

ಬೆಂಗಳೂರು: ವಿಭಿನ್ನ ಶೀರ್ಷಿಕೆಗಳನ್ನು ಇಡುವುದರಲ್ಲಿ ಯೋಗರಾಜ್ ಭಟ್ ಜನಪ್ರಿಯರು. ತಮ್ಮ ಎಲ್ಲ ಚಿತ್ರಗಳಿಗೆ ಗಮನಸೆಳೆಯುವ ಶೀರ್ಷಿಕೆಗಳನ್ನು ಇಡುತ್ತಲೇ ಬಂದಿರುವ ಅವರು, ಇದೀಗ ಶಿವರಾಜಕುಮಾರ್ ಮತ್ತು ಪ್ರಭುದೇವ ಅಭಿನಯದ ಹೊಸ ಚಿತ್ರಕ್ಕೆ ‘ಕರಟಕ ದಮನಕ’ ಎಂಬ ಹೆಸರಿಟಿದ್ದಾರೆ. ಇದನ್ನು ಸೋಷಿಯಲ್ ಮೀಡಿಯಾ ಮೂಲಕ ಘೋಷಿಸಿದ್ದಾರೆ.
‘ಕರಟಕ ದಮನಕ’ ಎಂಬ ಹೆಸರು ಕೇಳುತ್ತಿದ್ದಂತೆಯೇ, ಪಂಚತಂತ್ರದ ‘ಮಿತ್ರ ಭೇದ’ ಕಥೆಯು ನೆನಪಾಗಬಹುದು. ಆ ಕಥೆಯ ಎರಡು ಪ್ರಮುಖ ಪಾತ್ರಗಳ ಹೆಸರನ್ನು ಅವರು ಈಗ ಚಿತ್ರಕ್ಕಿಟ್ಟಿದ್ದಾರೆ. ಶೀರ್ಷಿಕೆ ಕ್ಯಾಚಿಯಾಗಿದೆ ಎಂಬ ಕಾರಣಕ್ಕೆ ಇಟ್ಟರಾ? ಅಥವಾ ‘ಮಿತ್ರ ಭೇದ’ದ ಕರಣಕ ದಮನಕನಿಗೂ ಈ ‘ಕರಟಕ ದಮನಕ’ನಿಗೂ ಏನಾದರೂ ಹೋಲಿಕೆ ಅಥವಾ ಸಂಬಂಧವಿದೆಯಾ? ಎಂಬ ವಿಷಯವನ್ನು ಅವರು ಇನ್ನಷ್ಟೇ ಸ್ಪಷ್ಟಪಡಿಸಬೇಕಿದೆ.
ಅಂದಹಾಗೆ, ‘ಕರಟಕ ದಮನಕ’ ಚಿತ್ರದ ಚಿತ್ರೀಕರಣ ಆಗಸ್ಟ್ ತಿಂಗಳ ಕೊನೆಯಲ್ಲಿ ಪ್ರಾರಂಭವಾಗಿದ್ದು, ಶಿವರಾಜಕುಮಾರ್, ಪ್ರಭುದೇವ, ರಾಕ್ಲೈನ್ ವೆಂಕಟೇಶ್ ಮುಂತಾದವರು ಅಭಿನಯಿಸಿರುವ ಕೆಲವು ಪ್ರಮುಖ ದೃಶ್ಯಗಳನ್ನು ಯೋಗರಾಜ್ ಭಟ್ ಚಿತ್ರೀಕರಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಜತೆಗೆ, ಈ ಚಿತ್ರವನ್ನೂ ನಿರ್ವಿುಸುತ್ತಿದ್ದಾರೆ ರಾಕ್ಲೈನ್ ವೆಂಕಟೇಶ್.