

ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ, ಕರೊನಾ ಸಮಯದಲ್ಲಿ ಸಂಕಷ್ಟಕ್ಕೀಡಾಗಿದ್ದ ಸಾವಿರಾರು ಜನರಿಗೆ ಸಹಾಯ ಹಸ್ತ ಚಾಚಿದ್ದರು. ಅವರ ಈ ಸೇವೆಯನ್ನು ಪರಿಗಣಿಸಿ ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ, ಇಬ್ಬರಿಗೂ ಮದರ್ ತೆರೇಸಾ ರಾಷ್ಟ್ರೀಯ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಭಾನುವಾರ ನಡೆದ ಕಾರ್ಯಕ್ರಮದಲ್ಲಿ ನಟಿ ಹರ್ಷಿಕಾ ಪೂಣಚ್ಚ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿದರು.
ಕರೊನಾ ಸಮಯದಲ್ಲಿ ಭುವನಂ ಫೌಂಡೇಷನ್ ಪ್ರಾರಂಭಿಸಿದ ಭುವನ್ ಮತ್ತು ಹರ್ಷಿಕಾ ರಾಜ್ಯದ ನಾನಾ ಭಾಗಗಳಿಗೆ ತೆರಳಿ ಜನರಿಗೆ ಸಹಾಯ ಮಾಡಿದ್ದರು. ಹಲವು ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ದವಸ, ಧಾನ್ಯ ನೀಡಿದ್ದರು. ಆಸ್ಪತ್ರೆಗಳಿಗೆ ಪಿಪಿಇ ಕಿಟ್, ಔಷಧ ಪೂರೈಸಿದ್ದರು. ಮಾತ್ರವಲ್ಲ ಕರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೂ ತೆರಳಿ ಅವರ ಜತೆ ಕುಣಿದು ಕುಪ್ಪಳಿಸಿದ್ದರು. ಮಾತ್ರವಲ್ಲ ಕೆಲಸ ಸಂಕಷ್ಟದಲ್ಲಿದ್ದ ಕೆಲವರಿಗೆ ಧನಸಹಾಯ ಹಾಗೂ ಕೆಲಸವನ್ನೂ ಕೊಡಿಸಿದ್ದರು.
ಹಾಗೆಯೇ ಮೊಬೈಲ್ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆಯನ್ನೂ ಮಾಡಿಸಿದ್ದರು. ಹೀಗೆ ತಮ್ಮದೇ ರೀತಿಯಲ್ಲಿ ಸುಮಾರು ಎರಡು ವರ್ಷ ಜನರ ನೋವಿಗೆ ಸ್ಪಂದಿಸಿದ್ದರು. ಜನಪರ ಕೆಲಸಗಳನ್ನು ಗುರುತಿಸಿ ಮದರ್ ತೆರೇಸಾ ಪ್ರಶಸ್ತಿ ದೊರೆತಿರುವ ಬಗ್ಗೆ ಸಂತಸ ಪ್ರತಿಕ್ರಿಯಿಸಿರುವ ನಟಿ ಹರ್ಷಿಕಾ ಪೂಣಚ್ಚ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಜನಪರ ಕೆಲಸಗಳನ್ನು ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.