ಕನ್ನಡ ಸಿನಿಮಾಗಳ ಕಾಶಿಯಾತ್ರೆ: ಪವಿತ್ರ ಕ್ಷೇತ್ರದಲ್ಲಿ ಆ್ಯಕ್ಷನ್​ ಕಟ್​

ಕಾಶಿ
Published on

ಭಾರತದ ಭೂಪಟದಲ್ಲಿ ಕಾಶಿಗೆ ವಿಶೇಷ ಸ್ಥಾನಮಾನವಿದೆ. ಹಿಂದೂಗಳ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಕಾಶಿ ಮೊದಲ ಪಟ್ಟಿಯಲ್ಲಿದೆ. ಇಂಥ ಯಾತ್ರಾ ಸ್ಥಳದಲ್ಲಿ ಈ ಹಿಂದೆಯೂ ಕನ್ನಡ ಸಿನಿಮಾಗಳ ಚಿತ್ರೀಕರಣವಾಗಿದೆ. ಬಹುಶಃ ಕಾಶಿಯಲ್ಲಿ ಚಿತ್ರೀಕರಣವಾದ ಮೊದಲ ಕನ್ನಡ ಚಿತ್ರವೆಂದರೆ ಡಾ. ರಾಜಕುಮಾರ್ ಅಭಿನಯದ ‘ತಾಯಿಗೆ ತಕ್ಕ ಮಗ’. ಆ ನಂತರ ‘ಜೀವನ ಚೈತ್ರ’, ‘ಲವ್’, ‘ವಿಮುಕ್ತಿ’ ಸೇರಿದಂತೆ ಕೆಲವು ಚಿತ್ರಗಳ ಚಿತ್ರೀಕರಣ ಕಾಶಿಯಲ್ಲಿ ಆಗಿದೆ. ಮೂರು ವರ್ಷಗಳ ಹಿಂದೆ ಟಿ.ಎನ್. ಸೀತಾರಾಮ್ ನಿರ್ದೇಶನದ ‘ಕಾಫಿ ತೋಟ’ ಚಿತ್ರದ ನಂತರ ಸಾಲು ಸಾಲು ಸಿನಿಮಾ ತಂಡಗಳು ಕಾಶಿಯನ್ನೇ ಪ್ರಧಾನವಾಗಿರಿಸಿಕೊಂಡು ಸಿನಿಮಾ ಮಾಡಿವೆ. ಈಗಾಗಲೇ ‘ಬನಾರಸ್’, ‘ರಾಬರ್ಟ್’, ‘ಮದಗಜ’, ‘ಡಾಲಿ’ ಸಿನಿಮಾಗಳು ಕಾಶಿಯ ಹಿನ್ನೆಲೆಯಲ್ಲಿ ಚಿತ್ರೀಕರಣಗೊಂಡಿವೆ. ಚಿತ್ರದ ಕಥೆಯಷ್ಟೇ ಪ್ರಾಮುಖ್ಯತೆಯನ್ನು ಕಾಶಿಗೂ ನೀಡಿವೆ. ಇದ್ದಕ್ಕಿದ್ದಂತೆ ಕನ್ನಡ ಚಿತ್ರರಂಗಕ್ಕೆ ಕಾಶಿ ಯಾತ್ರೆ ಮಾಡಬೇಕೆಂದೆನಿಸಿದ್ದು ಯಾಕೆ? ಪ್ರಮುಖವಾಗಿ ಕಥೆಗೂ ಕಾಶಿಗೂ ಏನೋ ಸಂಬಂಧವಿರಬಹುದು. ಎರಡನೆಯದಾಗಿ ಅಲ್ಲಿನ ಲೊಕೇಷನ್​ಗಳು ಚಿತ್ರಕ್ಕೆ ಸೂಕ್ತ ಎಂಬ ಕಾರಣವಿರಬಹುದು. ಮೂರನೆಯ ಮತ್ತು ಪ್ರಮುಖ ಕಾರಣವೆಂದರೆ, ಉತ್ತರ ಪ್ರದೇಶದ ಪ್ರವಾಸ ನೀತಿ. ಉತ್ತರ ಪ್ರದೇಶದಲ್ಲಿ ಚಿತ್ರೀಕರಣ ಮಾಡುವ ಚಿತ್ರತಂಡಗಳಿಗೆ ವಿಶೇಷ ಸಬ್ಸಿಡಿ ನೀಡುವ ಪರಿಪಾಠವನ್ನು ಅಲ್ಲಿನ ಸರ್ಕಾರ ಮಾಡಿರುವುದರಿಂದ, ಬರೀ ಕನ್ನಡವಷ್ಟೇ ಅಲ್ಲದೇ ಬೇರೆ ಭಾಷೆಗಳ ಹಲವು ಚಿತ್ರತಂಡಗಳು ಕಾಶಿಯತ್ತ ಪ್ರಯಾಣ ಬೆಳೆಸಿವೆ. ಕನ್ನಡದ ವಿಷಯದಲ್ಲಿ ಹೇಳುವುದಾದರೆ, ಆ ಸ್ಥಳವನ್ನೇ ಆಯ್ದುಕೊಂಡ ಹಿನ್ನೆಲೆ ಮತ್ತು ಅಲ್ಲಿನ ಅನುಭವಗಳನ್ನು ವಿಜಯವಾಣಿ ಜತೆ ಹಂಚಿಕೊಂಡಿದ್ದಾರೆ ಆಯಾ ಚಿತ್ರದ ನಿರ್ದೇಶಕರು.

