ರಿಯಾಲಿಟಿ ಶೋಗೆ ಹರಿಪ್ರಿಯಾ; ಡಾನ್ಸ್ ಡಾನ್ಸ್ ಶೋದಲ್ಲಿ ಜಡ್ಜ್

Haripriya
Published on

ಸ್ಯಾಂಡಲ್​ವುಡ್ ನಟಿ ಹರಿಪ್ರಿಯಾ ಸಾಲುಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಆ ಬಿಡುವಿಲ್ಲದ ಕೆಲಸದ ನಡುವೆಯೂ ಇದೀಗ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಧಾರಾವಾಹಿಯೊಂದರಲ್ಲಿ ವಿಶೇಷ ಪಾತ್ರ ಮಾಡಿದ್ದ ಹರಿಪ್ರಿಯಾ, ಮೊದಲ ಸಲ ರಿಯಾಲಿಟಿ ಶೋದ ತೀರ್ಪಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಅದೂ ‘ಡಾನ್ಸ್ ಡಾನ್ಸ್’ ಶೋ ಮೂಲಕ ಎಂಬುದು ವಿಶೇಷ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ‘ಡಾನ್ಸ್ ಡಾನ್ಸ್’ ಶೋ ಪ್ರಾರಂಭವಾಗಲಿದ್ದು, ಕನ್ನಡದ ಜನಪ್ರಿಯ ತಾರೆಯರೇ ಈ ಕಾರ್ಯಕ್ರಮದ ತೀರ್ಪಗಾರರಾಗಿದ್ದಾರೆ. ಪ್ರಜ್ವಲ್ ದೇವರಾಜ್ ಸಹ ಮೊದಲ ಬಾರಿ ಶೋಗೆ ಪದಾರ್ಪಣೆ ಮಾಡಿದರೆ, ನೃತ್ಯ ನಿರ್ದೇಶಕರಾಗಿಯೇ ಹೆಚ್ಚು ಗುರುತಿಸಿಕೊಂಡು, ಸದ್ಯ ಸಿನಿಮಾ ನಿರ್ದೇಶನದಲ್ಲಿಯೇ ಸಕ್ರಿಯರಾಗಿರುವ ಎ. ಹರ್ಷ ಸಹ ಈ ಶೋದಲ್ಲಿ ತೀರ್ಪಗಾರರಾಗಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದ ಭಾಗವಾಗುತ್ತಿರುವುದಕ್ಕೆ ಅಷ್ಟೇ ಉತ್ಸಾಹದಲ್ಲಿದ್ದಾರೆ ಹರಿಪ್ರಿಯಾ. ‘ಈ ಮೊದಲೇ ಕಿರುತೆರೆಯ ಹಲವು ಶೋಗಳಿಗೆ ಜಡ್ಜ್ ಆಫರ್​ಗಳು ಬಂದಿದ್ದವು. ಅವುಗಳ ಪೈಕಿ ‘ಡಾನ್ಸ್ ಡಾನ್ಸ್’ ಶೋದ ಪರಿಕಲ್ಪನೆಯೇ ಇಷ್ಟವಾಯ್ತು. ಒಳಾಂಗಣ ಮತ್ತು ಹೊರಾಂಗಣದಲ್ಲಿಯೂ ಈ ಸ್ಪರ್ಧೆ ನಡೆಯಲಿದೆ. ನಟ-ನಟಿಯರು ಈ ಶೋದ ಸ್ಪರ್ಧಿಗಳಾಗಿರಲಿದ್ದಾರೆ. ಈಗಾಗಲೇ ಪ್ರೋಮೋ ಶೂಟ್ ಮುಗಿದಿದೆ. ಇನ್ನೇನು ಶೀಘ್ರದಲ್ಲಿ ಶೋ ಶುರುವಾಗಲಿದೆ’ ಎನ್ನುವ ಹರಿಪ್ರಿಯಾ ಸಿನಿಮಾದ ಜತೆಗೆ ಕಿರುತೆರೆ ಕ್ಷೇತ್ರ ಆಯ್ದುಕೊಂಡಿದ್ದೇಕೆ ಎಂಬುದಕ್ಕೂ ಉತ್ತರಿಸಿದ್ದಾರೆ. ‘ಕೋವಿಡ್ ಬಳಿಕ ಚಿತ್ರಮಂದಿರಕ್ಕೆ ಬರುವವರ ಸಂಖ್ಯೆ ತುಂಬ ಕಡಿಮೆಯಾದರೂ, ಟಿವಿ ಮೂಲಕ ಎಲ್ಲವನ್ನೂ ನೋಡಬಹುದು. ಈಗಲೂ ನೂರು ಜನರಲ್ಲಿ 10 ಜನ ಚಿತ್ರಮಂದಿರಕ್ಕೆ ಬರಲ್ಲ. ಹಳ್ಳಿಗಳಲ್ಲಿ ಚಿತ್ರಮಂದಿರಗಳಿಲ್ಲ. ಆದರೆ, ಟಿವಿ ಅವರೆಲ್ಲರನ್ನೂ ತಲುಪಬಹುದು. ನಾನು ಕಲಾವಿದೆ ಆಗಿರುವುದರಿಂದ ಮನರಂಜನೆ ನೀಡುವುದು ನನ್ನ ಉದ್ದೇಶ. ಸುಮಾರು ಸಿನಿಮಾಗಳ ನಡುವೆಯೂ ಈ ರಿಯಾಲಿಟಿ ಶೋ ಒಪ್ಪಿಕೊಂಡಿದ್ದೇನೆ’ ಎನ್ನುತ್ತಾರವರು. ಸದ್ಯ ‘ಲಗಾಮ್, ಪೆಟ್ರೋಮ್ಯಾಕ್ಸ್’, ತೆಲುಗಿನ ಎವರು ಚಿತ್ರದ ರಿಮೇಕ್, ‘ಕಸ್ತೂರ್ ಬಾ’, ‘ಬೆಲ್ ಬಾಟಂ 2’ ಚಿತ್ರದ ಕೆಲಸಗಳಲ್ಲಿಯೂ ಹರಿಪ್ರಿಯಾ ಬಿಜಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net