

ಬೆಂಗಳೂರು: ಶಿವರಾಜಕುಮಾರ್ ಅಭಿನಯದಲ್ಲಿ ಸಂದೇಶ್ ನಾಗರಾಜ್ ಹೊಸ ಚಿತ್ರ ನಿರ್ವಿುಸುತ್ತಿದ್ದು, ಅದನ್ನು ಆರ್ಜೆ ಶ್ರೀನಿ ನಿರ್ದೇಶಿಸುತ್ತಿರುವ ವಿಷಯ ಗೊತ್ತೇ ಇದೆ. ಚಿತ್ರಕ್ಕೆ ಈಗಾಗಲೇ ‘ಘೋಸ್ಟ್’ ಎಂದು ಹೆಸರಿಟ್ಟಿದ್ದೂ ಆಗಿದೆ. ಬುಧವಾರ, ‘ಘೋಸ್ಟ್’ನ ಚಿತ್ರೀಕರಣ ಅಧಿಕೃತವಾಗಿ ಪ್ರಾರಂಭವಾಗಿದೆ.
ಈ ಚಿತ್ರದ ಚಿತ್ರೀಕರಣ ಬಹುತೇಕ ಸೆಟ್ನಲ್ಲೇ ನಡೆಯಲಿದ್ದು, ಮಿನರ್ವ ಮಿಲ್ನಲ್ಲಿ 15 ವಿಭಿನ್ನ ಸೆಟ್ಗಳನ್ನು ಹಾಗೂ ಮೈಸೂರಿನಲ್ಲಿ ನಾಲ್ಕು ಸೆಟ್ಗಳನ್ನು ನಿರ್ವಿುಸಲಾಗಿದೆಯಂತೆ. ಮೋಹನ್ ಬಿ ಕೆರೆ ಈ ಸೆಟ್ಗಳನ್ನು ನಿರ್ಮಾಣ ಮಾಡಿದ್ದಾರೆ. ಮೊದಲು ಬೆಂಗಳೂರಿನಲ್ಲಿ 24 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಆ ನಂತರ ಮೈಸೂರಿಗೆ ಚಿತ್ರತಂಡ ಶಿಫ್ಟ್ ಆಗಲಿದೆಯಂತೆ. ಒಟ್ಟಾರೆ, ಚಿತ್ರದ ಸೆಟ್ಗಳಿಗೆಂದೇ ಮೂರು ಕೋಟಿ ರೂ. ವೆಚ್ಚವಾಗಿದೆಯಂತೆ.
‘ಬೀರಬಲ್’, ‘ಓಲ್ಡ್ ಮಾಂಕ್’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನಿ, ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ ಕಥೆ-ಚಿತ್ರಕಥೆಯನ್ನೂ ಬರೆದಿದಾರೆ. ಇನ್ನು, ಮಾಸ್ತಿ ಮಂಜು ಮತ್ತು ಪ್ರಸ್ನನ್ನ ಅವರ ಸಂಭಾಷಣೆ ಇರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಮತ್ತು ಮಹೇಂದ್ರ ಸಿಂಹ ಛಾಯಾಗ್ರಹಣವಿದೆ.
ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರದ ವಿಶೇಷತೆಯೆಂದರೆ, ಮಲಯಾಳಂ ನಟ ಜಯರಾಂ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು. ಜತೆಗೆ ಅಭಿಜಿತ್, ದತ್ತಣ್ಣ, ಪ್ರಶಾಂತ್ ನಾರಾಯಣನ್ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.