ರೋಡ್​ ಶೋ ಮೂಲಕ 'ಬನಾರಸ್​' ಚಿತ್ರದ ಪ್ರಚಾರ ಮಾಡಿದ ಝೈದ್​- ಸೋನಲ್​

Banaras
Published on

ಬೆಂಗಳೂರು: 'ಬನಾರಸ್​' ಚಿತ್ರದ ಬಿಡುಗಡೆಗೆ ಇನ್ನೈದು ದಿನಗಳಷ್ಟೇ ಉಳಿದಿದೆ ಎನ್ನುವಾಗ citfrd ಚಿತ್ರದ ನಾಯಕ ಝೈದ್​ ಖಾನ್​ 'ಬನಾರಸ್​' ಯಾತ್ರೆ ಆರಂಭಿಸಿದ್ದಾರೆ. ಮೊದಲ ಹಂತವಾಗಿ ಬೆಂಗಳೂರಿನಿಂದ ಮೈಸೂರಿನವರಿಗೆ ರೋಡ್​ ಶೋ ಮಾಡುವ ಮೂಲಕ ಚಿತ್ರದ ಪ್ರಚಾರ ಮಾಡಿ ಬಂದಿದ್ದಾರೆ. ಝೈದ್​ ಜತೆಗೆ ಈ ಯಾತ್ರೆಯಲ್ಲಿ ನಾಯಕಿ ಸೋನಲ್​ ಸಹ ಇದ್ದರು.

ಭಾನುವಾರ ಬೆಳಿಗ್ಗೆ ಬೆಂಗಳೂರಿನ ಟೌನ್ ಹಾಲ್‌ನಿಂದ ಪ್ರಾರಂಭವಾಗಿದ್ದು, ಸಂಜೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅಂತ್ಯವಾಗಿದೆ. ಈ ವೇಳೆ ಒಂದಿಷ್ಟು ದೇವಸ್ಥಾನ, ದರ್ಗಾ ಭೇಟಿ ನೀಡಿ, ಒಂದಿಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ರಾತ್ರಿ ಮೊದಲ ಹಂತದ ಯಾತ್ರೆ ಮುಗಿಸಿದ ಚಿತ್ರತಂಡ ಬೆಂಗಳೂರಿಗೆ ವಾಪಸ್ಸಾಗಿದೆ. ಚಿತ್ರತಂಡಕ್ಕೆ ಹೋದ ಕಡೆಯಲ್ಲೆಲ್ಲ ಒಳ್ಳೆಯ ಸ್ಪಂದನೆ ಸಿಕ್ಕಿದೆಯಂತೆ. ಝೈದ್​ ಭೇಟಿ ಮಾಡಿದ ಜನರೆಲ್ಲ ಪ್ರೋತ್ಸಾಹದ ಮಾತುಗಳನ್ನಾಡಿದ್ದಾರಂತೆ. ಇದೆಲ್ಲದರಿಂದ ಖುಷಿಯಾಗಿರುವ ಝೈದ್​ ಇನ್ನೊಂದು ಹಂತದ ಯಾತ್ರೆಗೆ ಸಿದ್ಧತೆ ನಡೆಸಿದ್ದಾರೆ.

ಅಂದಹಾಗೆ, 'ಬನಾರಸ್​' ಚಿತ್ರದ ಕರ್ನಾಟಕದ ವಿತರಣೆಯ ಹಕ್ಕುಗಳನ್ನು ಡಿ-ಬೀಟ್ಸ್​​ ಸಂಸ್ಥೆಯು ಪಡೆದಿದೆ ಎಂದು ಸುದ್ದಿಯಾಗಿತ್ತು. ಆದರೆ, ಈಗ ಪ್ರತಿಷ್ಠಿತ ಕೆ.ವಿ.ಎನ್​. ಪ್ರೊಡಕ್ಷನ್ಸ್​ ಸಂಸ್ಥೆಯು ಚಿತ್ರದ ಹಕ್ಕುಗಳನ್ನು ಪಡೆದಿದ್ದು, ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ. ಮಿಕ್ಕಂತೆ ಬೇರೆ ರಾಜ್ಯಗಳಲ್ಲಿ ಆಯಾ ಭಾಷೆಗಳ ಪ್ರತಿಷ್ಠಿತ ಸಂಸ್ಥೆಗಳ, ಆಯಾ ಅವತರಣಿಕೆಗಳನ್ನು ಹಕ್ಕುಗಳನ್ನು ಪಡೆದಿವೆ.

'ಬನಾರಸ್​' ಒಂದು ವಿಭಿನ್ನ ಪ್ರೇಮಕಥೆಯ ಚಿತ್ರ. ಟೈಮ್​ಟ್ರಾವಲ್​ ಕುರಿತಾದ ಚಿತ್ರ. ಜಯತೀರ್ಥ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ತಿಲಕ್​ರಾಜ್​ ಭಲ್ಲಾಳ್​ ನಿರ್ಮಿಸಿದ್ದು, ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿದ್ದಾರೆ. ಸುಜಯ್​ ಶಾಸ್ತ್ರಿ, ಅಚ್ಯುತ್​ ಕುಮಾರ್​ ಸೇರಿದಂತೆ ಹಲವು ಪ್ರತಿಭಾವಂತ ನಟ-ನಟಿಯರು ಈ ಚಿತ್ರದಲ್ಲಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net