ರಾಬರ್ಟ್​ಗೆ ಲಖನೌ ನಂಟು: ತರುಣ್ ಸುಧೀರ್ ನಿರ್ದೇಶನದಲ್ಲಿ, ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಾಯಕತ್ವದ ‘ರಾಬರ್ಟ್’ ಸಿನಿಮಾ ಹಲವು ವಿಚಾರಗಳಿಂದ ಸದ್ದು ಮತ್ತು ಸುದ್ದಿ ಮಾಡುತ್ತಿದೆ. ಲುಕ್ ವಿಚಾರ ಒಂದೆಡೆಯಾದರೆ, ದರ್ಶನ್ ಅವರ ಗೆಟಪ್ ಸಹ ಚಿತ್ರದ ಹೈಲೈಟ್​ಗಳಲ್ಲೊಂದು. ಇದೆಲ್ಲದರ ಜತೆಗೆ ‘ರಾಬರ್ಟ್’ಗೆ ಉತ್ತರ ಪ್ರದೇಶದ ನಂಟೂ ಇದೆ. ಹೌದು, ಚಿತ್ರದ ಶೇ. 50 ಭಾಗದ ಶೂಟಿಂಗ್ ಲಕ್ನೋ ಮತ್ತು ಕಾಶಿಯಲ್ಲಿ ಮಾಡಲಾಗಿದೆ. ಉತ್ತರಪ್ರದೇಶದ ನಂಟಿನ ಬಗ್ಗೆ ಚಿತ್ರದ ಫಸ್ಟ್ ಲುಕ್​ನಲ್ಲೇ ತೋರಿಸಿದ್ದರು ನಿರ್ದೇಶಕ ತರುಣ್. ‘ಸಿನಿಮಾದ ಕಥೆಯ ಬಹುಮುಖ್ಯ ಭಾಗ ಲಕ್ನೋದಲ್ಲಿ ನಡೆಯಲಿದೆ. ಆ ಪಟ್ಟಣದ ವಿನ್ಯಾಸವೇ ಒಂದು ರೀತಿ ಬೇರೆ ಫೀಲ್ ಕೊಡುತ್ತದೆ. ಅಲ್ಲಿನ ಕಟ್ಟಡ, ಅಲ್ಲಿನ ಭಾಷೆ, ಪ್ರತಿಯೊಂದೂ ವಿಭಿನ್ನವೇ. ಕನ್ನಡ ಸಿನಿಮಾ ಪ್ರೇಕ್ಷಕರು ಆ ಭಾಗದ ಪ್ರದೇಶವನ್ನು ಪೂರ್ಣ ಪ್ರಮಾಣದಲ್ಲಿ ನೋಡಿಲ್ಲ. ಅದನ್ನು ತೋರಿಸುವ ಕೆಲಸ ‘ರಾಬರ್ಟ್’ನಲ್ಲಿ ಮಾಡಿದ್ದೇವೆ. ಒಟ್ಟು 20-25 ದಿನಗಳ ಕಾಲ ಚಿತ್ರೀಕರಣ ಮಾಡಿಕೊಂಡಿದ್ದೇವೆ’ ಎಂಬುದು ತರುಣ್ ಸುಧೀರ್ ಮಾತು.

