ಇದು ಮೋಸ ಅಲ್ಲ ರಾಜಿ; ‘ಆಹ್ಲಾದಕರ’ ಅಂದೊಂದಿತ್ತು ಕಾಲ...

Adithi
Published on

ಅದಿತಿ ಪ್ರಭುದೇವ ಕೈಯಲ್ಲಿ 10ಕ್ಕೂ ಹೆಚ್ಚು ಸಿನಿಮಾಗಳಿರುವುದು ಗೊತ್ತೇ ಇದೆ. ಈ ಪೈಕಿ ಮೂರ್ನಾಲ್ಕು ಸಿನಿಮಾಗಳಲ್ಲಿ ಸ್ಟಾರ್ ನಟರೊಂದಿಗೆ ನಟಿಸುತ್ತಿರುವುದು ಬಿಟ್ಟರೆ, ಮಿಕ್ಕಂತೆ ಅದಿತಿ ಕಾಣಿಸಿಕೊಳ್ಳುತ್ತಿರುವುದು ಹೊಸಬರ ಚಿತ್ರಗಳಲ್ಲೇ ಹೆಚ್ಚು. ಅದಿತಿ ಯಾಕೆ ಸ್ಟಾರ್ ಚಿತ್ರಗಳತ್ತ ಹೆಚ್ಚು ಗಮನಹರಿಸುತ್ತಿಲ್ಲ? ಇಂಥದ್ದೊಂದು ಪ್ರಶ್ನೆಯನ್ನು ಅವರ ಮುಂದಿಟ್ಟರೆ, ಮೇನ್​ಸ್ಟ್ರೀಮ್ ಹೀರೋಗಳ ಜತೆ ನಟಿಸಿದರಷ್ಟೇ ನಾಯಕಿಯೇ? ಎಂಬ ಮರುಪ್ರಶ್ನೆಯೊಂದಿಗೆ ಅವರು ಉತ್ತರ ಕೊಡುತ್ತಾರೆ. ಗುರುವಾರ ನರ್ತಕಿ ಚಿತ್ರಮಂದಿರದಲ್ಲಿ ಪ್ರತ್ಯಕ್ಷರಾದರು ಅದಿತಿ. ಅವರು ಬಂದಿದ್ದು ಚಿತ್ರ ನೋಡೋಕಲ್ಲ. ಚಿತ್ರೀಕರಣಕ್ಕಾಗಿ. ವಿನಯ್ ರಾಜಕುಮಾರ್ ಅಭಿನಯದ ‘ಅಂದೊಂದಿತ್ತು ಕಾಲ’ ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದು, ಬ್ರೇಕ್ ಸಂದರ್ಭದಲ್ಲಿ ‘ವಿಜಯವಾಣಿ’ ಜತೆಗೆ ಮನಬಿಚ್ಚಿ ಮಾತನಾಡಿದರು.

