

ಯುಗಾದಿ ಹಬ್ಬ ಎನ್ನುವುದು ಒಂದು ಸಂಭ್ರಮವಾದರೆ, ಅದೇ ದಿನ ನಮ್ಮ ತಾಯಿಯ ಹುಟ್ಟುಹಬ್ಬವೂ ಇರುವುದರಿಂದ ಮನೆಯಲ್ಲಿ ಡಬ್ಬಲ್ ಸಂಭ್ರಮ. ಅಂದು ಸಂಬಂಧಿಕರನ್ನು ಭೇಟಿ ಮಾಡುವುದು ಇರುತ್ತದೆ. ಟಿವಿ ಹಾಕಿದರೆ ಯುಗಾದಿ ಕುರಿತ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಯುಗಾದಿ ಕುರಿತ ಹಾಡುಗಳು ಕೇಳಿಸುತ್ತವೆ. ಈ ಪೈಕಿ, ನನಗೆ ‘ಯುಗಯುಗಾದಿ ಕಳೆದರೂ ಹಾಡು ...’ ಬಹಳ ಇಷ್ಟ. ಅದು ಅಪ್ಪನ ಫೇವರಿಟ್ ಹಾಡು ಸಹ. ಅಂದು ನಾನು ಮನೆಯವರ ಜತೆಗೆ ಹೆಚ್ಚು ಸಮಯ ಕಳೆಯುತ್ತೇನೆ. ಅಮ್ಮ ಏನಾದರೂ ಸಿಹಿತಿಂಡಿಗಳನ್ನು ಮಾಡುತ್ತಾರೆ. ಪಾಯಸವಂತೂ ಇದ್ದೇ ಇರುತ್ತದೆ. ನಾನು ಸ್ವಲ್ಪ ಸಹಾಯ ಮಾಡುವುದು ಬಿಟ್ಟರೆ, ಮಿಕ್ಕಂತೆ ಅಮ್ಮನೇ ಎಲ್ಲವನ್ನೂ ಮಾಡುತ್ತಾರೆ. ಅಮ್ಮ ಬಹಳ ಚೆನ್ನಾಗಿ ಅಡುಗೆ ಮಾಡುತ್ತಾರೆ. ಅವರ ಕೈರುಚಿ ನನಗೆ ಬಹಳ ಇಷ್ಟ. ನಮ್ಮ ಕುಟುಂಬದಲ್ಲೇ ಅವರ ಅಡುಗೆ ಬಹಳ ಜನಪ್ರಿಯ. ಇನ್ನು, ಪೂಜೆ ಎಲ್ಲವನ್ನೂ ಅಪ್ಪ ನೋಡಿಕೊಳ್ಳುತ್ತಾರೆ.
| ರಾಧಿಕಾ ನಾರಾಯಣ್
ಯುಗಾದಿ, ಬೇವು-ಬೆಲ್ಲದ ಹಬ್ಬ. ಚಿಕ್ಕ ವಯಸ್ಸಿನಲ್ಲಿ ಮೊದಲು ಬೇವು ತಿನ್ನಿಸಿ, ಬೆಲ್ಲ ತಿನ್ನಿಸುತ್ತಿದ್ದರು. ಅಪ್ಪ, ತಾತ ಎಲ್ಲರೂ ಬೇವು-ಬೆಲ್ಲ ತಿನ್ನುವ ಮಹತ್ವವನ್ನು ಹೇಳುತ್ತಿದ್ದರು. ಜೀವನದಲ್ಲಿ ಕಷ್ಟ-ಸುಖ ಎರಡೂ ಬರುತ್ತದೆ, ಎರಡನ್ನೂ ಸರಿಸಮನಾಗಿ ತೆಗೆದುಕೊಳ್ಳುವುದೇ ಈ ಹಬ್ಬದ ವಿಶೇಷತೆ ಎಂದು ಅವರು ಅರ್ಥ ಮಾಡಿಸುತ್ತಿದ್ದರು. ಮೆನಯಲ್ಲಿ ಕೇಳಿದ್ದೆಲ್ಲವನ್ನೂ ನಾನು ಶಾಲೆಯಲ್ಲಿ ಹೇಳುತ್ತಿದ್ದೆ. ಹಬ್ಬ ಬಂದರೆ ಸಾಕು, ನಾನು ಅಪ್ಪನಿಗೆ ಟ್ಯಾಕ್ಸ್ ಹಾಕುವುದಕ್ಕೆ ಕಾಯುತ್ತಿದ್ದೆ. ಹಬ್ಬ ಬಂತು, ಬಟ್ಟೆ ಕೊಡಿಸು ಎಂದು ಪೀಡಿಸುತ್ತಿದೆ. ಬಟ್ಟೆ ಕೊಡಿಸುತ್ತಾರೆ ಎಂಬ ಕಾರಣಕ್ಕೆ ಹಬ್ಬ ಬಂದರೆ ಖುಷಿಯಾಗುತ್ತಿತ್ತು. ಮೆನಯಲ್ಲಿ ಹಬ್ಬದ ಅಡುಗೆ ಮಾಡುತ್ತಿದ್ದರು. ಹೋಳಿಗೆ ಎಂದರೆ ಇಷ್ಟ. ಹೋಳಿಗೆ ತಿನ್ನುವುದಕ್ಕೆ ಒಂದು ನೆಪಕ್ಕಾಗಿ ಕಾಯುತ್ತಿರುತ್ತೇವೆ. ಇನ್ನು, ಪೂಜೆಯ ಉಸ್ತುವಾರಿಯಲ್ಲ ಅಮ್ಮನದೇ. ನಾನು ಬರೀ ಪ್ರಸಾದ ತಿನ್ನುವುದಕ್ಕೆ ಹೋಗುತ್ತೇನೆ ಅಷ್ಟೇ. ಸಾಮಾನ್ಯವಾಗಿ, ನಮ್ಮ ಮನೆಯಲ್ಲಿ ಎಲ್ಲ ಹಬ್ಬಗಳನ್ನು ಮನೆ ಮಟ್ಟಿಗೆ ಮಾಡಿಕೊಳ್ಳುತ್ತೇವೆ. ಗ್ರಾಂಡ್ ಆಗಿ ಯಾವತ್ತೂ ಮಾಡಲಿಲ್ಲ. ನಮಗೆ ಹಬ್ಬ ಎಂದರೆ ಹೊಸ ಬಟ್ಟೆ, ಊಟ ಅಷ್ಟೇ. ಈ ಚಿಕ್ಕಚಿಕ್ಕ ವಿಷಯಗಳೇ ನಮ್ಮ ಸಂಭ್ರಮವನ್ನು ಇನ್ನಷ್ಟು ಹೆಚ್ಚು ಮಾಡಿಸುತ್ತಿತ್ತು. ಆದರೆ, ಬಾಲ್ಯದಲ್ಲಿ ಕುಟುಂಬದವರೆಲ್ಲ ಒಟ್ಟಿಗೆ ಸೇರುತ್ತಿದ್ದೆವು. ಎಲ್ಲರ ಮನೆಯ ವಿಶೇಷ ತಿನಿಸುಗಳನ್ನು ಒಟ್ಟಿಗೆ ತಿನ್ನುತ್ತಿದ್ದೆವು. ಆದರೆ, ಈಗ ಎಲ್ಲರೂ ಕೆಲಸ, ವರ್ಕ್ ಫ್ರಮ್ ಹೋಂನಲ್ಲಿ ಬಿಜಿ ಇರುವುದರಿಂದ ಮೊದಲಿನಂತೆ ಎಲ್ಲರೂ ಸಿಗುವುದು ಕಷ್ಟವಾಗುತ್ತಿದೆ. ಈ ಹಬ್ಬದಲ್ಲಿ ಎಂದಿನಂತೆ ಭರ್ಜರಿ ಊಟವಿರುತ್ತದೆ.
| ಅರ್ಚನಾ ಕೊಟ್ಟಿಗೆ
ನಾನು ಹುಟ್ಟಿ-ಬೆಳೆದಿದ್ದು ಮೈಸೂರಿನಲ್ಲಾದರೂ, ಹಾಸನ ನಮ್ಮ ತಂದೆ ಮನೆಯಾದ್ದರಿಂದ ಅಲ್ಲಿ ಎಲ್ಲರೂ ಸೇರುತ್ತಿದ್ದೆವು. ಕಸಿನ್ಗಳೆಲ್ಲರೂ ಬರುತ್ತಿದ್ದರು. ಮೊಮ್ಮಕ್ಕಳಿಗೆ ಯಾವ್ಯಾವ ಸಿಹಿತಿಂಡಿ ಇಷ್ಟವೋ, ಅವೆಲ್ಲವನ್ನೂ ನಮ್ಮಜ್ಜಿ ಮಾಡಿಕೊಡುತ್ತಿದ್ದರು. ಈಗ ಅಜ್ಜಿ ಇಲ್ಲ. ಎಲ್ಲ ಕಸಿನ್ಗಳು ಸಹ ಬಿಜಿಯಾಗಿರುತ್ತಾರೆ. ಅವೆಲ್ಲವನ್ನೂ ನಾನು ಮಿಸ್ ಮಾಡಿಕೊಳ್ಳುತ್ತೇನೆ. ಧಾರಾವಾಹಿಯಲ್ಲಿ ಹಬ್ಬದ ಎಪಿಸೋಡ್ ಇದೆ. ಅಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಸಂಭ್ರಮಿಸುವ ದೃಶ್ಯಗಳಿವೆ. ಮನೆಯಲ್ಲಿ ಬಹಳ ಸರಳವಾಗಿ ಪೂಜೆ ನಡೆಯುತ್ತದೆ. ಮುಂಚೆಲ್ಲ ಹಬ್ಬಗಳಿಗೆ ಹೊಸಬಟ್ಟೆ ಕೊಡಿಸುತ್ತಿದ್ದರು. ಈಗ ಯಾವಾಗಲೂ ಹೊಸ ಬಟ್ಟೆಗಳ್ನು ಖರೀದಿಸುವುದರಿಂದ, ಹಬ್ಬಕ್ಕಾಗಿ ಪ್ರತ್ಯೇಕವಾಗಿ ಬಟ್ಟೆ ಖರೀದಿಸುವ ಪರಿಪಾಠ ಬಹಳ ಕಡಿಮೆಯಾಗಿದೆ. ಹಬ್ಬ ಸಹ ಸಾಧಾರಣ ಎನ್ನುವಂತಾಗಿದೆ. ಪೂಜೆ ಮಾಡಿ, ದೇವಸ್ಥಾನಕ್ಕೆ ಹೋಗಿ ಬಂದು, ಊಟ ಮಾಡುವುದಕ್ಕೆ ಹಬ್ಬ ಸೀಮಿತವಾಗುತ್ತಿದೆ.