‘ಬನಾರಸ್’ವತ್ತಾಗಿದೆ..: ‘‘ಬನಾರಸ್’ ಎಂಬ ಪದದಲ್ಲೇ ಒಂದು ಸೊಗಡಿದೆ. ಅಲ್ಲೊಂದು ಬ್ಯೂಟಿ ಗೋಚರವಾಗುತ್ತದೆ. ಅಲ್ಲಿನ ಸಂಸ್ಕೃತಿ, ಬಣ್ಣ, ಸಂಗೀತ ಎಲ್ಲವೂ ಒಂದೊಂದು ಕಾಲಘಟ್ಟದ ಕಥೆ ಹೇಳುತ್ತದೆ. ಅಂಥ ಒಂದು ಊರಿನ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಿದರೆ ಹೇಗೆ? ಎಂಬ ಭಾವನೆ ಹೊಳೆಯಿತು. ಆಗ ನಾನು ಬರೆದ ಕಥೆಯನ್ನು ವಾರಾಣಸಿಯಲ್ಲಿಟ್ಟು ನೋಡಿದೆ. ಅಚ್ಚುಕಟ್ಟಾಗಿ ಅಲ್ಲಿನ ನೇಟಿವಿಟಿಗೆ ಹೊಂದಿಕೊಂಡಿತು. ಹಾಗಾಗಿ ಚಿತ್ರದ ಶೇ. 90 ಭಾಗವನ್ನು ಇಡೀ ವಾರಾಣಸಿಯಲ್ಲಿ ಚಿತ್ರೀಕರಣ ಮಾಡಿದ್ದೇನೆ’- ಹೀಗೆ ‘ಬನಾರಸ್’ ಹಿನ್ನೆಲೆ ಹೇಳಿಕೊಂಡರು ನಿರ್ದೇಶಕ ಜಯತೀರ್ಥ. ‘ಕನ್ನಡದ ಸಿನಿಮಾ ಇತಿಹಾಸದಲ್ಲಿ ಪೂರ್ತಿ ಸಿನಿಮಾವೊಂದನ್ನು ಕಾಶಿಯಲ್ಲಿ ಯಾರೂ ಚಿತ್ರೀಕರಣ ಮಾಡಿಲ್ಲ. ಅಂಥ ಒಂದು ಕೆಲಸ ‘ಬನಾರಸ್’ ಚಿತ್ರದಲ್ಲಾಗಿದೆ. ಮುಂದೊಂದು ದಿನ ಕಾಶಿ ನೋಡಬೇಕಿತ್ತು ಎಂದುಕೊಂಡವರಿಗೆ ‘ಬನಾರಸ್’ ಸಿನಿಮಾ ಒಂದು ಬಾರಿ ತೋರಿಸಿದರೆ ಸಾಕಂತೆ. ಇಡೀ ಕಾಶಿಯ ದರ್ಶನವಾಗಲಿದೆಯಂತೆ ಎಂದು ನಗೆ ಚಟಾಕಿ ಹಾರಿಸುತ್ತಾರೆ ಜಯತೀರ್ಥ. ‘ಸಂಸ್ಕೃತದಲ್ಲಿ ಕಾಶ್ಯ ಎಂಬ ಪದವಿದೆ. ಕಾಶ್ಯ ಎಂದರೆ ಬೆಳಕು. ಬಿಗ್​ಬ್ಯಾಂಗ್ ಥಿಯರಿಯ ಮಹಾಸ್ಪೋಟದ ಪ್ರಭಾವದಿಂದ ಒಂದು ದೊಡ್ಡ ಪ್ರಕಾಶ ಹೊರಹೊಮ್ಮುತ್ತದೆ. ಅದರಿಂದ ಉದ್ಭವವಾದ ಪ್ರದೇಶವೇ ಈ ಕಾಶಿ ಎಂಬುದು ಅಲ್ಲಿನ ಪ್ರತೀತಿ. ಪುರಾತನ ನಾಗರಿಕತೆ ಹುಟ್ಟಿದ ನಂಬಿಕೆ ಅಲ್ಲಿನವರಲ್ಲಿದೆ. ನೀರು, ನಾಗರಿಕತೆ, ಅಲ್ಲಿನ ಜನ ಎಲ್ಲವೂ ವಿಭಿನ್ನ. ಅಂಥ ಸ್ಥಳದ ಮಹಿಮೆಯನ್ನು ಕನ್ನಡಿಗರಿಗೂ ರಸವತ್ತಾಗಿ ಉಣಿಸಬೇಕು ಎಂಬ ದೃಷ್ಟಿಯಿಂದ ಆ ಪ್ರದೇಶ ಆಯ್ದುಕೊಂಡು, ಸಿನಿಮಾ ಮಾಡಿದೆ. ಅಲ್ಲಿನ ಎಲ್ಲ 64 