‘ಮೇನ್​ಸ್ಟ್ರೀಮ್ ಹೀರೋಗಳ ಜತೆಗೆ ಸಿನಿಮಾ ಮಾಡಿದರೆ, ಅವರೊಂದಿಗೆ ನಾಯಕಿಯಾಗಿ ನಟಿಸಿದರಷ್ಟೇ ನಾಯಕಿ ಎಂಬ ಹಣೆಪಟ್ಟಿ ಚಾಲ್ತಿಯಲ್ಲಿದೆ. ಅದಕ್ಕೆ ದುರದೃಷ್ಟ ಎನ್ನಬೇಕಾಗುತ್ತದೆ. ಹಾಗಂತ ಬರೀ ದೊಡ್ಡದೊಡ್ಡ ನಾಯಕರ ಸಿನಿಮಾ ಸಲುವಾಗಿ ಕಾಯುತ್ತ ಕುಳಿತರೆ, ನನ್ನ ಕರಿಯರ್ ಏನಾಗಬೇಕು? ಬಂದಿರುವ ಅವಕಾಶಗಳನ್ನೆಲ್ಲ ಬದಿಗಿಟ್ಟರೆ ಮೂರ್ಖತನ ಅನಿಸುತ್ತದೆ. ನಮ್ಮ ಚಿತ್ರಕ್ಕೆ ನೀವೇ ನಾಯಕಿ ಆಗಬೇಕೆಂದು ಸಾಕಷ್ಟು ನಿರ್ದೇಶಕರು ಬರ್ತಾರೆ. ಹಾಗೆ ಬಂದ ಹತ್ತೂ ಸಿನಿಮಾ ಒಪ್ಪಿಕೊಳ್ಳಲು ಆಗುವುದಿಲ್ಲ. ಕಣ್ಣು ಮುಚ್ಚಿ ಸಹಿ ಹಾಕುವುದಿಲ್ಲ. ಆ 10ರ ಪೈಕಿ ಮೂರು ಸಿನಿಮಾಗಳನ್ನು ಕಥೆ ಸಲುವಾಗಿ ಓಕೆ ಅಂದರೆ, ಇನ್ನೆರಡು ಸಿನಿಮಾಗಳು ಬೇರೆಬೇರೆ ಕಾರಣಕ್ಕೆ ಒಪ್ಪಿರುತ್ತೇನೆ. ಕೆಲ ಸಿನಿಮಾಗಳಲ್ಲಿ ನಮ್ಮ ಪಾತ್ರದ ಪ್ರಾಮುಖ್ಯತೆ ಇರುವುದಿಲ್ಲ. ಆದರೂ ಆ ಸಿನಿಮಾ ಮಾಡಬೇಕಾಗುತ್ತದೆ. ಆ ಚಿತ್ರದ ಹೀರೋ ಆಗಿರಬಹುದು, ನಿರ್ದೇಶಕರಿರಬಹುದು ... ಅದರಿಂದ ನಮ್ಮ ಮುಂದಿನ ಸಿನಿಮಾಕ್ಕೆ ಸಹಾಯ ಆಗುತ್ತದೆ ಎಂಬ ಕಾರಣವೂ ಇದೆ. ನಮಗೆ ನಾವೇ ಮಾಡಿಕೊಳ್ಳುವ ಮೋಸ ಎನ್ನುವುದಕ್ಕಿಂತ ಕಾಂಪ್ರಮೈಸ್ ಎನ್ನಬಹುದು’ ಎಂಬುದು ಅದಿತಿ ಮಾತು.

ಕನ್ನಡ ಸಿನಿಮಾಗಳಿಗೆ ಮೊದಲ ಪ್ರಾಶಸ್ತ್ಯ: ಕನ್ನಡದಲ್ಲಿ ಸಾಕಷ್ಟು ಚಿತ್ರಗಳಾದವು, ಪರಭಾಷೆಗಳಲ್ಲಿ ಅದಿತಿ ನಟಿಸುವುದು ಯಾವಾಗ? ಎಂಬ ಪ್ರಶ್ನೆಗೆ. ಸದ್ಯಕ್ಕಿಲ್ಲ ಎಂಬ ಉತ್ತರ ಅವರಿಂದ ಬರುತ್ತದೆ. ‘ನಮ್ಮಲ್ಲಿಯೇ ಇಷ್ಟೊಂದು ಪ್ರೀತಿ ತೋರಿಸುವವರಿದ್ದಾರೆ. ಪರಭಾಷೆಗೆ ಹೋದರೆ, ಒಂದಷ್ಟು ಸಂಭಾವನೆ ಹೆಚ್ಚಿಗೆ ಕೊಡಬಹುದು. ಅಷ್ಟಕ್ಕೆ ಏಕೆ ಅಲ್ಲಿಗೆ ಹೋಗಬೇಕು. ಕನ್ನಡದಲ್ಲಿಯೇ ಎರಡು ಸಿನಿಮಾ ಜಾಸ್ತಿ ಮಾಡಿದರೆ ಸಾಕಲ್ವಾ’ ಎಂಬುದು ಅವರ ಮನದಾಳ.

