಾರಂಟೈನ್ಗೆ ಒಳಗಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಏರ್ ಇಂಡಿಯಾ ವಿಮಾನ ಅಪಘಾತವಾದ ಬಳಿಕ ಅದರಲ್ಲಿದ್ದವರ ರಕ್ಷಣಾ ಕಾರ್ಯಾಚರಣೆ ನಡೆಸಿದ ಎಲ್ಲರೂ ಕ್ವಾರಂಟೈನ್ಗೆ ಹೋಗಿ ಎಂದು ಕೇರಳ ಆರೋಗ್ಯ ಇಲಾಖೆಯೇ ಸೂಚಿಸಿತ್ತು. ಕರೊನಾ ವೈರಸ್ ತಡೆಯಬೇಕೆಂದರೆ ಇದು ಅನಿವಾರ್ಯ ಎಂದು ಹೇಳಿತ್ತು.
ಶುಕ್ರವಾರ ರಾತ್ರಿ ದುಬೈನಿಂದ ಬಂದ ವಿಮಾನ ರನ್ವೇದಲ್ಲಿ ಜಾರಿ ಕಮರಿಗೆ ಬಿದ್ದು ಎರಡು ಹೋಳಾಗಿದೆ. ಈ ಅಪಘಾತದ ಸಂದರ್ಭದಲ್ಲಿ ಮೊದಲು ರಕ್ಷಣೆಗೆ ಧಾವಿಸಿದ್ದು ಸಿಐಎಸ್ಎಫ್ ಸಿಬ್ಬಂದಿ. ಇದನ್ನೂ ಓದಿ: ಅಭಿಷೇಕ್ ಬಚ್ಚನ್ ಕೋವಿಡ್ ವರದಿ ನೆಗೆಟಿವ್; ಶೀಘ್ರದಲ್ಲಿ ಮನೆ ಸೇರಲಿದ್ದಾರೆ ಜೂ. ಬಚ್ಚನ್
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಅಜಿತ್ ಸಿಂಗ್ ಅವರು ರನ್ ವೇ ಬಳಿಯೇ ಗಸ್ತು ತಿರುಗುತ್ತಿದ್ದರು. 35 ಅಡಿ ಆಳದ ಕಮರಿಗೆ ವಿಮಾನ ಬೀಳುತ್ತಿದ್ದಂತೆ ಸಿಐಎಸ್ಎಫ್ ಸಿಬ್ಬಂದಿ ಅಲ್ಲಿಗೆ ಧಾವಿಸಿದ್ದಾರೆ. ವಿಮಾನದಲ್ಲಿದ್ದ ಒಂದಿಬ್ಬರಲ್ಲಿ ಕರೊನಾ ಇರುವುದು ನಂತರ ದೃಢಪಟ್ಟಿದೆ. ಹಾಗಾಗಿ ನಮ್ಮ ಸಿಬ್ಬಂದಿಯನ್ನು ನಾವು ಕ್ವಾರಂಟೈನ್ ಆಗಲು ಸೂಚಿಸಿದ್ದೇವೆ ಎಂದು ಸಿಐಎಸ್ಎಫ್ ಸ್ಪೆಶಲ್ ಜನರಲ್ ಎಂ.ಎ.ಗಣಪತಿ ತಿಳಿಸಿದ್ದಾರೆ.
ಈ ಏರ್ಪೋರ್ಟ್ ಇರುವ ಕೊಂಡೊಟ್ಟಿಯಲ್ಲಿ ಕರೊನಾ ಪ್ರಮಾಣ ಹೆಚ್ಚಾಗಿದೆ. ಇದನ್ನು ಕಂಟೇನ್ಮೆಂಟ್ ಝೋನ್ ಎಂದು ಈಗಾಗಲೇ ಗುರುತಿಸಲಾಗಿದೆ. (ಏಜೆನ್ಸೀಸ್)