

ಬೆಂಗಳೂರು: ‘ಇದು ನನ್ನೊಬ್ಬನ ಸಮಸ್ಯೆ ಅಲ್ಲ, ಚಿತ್ರರಂಗದ ಸಮಸ್ಯೆ’.. ಅಷ್ಟು ಹೇಳಿ ಒಂದು ನಿಮಿಷ ಮೌನವಾದರು ನಿರ್ದೇಶಕ ಶಶಾಂಕ್. ಅವರ ನಿರ್ದೇಶನದ ‘ಲವ್ 360’ ಚಿತ್ರವು ಕಳೆದ ವಾರವಷ್ಟೇ ಬಿಡುಗಡೆಯಾಗಿದೆ. ಆದರೆ, ಚಿತ್ರಕ್ಕೆ ಜನ ಬರುತ್ತಿಲ್ಲ, ಕಲೆಕ್ಷನ್ ಇಲ್ಲ ಎಂದು ಶಶಾಂಕ್ ಬೇಸರಗೊಂಡಿದ್ದರು. ಈ ಸಂಬಂಧ ಭಾನುವಾರ ಬೆಳಿಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕಿದ್ದರು. ಈ ವಿಡಿಯೋಗೆ ಯೋಗರಾಜ್ ಭಟ್, ಉಪೇಂದ್ರ ಸೇರಿದಂತೆ ಕೆಲವರು ಸ್ಪಂದಿಸಿದ್ದರು. ಆದರೆ, ಚಿತ್ರರಂಗದ ಬಹಳಷ್ಟು ಜನ ಈ ಬಗ್ಗೆ ಸ್ಪಂದಿಸದಿದ್ದದ್ದು, ಶಶಾಂಕ್ಗೆ ಸಹಜವಾಗಿಯೇ ಆಶ್ಚರ್ಯ ತಂದಿದೆ. ‘ಕಳೆದ 15 ವರ್ಷಗಳಲ್ಲಿ ಹಲವು ಚಿತ್ರಗಳನ್ನು ಮಾಡಿದ್ದೇನೆ. ನನ್ನ ಚಿತ್ರಕ್ಕೆ ಜನ ಬರುತ್ತಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದೇನೆ. ಇದು ಬರೀ ನನ್ನ ಚಿತ್ರದ ಸಮಸ್ಯೆ ಅಲ್ಲ. ಇಡೀ ಚಿತ್ರರಂಗದ ಸಮಸ್ಯೆ. ಒಂದು ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾದಾಗಲೂ ಪ್ರೇಕ್ಷಕರು ಬರದಿರುವುದು ಯಾಕೆ ಎಂದು ಯೋಚಿಸಬೇಕು. ಈ ಕುರಿತು ಕೆಲವು ಆತ್ಮೀಯರು ಪ್ರತಿಕ್ರಿಯಿಸಿದ್ದು ಬಿಟ್ಟರೆ, ಮಿಕ್ಕಂತೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ’ ಎನ್ನುತ್ತಾರೆ ಶಶಾಂಕ್.
ಸಣ್ಣ ಚಿತ್ರಗಳ ಪಾಡೇನು?: ಈ ನಿಟ್ಟಿನಲ್ಲಿ ಬಂದು ಚಿತ್ರ ನೋಡಿ ಎಂದು ಪ್ರೇಕ್ಷಕರನ್ನು ಒತ್ತಾಯ ಮಾಡಿ ಎಂದು ಹೇಳುವುದಕ್ಕೆ ಆಗುವುದಿಲ್ಲ ಎನ್ನುವ ಶಶಾಂಕ್, ‘ಅಂತಿಮವಾಗಿ ಯಾವ ಚಿತ್ರ ನೋಡಬೇಕು ಎನ್ನುವುದು ಅವರ ಆಯ್ಕೆ. ಬರೀ ದೊಡ್ಡ ಚಿತ್ರಗಳೇ ನೋಡಬೇಕೆಂದರೆ, ಸಣ್ಣ ಚಿತ್ರಗಳ ಕಥೆ ಏನು? ದೊಡ್ಡ ಚಿತ್ರಗಳು ವರ್ಷಕ್ಕೆ ಐದು ಬರಬಹುದು. ಮಿಕ್ಕಂತೆ ಸಣ್ಣ ಚಿತ್ರಗಳೇ ದೊಡ್ಡ ಸಂಖ್ಯೆಯಲ್ಲಿ ಬರುತ್ತವೆ. ಆ ಚಿತ್ರಗಳನ್ನು ನೋಡದಿದ್ದರೆ ನಿರ್ಮಾಪಕರ, ಪ್ರದರ್ಶಕರ ಕಥೆ ಏನು?’ ಎಂದು ಅವರು ಪ್ರಶ್ನಿಸುತ್ತಾರೆ.
ಮಾತೃಭಾಷೆಗೆ ಪ್ರಾಮುಖ್ಯತೆ ಕೊಡಿ: ಪ್ರಮುಖವಾಗಿ ಇದು ದುಡ್ಡಿನ ವಿಷಯ ಅಲ್ಲ ಎನ್ನುತ್ತಾರೆ ಶಶಾಂಕ್. ‘ನಮ್ಮ ಚಿತ್ರದ ಬಜೆಟ್ನ ಶೇ. 60ರಷ್ಟು ಸ್ಯಾಟಿಲೈಟ್ ಮತ್ತು ಡಿಜಿಟಲ್ ಹಕ್ಕುಗಳಿಂದ ಬಂದಿದೆ. ಇನ್ನು ಶೇ. 20ರಷ್ಟು ಡಬ್ಬಿಂಗ್ನಿಂದ ಬರಬಹುದು. ಉಳಿಯುವುದು ಶೇ. 20ರಷ್ಟು ಮಾತ್ರ. ಇಲ್ಲಿ ದುಡ್ಡು ಮುಖ್ಯವಲ್ಲ. ಒಂದೊಳ್ಳೆಯ ಚಿತ್ರಕ್ಕೆ ಜನ ಬೆಂಬಲ ಕೊಟ್ಟರೆ, ಆಗ ಇನ್ನಷ್ಟು ಚಿತ್ರ ಮಾಡುವುದಕ್ಕೆ ಸ್ಪೂರ್ತಿ ಬರುತ್ತದೆ. ಮುಂದಿನ ವಾರ ‘ಲೈಗರ್’ ಸಿನಿಮಾ ಬರುತ್ತದೆ. ಆ ಚಿತ್ರವನ್ನು ನಮ್ಮ ಕನ್ನಡಿಗರೇ ನೋಡುತ್ತಾರೆ. ನಿಮ್ಮ ಮಾತೃಭಾಷೆಯಲ್ಲಿ ಒಳ್ಳೆಯ ಸಿನಿಮಾ ಬಂದಿರುವಾಗ ಬೆಂಬಲ ಕೊಡಿ ಎಂದು ಕೇಳುವುದರಲ್ಲಿ ತಪ್ಪೇನು ’ ಎನ್ನುತ್ತಾರೆ ಶಶಾಂಕ್.