ಗಣಪನ ನೆನೆದೇವೋ: ತಾರೆಯರ ಚೌತಿ ಸಂಭ್ರಮ...

Cinema
ಮೇಘಾ ಶೆಟ್ಟಿ, ಪ್ರಿಯಾಂಕಾ ತಿಮ್ಮೇಶ್, ವೈಷ್ಣವಿ ಗೌಡ.
Published on

ಎಲ್ಲ ಹಬ್ಬಗಳನ್ನು ಎಲ್ಲರೂ ಆಚರಿಸುವುದಿಲ್ಲ. ಆದರೆ, ಗಣಪತಿ ಹಬ್ಬವನ್ನು ಆಚರಿಸದಿರುವವರು ಬಹಳ ಕಡಿಮೆ. ಪ್ರತಿಯೊಬ್ಬರಿಗೂ ಗಣೇಶನ ಹಬ್ಬದ ಜತೆಗೆ, ಆಚರಣೆಯ ಜತೆಗೆ ಒಂದು ಭಾವನಾತ್ಮಕ ಸಂಬಂಧ ಮತ್ತು ನೆನಪು ಇದ್ದೇ ಇರುತ್ತದೆ. ಅಂತಹ ಮಧುರ ನೆನಪನ್ನು ಮೂವರು ಜನಪ್ರಿಯ ನಟಿಯರು ‘ವಿಜಯವಾಣಿ’ ಜತೆಗೆ ಹಂಚಿಕೊಂಡಿದ್ದಾರೆ.

ಮರಳಿ ಬಾಲ್ಯ ನೆನಪಾಗುತ್ತಿದೆ ...

ಗಣೇಶ ಹಬ್ಬ ಎಂದ ತಕ್ಷಣ ಮರಳಿ ಬಾಲ್ಯಕ್ಕೆ ಹೋಗಿಬಿಡಲೇ ಎಂದೆನಿಸಿದ್ದೇ ಹೆಚ್ಚು. ಚಿಕ್ಕವಳಿದ್ದಾಗ 101 ಗಣಪತಿ ನೋಡಲು, ನಮ್ಮ ಬಳಗದ ಜತೆಗೆ ಹೋಗುತ್ತಿದ್ದೆ. ಅದು ಬರೀ ನೆಪ ಮಾತ್ರ. ಹೋದಲ್ಲೆಲ್ಲ ಬಗೆಬಗೆ ತಿಂಡಿ ಸಿಗುತ್ತಿತ್ತು. ಈಗಲೂ ಆ ಚೇಷ್ಟೆಗಳನ್ನು ನಾನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಶಾಲೆಯಲ್ಲಿ ಗಣೇಶ ಕೂರಿಸುವುದರಿಂದ ಹಿಡಿದು ಅದರ ಅಲಂಕಾರದಲ್ಲಿಯೂ ಪಾಲ್ಗೊಳ್ಳುತ್ತಿದ್ದೆ. ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹುಮಾನವನ್ನೂ ಪಡೆದಿದ್ದೆ. ಇದೀಗ ಅದೆಲ್ಲವನ್ನು ನೆನಪು ಮಾಡಿಕೊಳ್ಳಬೇಕಷ್ಟೆ. ಮನೆಯಲ್ಲಿ ಒಮ್ಮೊಮ್ಮೆ ಗಣೇಶ ಪ್ರತಿಷ್ಠಾಪನೆ ಮಾಡುತ್ತೇವೆ. ಕುಟುಂಬದವರೆಲ್ಲ ಒಂದೆಡೆ ಸೇರಿದಾಗ ಅದ್ದೂರಿಯಾಗಿಯೇ ಹಬ್ಬ ಮಾಡುತ್ತೇವೆ.