‘ಆಹ್ಲಾದಕರ’ ಅಂದೊಂದಿತ್ತು ಕಾಲ: ‘ಭುವನ್ ಸಿನಿಮಾಸ್ ಬ್ಯಾನರ್​ನಲ್ಲಿ ನಿರ್ಮಾಣ ವಾಗುತ್ತಿರುವ ‘ಅಂದೊಂದಿತ್ತು ಕಾಲ’ ಚಿತ್ರ ಶೀರ್ಷಿಕೆಯೇ ಹೇಳುವಂತೆ ಒಂದು ಫೀಲ್ ಗುಡ್ ಸಿನಿಮಾ. ಈಗಾಗಲೇ ಶೇ. 70 ಭಾಗದ ಶೂಟಿಂಗ್ ಮುಗಿಸಿ ಕೊಂಡಿದ್ದೇವೆ. ಮೂರು ಕಾಲಘಟ್ಟದ ಈ ಕಥೆಯಲ್ಲಿ 10ನೇ ತರಗತಿ, ಕಾಲೇಜು ಜೀವನ, ಪ್ರಸ್ತುತ ಬದುಕು ಎಲ್ಲವನ್ನೂ ತೋರಿಸುತ್ತಿದ್ದೇವೆ. 15 ದಿನದ ಶೂಟಿಂಗ್ ಬಾಕಿ ಇದೆ. ಮುಂದಿನ ವರ್ಷ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ ಇದೆ’ ಎನ್ನುತ್ತಾರೆ ನಿರ್ದೇಶಕ ಕೀರ್ತಿ.

ರಾಜ್ ಕುಟುಂಬದ ಕುಡಿ ಜತೆಗೆ ನಟನೆ

‘ಡಾ. ರಾಜ್​ಕುಮಾರ್ ಅಂದರೆ ಸಾಕು ಅವರ ಸಿನಿಮಾಗಳು ಕಣ್ಣ ಮುಂದೆ ಬಂದು ನಿಲ್ಲುತ್ತವೆ. ಇದೀಗ ಅವರ ಮೊಮ್ಮಗ ವಿನಯ್ ಜತೆಗೆ ನಟಿಸುವ ಅವಕಾಶ ಈ ‘ಅಂದೊಂದಿತ್ತು ಕಾಲ’ ಸಿನಿಮಾದಲ್ಲಿ ಸಿಕ್ಕಿದೆ. ಚಿತ್ರರಂಗಕ್ಕೆ ಎಂಟ್ರಿಕೊಡುವ ಪ್ರತಿಯೊಬ್ಬರ ಕನಸೂ ಅದೇ ಆಗಿರುತ್ತದೆ. ಡಾ. ರಾಜ್ ಕುಟುಂಬದ ಒಂದೇ ಒಂದು ಸಿನಿಮಾದಲ್ಲಾದರೂ ನಟಿಸ ಬೇಕೆಂದು. ಅದು ಈ ಮೂಲಕ ನನಗೆ ಸಿಕ್ಕಿದೆ. ವಿನಯ್ ತುಂಬ ಪ್ರೋಫೆಷನಲ್. ಅಷ್ಟೇ ಸೌಮ್ಯ ಸ್ವಭಾವದವರು. ಚಿತ್ರದಲ್ಲಿ ನಮ್ಮಿಬ್ಬರ ಕೆಮಿಸ್ಟ್ರಿ ತುಂಬ ಫ್ರೆಶ್ ಎನಿಸು ವಂತಿದೆ’ ಎಂದು ವಿನಯ್ ಬಗ್ಗೆಯೂ ಹೇಳಿಕೊಳ್ಳುತ್ತಾರೆ ಅದಿತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net