| ತೇಜಸ್ವಿನಿ ಶೇಖರ್
ನಮ್ಮ ಮನೆಯಲ್ಲಿ ಸಂಕ್ರಾಂತಿ ಮತ್ತು ಯುಗಾದಿಯನ್ನು ದೊಡ್ಡ ಮಟ್ಟದಲ್ಲಿ ಆಚರಿಸುತ್ತೇವೆ. ಮನೆಯಲ್ಲಿ ವಿಶೇಷ ಪೂಜೆ ಇರುತ್ತದೆ. ಜೊತೆಗೆ ಕೂತು ಊಟ ಮಾಡುತ್ತೇವೆ. ನಮ್ಮ ತಂದೆ ಮನೆ ಕಡೆ ಯುಗಾದಿ ಹಬ್ಬ ಇಲ್ಲ. ಅಮ್ಮನ ಕಡೆ ದೊಡ್ಡ ಮಟ್ಟದಲ್ಲಿ ಆಚರಿಸಲಾಗುತ್ತದೆ. ನಮ್ಮ ತಾಯಿಯ ಬಳಗ ದೊಡ್ಡದು. ಸಾಮಾನ್ಯವಾಗಿ, ನನ್ನ ಕಸಿನ್ಗಳನ್ನು ಭೇಟಿ ಮಾಡುವುದು ಕಷ್ಟವಾಗುತ್ತದೆ. ಆದರೆ, ಯುಗಾದಿ ಸಂದರ್ಭದಲ್ಲಿ ಎಲ್ಲರನ್ನೂ ಭೇಟಿ ಮಾಡಿ, ಜತೆಯಾಗಿ ಇರುವ ಅವಕಾಶ ಸಿಗುತ್ತಿತ್ತು. ಹಾಗಾಗಿ, ಯುಗಾದಿ ಹಬ್ಬ ನನಗೆ ವಿಶೇಷ. ನಾವೆಲ್ಲರೂ ಹೊಸ ಬಟ್ಟೆ ತೊಟ್ಟು, ಒಟ್ಟಿಗೆ ಊಟ ಮಾಡುತ್ತಿದ್ದೆವು. ಬಾಲ್ಯದ ಈ ನೆನಪು ಮರೆಯುವುದಕ್ಕೆ ಸಾಧ್ಯವಿಲ್ಲ. ಈಗ ಅವರೆಲ್ಲರೂ ಬೇರೆ ದೇಶಗಳಲ್ಲಿರುವುದರಿಂದ, ಮುಂಚಿನ ತರಹ ಭೇಟಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹಬ್ಬದ ಸಂದರ್ಭದಲ್ಲಿ ಹೆಚ್ಚೆಂದರೆ ವಿಡಿಯೋ ಕಾಲ್ ಮಾಡಿ, ಎಲ್ಲರಿಗೂ ಶುಭ ಹಾರೈಸಬಹುದು. ಮಿಕ್ಕಂತೆ ಎಲ್ಲರೂ ಮನೆಯಲ್ಲೇ ಒಟ್ಟಿಗೆ ಕೂತು ಊಟ ಮಾಡುತ್ತೇವೆ. ಬೇರೆ ಸಮಯದಲ್ಲಿ ಕೆಲಸ, ಓದು ಎಂದು ಹೊರಗಿದ್ದಾಗ ಅಲ್ಲೇ ಊಟ ಮಾಡಬೇಕಾಗುತ್ತದೆ. ಆದರೆ, ಯುಗಾದಿ ಹಬ್ಬದಂದು ಮೂರು ಹೊತ್ತೂ ಮನೆಯಲ್ಲೇ ಊಟ. ಮನೆಯಲ್ಲಿ ಒಬ್ಬಟ್ಟು ಮಾಡುತ್ತಾರೆ. ನಮ್ಮನೆಯಲ್ಲಿ ಬಾಳೆಹಣ್ಣು ಮತ್ತು ಬೆಲ್ಲ ಹಾಕಿ ವಿಶೇಷ ಒಬ್ಬಟ್ಟು ಮಾಡುತ್ತಾರೆ. ಅದು ರುಚಿಯಷ್ಟೇ ಅಲ್ಲ, ಆರೋಗ್ಯಕರ ಸಹ. ಹಾಗಾಗಿ, ಅದನ್ನು ಇಷ್ಟಪಟ್ಟು ತಿನ್ನುತ್ತೇನೆ.
| ಅಂಜಲಿ ಅನೀಶ್