| ಮೇಘಾ ಶೆಟ್ಟಿ

ಗಲ್ಲಿ ಗಣೇಶನ ಸಂಭ್ರಮ ಜೋರು

ನಮ್ಮ ಮನೆಯಲ್ಲಿ ಗಣೇಶ ಹಬ್ಬವನ್ನು ಜೋರಾಗಿ ಆಚರಿಸುತ್ತೇವೆ. ವಿವಿಧ ಬಗೆಯ ಅಡುಗೆ ಮಾಡಿ ನೈವೇದ್ಯ ಮಾಡುತ್ತೇವೆ. ಆದರೆ, ನಾವು ಭದ್ರಾವತಿಯಲ್ಲಿದ್ದಾಗ ಗಣೇಶ ಚೌತಿ ಆಚರಿಸಿದ ರೀತಿ, ಈಗ ಆಚರಿಸಲು ಆಗುತ್ತಿಲ್ಲ. ಅಲ್ಲೆಲ್ಲ ದೊಡ್ಡದೊಡ್ಡ ಗಣೇಶನನ್ನು ಕೂರಿಸುತ್ತಿದ್ದರು. ಅವೆಲ್ಲವನ್ನು ನೋಡುವುದೇ ಒಂದು ಚೆಂದ. ರಾತ್ರಿಯಲ್ಲಾ ಗಲ್ಲಿ ಗಣೇಶನ ಮುಂದೆ ಟಿವಿಗಳನ್ನಿಟ್ಟು ಸಿನಿಮಾ ಹಾಕುತ್ತಿದ್ದರು. ನಾನು, ಅಣ್ಣ, ಅಮ್ಮ ಹೀಗೆ ಎಲ್ಲರೂ ಸಿನಿಮಾ ನೋಡುತ್ತಿದ್ದೆವು. ಗಣೇಶ ವಿಸರ್ಜನೆ ವೇಳೆ ಯಾರು ಮಂಡಕ್ಕಿ ಕೊಡುತ್ತಾರೆ ಎಂದು ಕಾಯುತ್ತಿದ್ದೆ. ಒಮ್ಮೊಮ್ಮೆ ಹಾಡಿಗೆ ಹೆಜ್ಜೆ ಹಾಕಿದ್ದೂ ಉಂಟು. ಅಂದಿನ ಆಚರಣೆ ಈಗಿಲ್ಲ. ಮತ್ತೆ ಭದ್ರಾವತಿಗೆ ಹೋದರೆ ಗಣೇಶ ಚೌತಿಯ ನೆನಪು ಬರುತ್ತದೆ.

| ಪ್ರಿಯಾಂಕಾ ತಿಮ್ಮೇಶ್

ನಮ್ಮ ಮನೆಯಲ್ಲಿ ಸರಳ ಸಂಪ್ರದಾಯ

ಗಣೇಶ ಹಬ್ಬ ಬಂದರೆ ಅದರ ಸಂಭ್ರಮ ಎಲ್ಲೆಡೆಯೂ ಜೋರಾಗಿಯೇ ಇರುತ್ತದೆ. ಆದರೆ, ನಮ್ಮ ಮನೆಯಲ್ಲಿ ಗಣೇಶನ ಮೂರ್ತಿ ಕೂರಿಸುವ ಪದ್ಧತಿ ಇಲ್ಲ. ಅಮ್ಮನ ಮನೆಯಿಂದಲೋ ಅಥವಾ ಅಪ್ಪನ ಮನೆಯಿಂದಲೋ ಅದರ ಆಚರಣೆ ಇದ್ದಿದ್ದರೆ, ನಾವು ಪ್ರತಿಷ್ಠಾಪಿಸುತ್ತಿದ್ದೆವು. ಹಾಗಂತ ಆ ಸಂಪ್ರದಾಯದಿಂದ ನಾವೇನು ಹಿಂದಿಲ್ಲ. ಗಣೇಶ ಚೌತಿ ದಿನ ಮನೆಯಲ್ಲಿನ ಗಣೇಶ ವಿಗ್ರಹಕ್ಕೆ ವಿಶೇಷ ಪೂಜೆ ಮಾಡುತ್ತೇವೆ. ಅದ್ದೂರಿಯಾಗಿ ಇರದಿದ್ದರೂ ಸರಳವಾಗಿಯಾದರೂ ಪೂಜೆ ನಡೆಯುತ್ತದೆ. ಈ ಹಿಂದೆ ಎರಡು ಸಲ ಧಾರಾವಾಹಿ ತಂಡದ ಜತೆಯಲ್ಲಿಯೇ ಹಬ್ಬದ ಸಡಗರವಿತ್ತು. ಅಲ್ಲಿ ಅದರ ವೈಭವ ತುಂಬ ದೊಡ್ಡದಾಗಿಯೇ ಇತ್ತು.

| ವೈಷ್ಣವಿ ಗೌಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net