ಸ್ವದೇಶದಲ್ಲೇ ಯುವರತ್ನ ಗಾನಬಜಾನಾ, ಆಗಸ್ಟ್- ಸೆಪ್ಟೆಂಬರ್​ನಲ್ಲಿ ಬಿಡುಗಡೆ ಸಾಧ್ಯತೆ

page 10 1
Published on

ಬೆಂಗಳೂರು: ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಪುನೀತ್ ಅಭಿನಯದ ‘ಯುವರತ್ನ’ ಚಿತ್ರದ ಚಿತ್ರೀಕರಣ ಇಷ್ಟರಲ್ಲಾಗಲೇ ಮುಗಿದಿರಬೇಕಿತ್ತು. ಮಾತಿನ ಭಾಗದ ಚಿತ್ರೀಕರಣ ಮುಗಿಸಿದ್ದ ಚಿತ್ರತಂಡ, ಯೂರೋಪ್​ಗೆ ಹಾಡಿನ ಚಿತ್ರೀಕರಣ ಮಾಡುವುದಕ್ಕೆ ಹಾರಬೇಕಿತ್ತು. ಆದರೆ, ಲಾಕ್​ಡೌನ್​ನಿಂದ ಚಿತ್ರತಂಡದ ಯೋಚನೆಗಳೆಲ್ಲಾ ತಲೆ ಕೆಳಗಾಯಿತು.

ಫಾರಿನ್​ನಲ್ಲಿ ಎರಡು ಹಾಡುಗಳ ಚಿತ್ರೀಕರಣ ಮಾಡುವುದಕ್ಕೆ ಯೋಚಿಸಿದ್ದ ಚಿತ್ರತಂಡ, ಇದೀಗ ಆ ಯೋಚನೆಯನ್ನು ಕೈಬಿಟ್ಟಿದೆ. ಸ್ವದೇಶದಲ್ಲೇ ಹಾಡುಗಳ ಚಿತ್ರೀಕರಣ ಮುಗಿಸಿ, ಆಗಸ್ಟ್ ಅಥವಾ ಸೆಪ್ಟೆಂಬರ್​ನಲ್ಲಿ ಚಿತ್ರ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.

ಈ ಕುರಿತು ಮಾತನಾಡುವ ನಿರ್ದೇಶಕ ಸಂತೋಷ್ ಆನಂದರಾಮ್ ‘ಬೇರೆ ದೇಶಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಭಾರತದಲ್ಲೇ ಚಿತ್ರೀಕರಣ ಮಾಡಬೇಕು, ಹಾಗಂತ ಯಾವಾಗ ಎಂದೂ ಗೊತ್ತಿಲ್ಲ. ಒಂದು ಹಾಡನ್ನು ಗೋವಾದಲ್ಲಿ ಚಿತ್ರೀಕರಣ ಮಾಡುವುದಕ್ಕೆ ತೀರ್ವನಿಸಿದ್ದೇವೆ. ಇನ್ನೊಂದು ಹಾಡಿನ ಚಿತ್ರೀಕರಣ ಎಲ್ಲಿ ಎಂದು ಇನ್ನೂ ತೀರ್ಮಾನ ಆಗಿಲ್ಲ. ಸದ್ಯದಲ್ಲೇ ಆ ಬಗ್ಗೆ ಸ್ಪಷ್ಟತೆ ಸಿಗಲಿದೆ’ ಎನ್ನುತ್ತಾರೆ ಅವರು.

ಇನ್ನು ಚಿತ್ರದ ಪ್ರಗತಿಯ ಬಗ್ಗೆ ಮಾತನಾಡುವ ಅವರು, ‘ಈಗಾಗಲೇ ಫಸ್ಟ್ ಹಾಫ್​ನ ಡಬ್ಬಿಂಗ್ ಮುಗಿದಿದ್ದು, ಮುಂದಿನ ವಾರದಿಂದ ಸೆಕೆಂಡ್ ಹಾಫ್​ನ ಡಬ್ಬಿಂಗ್ ಪ್ರಾರಂಭವಾಗಲಿದೆ. ಚಿತ್ರೀಕರಣ ಮತ್ತು ಪೋಸ್ಟ್- ಪ್ರೊಡಕ್ಷನ್ ಕೆಲಸಗಳು ಮುಗಿಯುವುದಕ್ಕೆ ಎರಡು ತಿಂಗಳು ಬೇಕು. ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಸಂತೋಷ್ ಆನಂದರಾಮ್ ‘ಯುವರತ್ನ’ ಚಿತ್ರದಲ್ಲಿ ಪುನೀತ್​ಗೆ ನಾಯಕಿಯಾಗಿ ಸಾಯೇಷಾ ಸೆಹಗಲ್ ನಟಿಸಿದ್ದು, ಮಿಕ್ಕಂತೆ ಧನಂಜಯ್, ದಿಗಂತ್, ಸೋನು ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net