ಘಾಟ್​ಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಿದ್ದೇವೆ. ಒಂದು ಮಿಸ್ಟ್ರಿ ಜತೆಗೆ ಧ್ಯಾನಸ್ಥ ವಾತಾವರಣ ಅಲ್ಲಿದೆ. ಸಾವಿನ ಅಂಚಿನಲ್ಲಿ ವಾಸಿಸುವವರೂ ಅಲ್ಲಿದ್ದಾರೆ, ನಿರ್ಗತಿಕ ಸುಖಪುರುಷರೂ ತಂಗಿದ್ದಾರೆ. ಅಲ್ಲಿನ ಲಸ್ಸಿ, ಬೀಡಾ ಎಷ್ಟು ಖ್ಯಾತಿಯೋ ಅಪರಾಧಕ್ಕೂ ಉತ್ತರ ಪ್ರದೇಶ ಕುಖ್ಯಾತವಾಗಿದೆ. ಆದರೆ ನಾವು ಅದೆಲ್ಲವನ್ನು ಬದಿಗಿಟ್ಟು ಅಲ್ಲಿನ ಭಾವುಕತೆಯನ್ನು ಸೆರೆಹಿಡಿದಿದ್ದೇವೆ. ಆ ಮಣ್ಣಿನಲ್ಲಿ ಹುಟ್ಟಿದ ಕೆಲ ಕಲಾವಿದರನ್ನು ಬಳಸಿಕೊಂಡು ಒಟ್ಟು 45 ದಿನ ಚಿತ್ರೀಕರಣ ಮಾಡಿದ್ದೇವೆ’ ಎಂದು ಸಿನಿಮಾದ ಕಥೆ ಮತ್ತು ಕಾಶಿ ಕನೆಕ್ಷನ್ ಬಗ್ಗೆ ವಿವರಿಸುತ್ತಾರೆ ಜಯತೀರ್ಥ. ಅಂದಹಾಗೆ, ಜೈದ್ ಖಾನ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಸೋನಲ್ ಮೊಂತೆರೋ ನಾಯಕಿ.

‘ಕಾಶಿಯಲ್ಲಿ ಸಿನಿಮಾ ಚಿತ್ರೀಕರಣ ಮಾಡಿಕೊಳ್ಳುವುದು ಫ್ರೆಶ್ ದೃಶ್ಯಗಳ ದೃಷ್ಟಿಯಿಂದ ಒಳ್ಳೆಯದು. ಆದರೆ, ಅಷ್ಟೇ ದೊಡ್ಡ ಮೊತ್ತವನ್ನೂ ಇಲ್ಲಿ ಖರ್ಚು ಮಾಡಬೇಕು. ಸ್ವಿಟ್ಜರ್​ಲೆಂಡ್​ನಲ್ಲಿ ಮಾಡಿದಷ್ಟು ಖರ್ಚಾಗಲಿದೆ. ಕರ್ನಾಟಕದಲ್ಲಿ ಒಬ್ಬ ಜೂನಿಯರ್ ಕಲಾವಿದನಿಗೆ 500 ರೂ. ಕೊಟ್ಟರೆ, ಕಾಶಿಯಲ್ಲಿ 900 ರಿಂದ 1000 ತನಕ ಹಣ ಪಾವತಿಸಬೇಕು. ಭಾಷೆಯ ಸಮಸ್ಯೆ, ಆಹಾರದ ಸಮಸ್ಯೆಯೂ ತುಂಬ ಕಾಡುತ್ತದೆ. ಹಾಗಾಗಿ ಕಾಶಿ ತುಂಬ ಕಾಸ್ಟಿ್ಲ ಎನ್ನುತ್ತಾರೆ ಮಹೇಶ್. ‘ಮೊದಲೇ ಎಲ್ಲವನ್ನು ಪ್ಲಾ್ಯನ್ ಮಾಡಿಕೊಂಡು ಹೋದರೆ, ಸಮಸ್ಯೆ ಎದುರಾಗುವುದಿಲ್ಲ. ನೇರವಾಗಿ ಶೂಟಿಂಗ್​ಗೆ ಇಳಿದರೆ, ಕೋ-ಆರ್ಡಿನೇಷನ್ ಸಮಸ್ಯೆ, ಪರವಾನಿಗೆ ಸಮಸ್ಯೆ ಕಾಣುತ್ತದೆ. ಹಾಗಾಗಿ ಎಲ್ಲವನ್ನೂ ಮೊದಲೇ ಪ್ಲ್ಯಾನ್ ಮಾಡಿ’ ಎನ್ನುತ್ತಾರೆ ಡಾಲಿ ಚಿತ್ರದ ನಿರ್ವಪಕ ಯೋಗೇಶ್.

