ಗಂಡ, ಹೆಂಡತಿ ಮತ್ತು ಕಾನೂನು: ಸಿನಿಮಾ ವಿಮರ್ಶೆ

Wedding Gift
Published on
  • ಚಿತ್ರ: ವೆಡ್ಡಿಂಗ್ ಗಿಫ್ಟ್
  • ನಿರ್ದೇಶನ: ವಿಕ್ರಂ ಪ್ರಭು
  • ನಿರ್ಮಾಣ: ವಿಕ್ರಂ ಪ್ರಭು
  • ತಾರಾಗಣ: ನಿಶಾನ್ ನಾಣಯ್ಯ, ಸೋನು, ಪ್ರೇಮಾ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್ ಮುಂತಾದವರು

| ಚೇತನ್ ನಾಡಿಗೇರ್ ಬೆಂಗಳೂರು

ಮೊದಲ ದೃಶ್ಯದಲ್ಲೇ ನ್ಯಾಯಾಲಯವು ನಾಯಕನನ್ನು ಆರೋಪಮುಕ್ತ ಎಂದು ಘೋಷಿಸಿ ಖುಲಾಸೆ ಮಾಡುತ್ತದೆ. ಇದನ್ನು ಕೇಳಿ ನಾಯಕ ನಿಟ್ಟುಸಿರು ಬಿಡುತ್ತಾನೆ. ನಾಯಕನ ಪರವಾಗಿ ವಾದ ಮಾಡುವ ಲಾಯರ್ ಸಹ ಕೇಸ್ ಗೆದ್ದ ಖುಷಿಯಲ್ಲಿ ಸಾರ್ಥಕತೆ ಅನುಭವಿಸುತ್ತಾರೆ. ಇಷ್ಟಕ್ಕೂ ಆಗಿದ್ದೇನು? ನಾಯಕ ಆರೋಪಿ ಸ್ಥಾನದಲ್ಲಿ ನಿಂತಿದ್ದು ಏಕೆ? ಆತನನ್ನು ಶಿಕ್ಷೆಯಿಂದ ತಪ್ಪಿಸುವುದಕ್ಕೆ ಲಾಯರ್ ಏನೆಲ್ಲ ಮಾಡುತ್ತಾರೆ ಮತ್ತು ನಾಯಕ ಹೇಗೆ ಈ ಕೇಸ್​ನಿಂದ ಬಚಾವಾಗುತ್ತಾನೆ? ಎಂಬುದನ್ನು ಫ್ಲಾಶ್​ಬ್ಯಾಕ್ ಮೂಲಕ ತೋರಿಸಲಾಗುತ್ತದೆ. ಕಥೆ ಪ್ರಾರಂಭವಾಗುವುದೇ ಅಲ್ಲಿಂದ.

ಇಲ್ಲಿ ಕಥೆ ಏನು ಎಂದು ಹೇಳುವುದಕ್ಕಿಂತ, ಸಾರಾಂಶ ಹೇಳಿಬಿಟ್ಟರೆ ಕಥೆ ಏನು ಎಂಬ ಕಲ್ಪನೆ ಬರಬಹುದು. ವರದಕ್ಷಿಣೆ ಅಥವಾ ಕೌಟುಂಬಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಪತ್ನಿಗೆ ಆಕೆಯ ಪತಿ ಅಥವಾ ಆತನ ಮನೆಯವರು ನೀಡುವ ಮಾನಸಿಕ ಮತ್ತು ದೈಹಿಕ ಹಿಂಸೆಯಿಂದ ತಪ್ಪಿಸಲು 498ಎ ಎಂಬ ಕಾನೂನನ್ನು ರೂಪಿಸಲಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅದು ದುರುಪಯೋಗ ಆಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

ಈ ಅಂಶವೇ ‘ವೆಡ್ಡಿಂಗ್ ಗಿಫ್ಟ್’ನ ಕಥೆ ಎನ್ನಬಹುದು. ಹಾಗೆ ಕಿರುಕುಳದ ಆರೋಪ ಹೊತ್ತ ಗಂಡ ಆರೋಪಮುಕ್ತನಾಗುವುದು ಹೇಗೆ? ಎಂದು ಗೊತ್ತಾಗಬೇಕಿದ್ದರೆ ಚಿತ್ರ ನೋಡಬೇಕು. ಗಂಡನಿಂದ ಶೋಷಣೆಗೊಳಗಾಗುವ ಹೆಣ್ಣಿನ ಸಾಕಷ್ಟು ಕಥೆಗಳು ಇದುವರೆಗೂ ತೆರೆಯ ಮೇಲೆ ಬಂದಿವೆ. ಆದರೆ, ಹೆಣ್ಣಿನಿಂದ ಶೋಷಣೆಗೊಳಗಾಗುವ ಗಂಡಿನ ಕಥೆ ಇದು. ಆ ನಿಟ್ಟಿನಲ್ಲಿ ಈ ಕಥೆ, ಕನ್ನಡ ಚಿತ್ರರಂಗಕ್ಕೆ ಹೊಸದು. ಈ ಕಥೆಯನ್ನು ಇನ್ನಷ್ಟು ಚುರುಕಾಗಿಸಿದ್ದರೆ, ಕಥೆ ಬೇರೆಯಾಗಿರುತ್ತಿತ್ತು. ಆದರೆ, ಚಿತ್ರದ ನಿರೂಪಣೆ ತೀರಾ ನಿಧಾನವಷ್ಟೇ ಅಲ್ಲ, ಈ ತರಹದ ಕೋರ್ಟ್ ರೂಮ್ ಡ್ರಾಮಾಗಳಿಗೆ ಇರಬೇಕಾದ ರೋಚಕತೆ ಮಿಸ್ ಆಗಿದೆ. ಹಾಗಾಗಿ, ಚಿತ್ರ ವಿಭಿನ್ನವಾಗಿದೆ ಎಂದನಿಸಿದರೂ, ಗಾಢವಾಗಿ ಮನಸ್ಸು ತಟ್ಟುವುದಿಲ್ಲ. ಆದರೂ ಮೊದಲ ಚಿತ್ರದಲ್ಲೇ ಇಂಥದ್ದೊಂದು ಸೂಕ್ಷ್ಮ ವಿಷಯವನ್ನು ಕೈಗೆತ್ತಿಕೊಂಡಿರುವುದರಿಂದ, ನಿರ್ದೇಶಕರ ಸಾಹಸವನ್ನು ಮೆಚ್ಚಬಹುದು.‘ವೆಡ್ಡಿಂಗ್ ಗಿಫ್ಟ್’ನಲ್ಲಿ ಗಮನಸೆಳೆಯುವ ಒಂದು ವಿಷಯವೆಂದರೆ, ಅದು ಸೋನು ಅಭಿನಯ. ಒಂದು ಪಕ್ಕಾ ನೆಗೆಟಿವ್ ಪಾತ್ರದಲ್ಲಿ ಸೋನು ಮಿಂಚಿದ್ದಾರೆ. ಪ್ರೇಮಾ ಅವರ ಅಭಿನಯದಲ್ಲಿ ಇನ್ನಷ್ಟು ಜೋಶ್ ಬೇಕಿತ್ತು. ನಿಶಾನ್, ಪವಿತ್ರಾ ಲೋಕೇಶ್, ಅಚ್ಯುತ್ ಕುಮಾರ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಹಿನ್ನೆಲೆ ಸಂಗೀತ ಖುಷಿ ಕೊಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net