

ಬೆಂಗಳೂರು: ಯೋಗರಾಜ್ ಭಟ್ ಪ್ರಸ್ತುತತೆಯನ್ನು ಗಮನದಲ್ಲಿಟ್ಟುಕೊಂಡು ಒಂದಿಲ್ಲೊಂದು ಪ್ರಯೋಗಗಳನ್ನು ಮಾಡುತ್ತಲೇ ಇರುತ್ತವೆ. ಅದು ಸಿನಿಮಾ ಇರಲಿ ಮಗದೊಂದೇ ಇರಲಿ. ಈಗ ಕರೊನಾ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಡಾಕ್ಯುಮಂಟರಿ ಮತ್ತು ಮ್ಯೂಸಿಕ್ ವಿಡಿಯೋ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷ ಏನೆಂದರೆ, ಈ ವಿಡಿಯೋದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ, ಇನ್ಫೋಸಿಸ್ನ ಸುಧಾಮೂರ್ತಿ, ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಇವರೆಲ್ಲರೂ ಈ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹಾಗಾದರೆ ವಿಡಿಯೋದಲ್ಲೇನಿರಲಿದೆ? ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ಬಿಬಿಎಂಪಿ ಪೌರಕಾರ್ಮಿಕರು ಸೇರಿ ಎಲ್ಲ ಕರೊನಾ ವಾರಿಯರ್ಸ್ಗೂ ಈ ಹಾಡಿನ ಮೂಲಕ ನಮನ ಸಲ್ಲಿಸಲಿದ್ದಾರೆ. ಅಂದಹಾಗೆ, ಈ ಮ್ಯೂಸಿಕ್ ವಿಡಿಯೋಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದು, ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ವಿಜಯ್ ಪ್ರಕಾಶ್ ಹಿನ್ನೆಲೆ ಧ್ವನಿ ನೀಡಲಿದ್ದು, ಮುಂದಿನ ವಾರ ಹಾಡು ಬಿಡುಗಡೆ ಆಗಲಿದೆ.