ಸಿನಿಮಾ ಚಿತ್ರೀಕರಣಕ್ಕೆ ಕಾಶಿ ತುಂಬ ಕಾಸ್ಟ್ಲಿ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ಆ ಪೈಕಿ ಸಿನಿಮಾ ಚಿತ್ರೀಕರಣ ಮಾಡಿಕೊಳ್ಳುವ ಚಿತ್ರತಂಡಗಳಿಗೂ ಸಬ್ಸಿಡಿ ನೀಡುವ ಕೆಲಸ ಅವರ ಸರ್ಕಾರದಿಂದ ಆಗುತ್ತಿದೆ. ಆದರೆ, ಹಾಗೆ ಚಿತ್ರೀಕರಣ ಮಾಡಕೊಳ್ಳುವುದಕ್ಕೂ ಒಂದಷ್ಟು ಮಾನದಂಡಗಳಿವೆ. ಅವುಗಳು ಇಂತಿವೆ.

  • ಪ್ರವಾಸೋದ್ಯಮ ಅಭಿವೃದ್ಧಿ ಸಲುವಾಗಿ ರೂಪಿಸಿರುವ ಯೋಜನೆ ಇದು
  • ಚಿತ್ರದ ಶೇ. 50 ಭಾಗದ ಶೂಟಿಂಗ್ ಉತ್ತರ ಪ್ರದೇಶದಲ್ಲಿಯೇ ಆಗಿರಬೇಕು
  • ಸಿನಿಮಾ ಸಿದ್ಧವಾಗಿ ಸೆನ್ಸಾರ್ ಆದ ಬಳಿಕ ಒಂದು ಕಾಪಿ ಅಲ್ಲಿನ ಸರ್ಕಾರಕ್ಕೆ ಸಲ್ಲಿಸಬೇಕು
  • ಒಟ್ಟಾರೆ ಚಿತ್ರದ ಬಜೆಟ್​ನ ಶೇ. 25 ಭಾಗ ಸಬ್ಸಿಡಿ ರೂಪದಲ್ಲಿ ಸಿಗುತ್ತದೆ
  • ಸಬ್ಸಿಡಿಗಾಗಿ ಸರ್ಕಾರ ಮತ್ತು ವಾರ್ತಾ ಇಲಾಖೆಯಿಂದ ಪರವಾನಗಿ ಕಡ್ಡಾಯ
  • ಸರ್ಕಾರದ ಫಿಲಂ ಬಂಧು ವೆಬ್​ಸೈಟ್​ನಲ್ಲಿ ಸಬ್ಸಿಡಿ ಅಪ್ಲಿಕೇಷನ್ ಲಭ್ಯ
  • ಚಿತ್ರದ ಬಜೆಟ್ ಸೇರಿ, ಎಷ್ಟು ದಿನ ಚಿತ್ರೀಕರಣ ಎಂಬ ಬಗ್ಗೆಯೂ ಮಾಹಿತಿ ನೀಡಬೇಕು

ಮದಗಜದಲ್ಲಿ ಕಥಾನಾಯಕನ ಹುಟ್ಟೂರೇ ಕಾಶಿ: ‘ನಮ್ಮ ಚಿತ್ರದ ಕಥಾನಾಯಕನ ಹುಟ್ಟೂರೇ ಕಾಶಿ. ಹಾಗಾಗಿ ನಮ್ಮ ಇಡೀ ಸಿನಿಮಾದ ಕಥೆ ಶುರುವಾಗುವುದೇ ಅಲ್ಲಿಂದ. ಹಾಗಾದರೆ ಕಾಶಿಗೂ ಕರ್ನಾಟಕಕ್ಕೂ ಎಲ್ಲಿಂದ ಎಲ್ಲಿಯ ಸಂಬಂಧ? ಅದನ್ನು ‘ಮದಗಜ’ ಸಿನಿಮಾದಲ್ಲಿಯೇ ಹೇಳಿದ್ದಾರಂತೆ ನಿರ್ದೇಶಕ ಮಹೇಶ್ ಕುಮಾರ್. ‘ರೋರಿಂಗ್ ಸ್ಟಾರ್’ ಶ್ರೀಮುರಳಿ ನಾಯಕತ್ವದ ‘ಮದಗಜ’ ಸಿನಿಮಾ ಶೂಟಿಂಗ್ ಹಂತದಲ್ಲಿದೆ. ವಿಶೇಷ ಏನೆಂದರೆ, ಚಿತ್ರದ ಶೇ. 25 ಭಾಗ ಕಾಶಿಯಲ್ಲಿ ಚಿತ್ರೀಕರಣ ಮಾಡಿಕೊಂಡಿದೆ ಚಿತ್ರತಂಡ. ‘ಕಥೆ ಹೆಣೆಯುವ ಕೆಲಸ ಶುರುವಾದ ಮೇಲೆ ನನ್ನ ಗಮನಕ್ಕೆ ಬಂದಿದ್ದು ಕಾಶಿ. ಕಥೆ ಡಿಮಾಂಡ್ ಮಾಡಿದ್ದರಿಂದ ಅಲ್ಲಿನ ಹಲವು ಪ್ರಸಿದ್ಧ ಲೊಕೇಷನ್​ಗಳಲ್ಲಿ ಶೂಟಿಂಗ್ ಮಾಡಿರುವುದಷ್ಟೇ ಅಲ್ಲ, ಚಿತ್ರ ಆರಂಭವಾಗುವುದು ಅಲ್ಲಿಂದಲೇ. ಜಗತ್ತಿನ ಯಾವ ಮೂಲೆಯಲ್ಲೂ ಕಾಣಿಸದ ಎಷ್ಟೋ ಸತ್ಯಗಳು ಅಲ್ಲಿ ಗೋಚರವಾಗುತ್ತವೆ. ಅವೆಲ್ಲವುಗಳನ್ನು ಸಿನಿಮಾದಲ್ಲಿ ಮಿಶ್ರಣ ಮಾಡಿದ್ದೇವೆ’ ಎನ್ನುವ ಮಹೇಶ್, 15 ದಿನ ಕಾಶಿಯಲ್ಲಿ ತಂಗಿದ್ದು, ದೃಶ್ಯಗಳನ್ನು ಸೆರೆಹಿಡಿದು ಆಗಮಿಸಿದ್ದಾರೆ. ಹಿಂದಿ ಬ್ಯಾಕ್​ಡ್ರಾಪ್​ನಲ್ಲಿ ಡಾಲಿ: ಪ್ರಭು ಶ್ರೀನಿವಾಸ್ ನಿರ್ದೇಶನದಲ್ಲಿ ಯೋಗೇಶ್ ನಾರಾಯಣ್ ನಿರ್ವಣದಲ್ಲಿ ಮೂಡಿಬರುತ್ತಿರುವ ‘ಡಾಲಿ’ ಸಿನಿಮಾ ಚಿತ್ರೀಕರಣಕ್ಕೆ ಉತ್ತರ ಪ್ರದೇಶವನ್ನೇ ಆಯ್ದುಕೊಂಡಿದೆ. ಧನಂಜಯ ನಾಯಕತ್ವದ ‘ಡಾಲಿ’ ಸಿನಿಮಾದಲ್ಲಿ ಕೇವಲ ಲಕ್ನೋ, ವಾರಾಣಸಿಯನ್ನಷ್ಟೇ ಸೆರೆಹಿಡಿಯಲಾಗಿಲ್ಲ. ಆಗ್ರಾ, ಹರಿದ್ವಾರದ ಹಲವು ಲೊಕೇಷನ್​ಗಳನ್ನು ಬಳಸಿಕೊಳ್ಳಲಾಗಿದೆ. ‘ಉತ್ತರ ಭಾರತದ ಹಲವೆಡೆಗಳಿಂದ ‘ಡಾಲಿ’ ಸಿನಿಮಾ ತೆರೆದುಕೊಳ್ಳಲಿದೆ. ಒಟ್ಟಾರೆ, 15 ದಿನಗಳ ಕಾಲ ಉತ್ತರ ಪ್ರದೇಶದ ಹಲವೆಡೆ ಶೂಟಿಂಗ್ ಮಾಡಿಕೊಂಡಿದ್ದೇವೆ. ಚಿತ್ರಕ್ಕೆ ಹಿಂದಿ ಬ್ಯಾಕ್​ಡ್ರಾಪ್ ಬೇಕಿತ್ತು. ಹಾಗಂತ ಹಿಂದಿ ಭಾಷೆ ಮಾತನಾಡುವ ಸಾಕಷ್ಟು ರಾಜ್ಯಗಳಿದ್ದರೂ, ಉತ್ತರ ಪ್ರದೇಶ ಕೊಂಚ ಹೊಸತೆನಿಸಿತು. ಹಾಗಾಗಿ ‘ಡಾಲಿ’ ಚಿತ್ರೀಕರಣಕ್ಕೆ ಸೂಕ್ತ ಎಂದು ಆಯ್ದುಕೊಂಡೆವು. ಜತೆಗೆ ಇದೊಂದು ಪಯಣದ ಸುತ್ತ ಸಾಗುವ ಸಿನಿಮಾ ಆಗಿರುವುದರಿಂದ ಅಲ್ಲಿನ ಪ್ರದೇಶಗಳನ್ನು ಆಯ್ದುಕೊಂಡೆವು’ ಎನ್ನುತ್ತಾರೆ ಚಿತ್ರದ ನಿರ್ವಪಕ ಯೋಗೇಶ್ ನಾರಾಯಣ್. ಸದ್ಯ ಮೊದಲ ಹಂತದ ಶೂಟಿಂಗ್ ಮುಗಿಸಿಕೊಂಡಿರುವ ಚಿತ್ರತಂಡ, ಇನ್ನೂ ಐದಾರು ದಿನಗಳ ಕಾಲ ಮತ್ತೆ ಉತ್ತರ ಪ್ರದೇಶಕ್ಕೆ ಹೋಗಲು ಪ್ಲಾ್ಯನ್ ಹಾಕಿಕೊಂಡಿದೆ.

‘ಬನಾರಸ್’ ಚಿತ್ರದ 90 ಶೇ. ಭಾಗ ಶೂಟಿಂಗ್ ಕಾಶಿಯಲ್ಲಿ ಮಾಡಿದ್ದೇವೆ. ಅದಕ್ಕೆ ಸಿಟಿ ಆಫ್ ಲವ್, ಸಿಟಿ ಆಫ್ ಲೈಟ್ ಎಂಬ ಹೆಸರಿನಿಂದ ಕರೆಯುತ್ತಾರೆ. ನವಿರಾದ ಪ್ರೀತಿ, ಭಾವನೆಯನ್ನು ಆ ಸ್ಥಳದಲ್ಲಿ ಇಟ್ಟು ನೋಡಿದಾಗ, ಅದರ ಅಂದ ಮತ್ತಷ್ಟು ಹೆಚ್ಚಿತು. ಸುಂದರವಾದ ಹೂವನ್ನು, ಬೇರೆ ಮಣ್ಣಲ್ಲಿ ಹಾಕಿದಾಗ ಅದರ ಸ್ವಾದವೇ ಬೇರೆ ಅಲ್ಲವೇ... ಹಾಗೇ ಇದೂ ಕೂಡ. | ಜಯತೀರ್ಥ ನಿರ್ದೇಶಕ

|ಮಂಜು ಕೊಟಗುಣಸಿ, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net