ಮೇಲೇಳಲಿಲ್ಲ ಕೆಳಗಿಳಿಯಲಿಲ್ಲ, ಬಾಲಿವುಡ್ 50-50: ಸಮಗ್ರ ನೋಟ-2021, ಹಿಂದಿ ಚಿತ್ರರಂಗ..

Cinema
Published on
ಕರೊನಾ ಹೊಡೆತಕ್ಕೆ ನಲುಗಿದ್ದ ಬಾಲಿವುಡ್ ಚಿತ್ರರಂಗಕ್ಕೆ 2021 ಹೆಚ್ಚೇನೂ ಲಾಭ ತಂದುಕೊಡಲಿಲ್ಲ. ಸ್ಟಾರ್ ನಟರ ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದಕ್ಕಿಂತ ಹೆಚ್ಚಾಗಿ ಒಟಿಟಿಯಲ್ಲಿಯೇ ಸ್ಟ್ರೀಮ್ ಆದವು. ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಕೆಲವು ಮಕಾಡೆ ಮಲಗಿದರೆ, ಇನ್ನೂ ಕೆಲವು ಗಳಿಕೆಯಲ್ಲಿ ಕಮಾಲ್ ಮಾಡಿದವು. ಮೂರು ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬಂದ ಅಕ್ಷಯ್ ಕುಮಾರ್ ಈ ವರ್ಷವೂ ಟಾಪ್ ನಟ ಎನಿಸಿಕೊಂಡರು. ದಿಲೀಪ್ ಕುಮಾರ್, ಸಿದ್ಧಾರ್ಥ್ ಶುಕ್ಲಾ ಸೇರಿ ಕೆಲ ಸ್ಟಾರ್ ಕಲಾವಿದರ ಅಕಾಲಿಕ ಸಾವು ನೋವು ತರಿಸಿತು. ಆಮೀರ್ ಖಾನ್ ದಾಂಪತ್ಯ ಇಬ್ಭಾಗವಾಯಿತು. ವಿವಾದಗಳಿಗೂ 2021ರಲ್ಲಿ ಜಾಗ ಇತ್ತು. ಈ ವರ್ಷವೂ ಬಾಲಿವುಡ್​ನಲ್ಲಿ ಡ್ರಗ್ ವಿಚಾರ ಬಗೆದಷ್ಟು ಆಳಕ್ಕಿಳಿಯಿತು. ಆರ್ಯನ್ ಖಾನ್, ತಾಪ್ಸೀ ಪನ್ನು, ಕಂಗನಾ ರಣಾವತ್, ರಾಜ್ ಕುಂದ್ರಾ ಸಾಕಷ್ಟು ಸುದ್ದಿಯಲ್ಲಿದ್ದರು. ಹೀಗೆ 2021ರಲ್ಲಿ ಇಡೀ ಬಾಲಿವುಡ್ ಹಲವು ಏರಿಳಿತಗಳನ್ನು ಕಂಡಿದೆ.

ಅಕ್ಷಯ್ ಈ ವರ್ಷವೂ ಟಾಪ್ ಹೀರೋ

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಪ್ರತಿ ವರ್ಷದಂತೆ ಈ ವರ್ಷವೂ ಟಾಪ್ ನಟರಾಗಿದ್ದಾರೆ. 2021ರಲ್ಲಿ ‘ಬೆಲ್ ಬಾಟಂ’, ‘ಸೂರ್ಯವಂಶಿ’, ‘ಅತರಂಗಿ ರೇ’ ಸಿನಿಮಾಗಳು ಬಿಡುಗಡೆ ಆಗಿವೆ. ಇವುಗಳಲ್ಲಿ ‘ಸೂರ್ಯವಂಶಿ’ ಸಿನಿಮಾ ನೇರವಾಗಿ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ, ಈ ವರ್ಷದ ಅತ್ಯಧಿಕ ಗಳಿಕೆ (300 ಕೋಟಿ ರೂ.)ಮಾಡಿದ ಚಿತ್ರವಾಗಿದೆ. ಇನ್ನುಳಿದಂತೆ ಎರಡನೇ ಸ್ಥಾನ ರಣವೀರ್ ಸಿಂಗ್ ಪಾಲಾಗಿದೆ. ‘ಸೂರ್ಯವಂಶಿ’ ಗೆಲುವಿನಲ್ಲಿ ಪಾಲುದಾರರಾಗುವುದರ ಜತೆಗೆ ‘83’ ಚಿತ್ರದಲ್ಲೂ ರಣವೀರ್ ನಿರೀಕ್ಷಿತ ಲಾಭ ಗಳಿಸುವಲ್ಲಿ ಚಿತ್ರ ವಿಫಲವಾಯಿತು. ಸಲ್ಮಾನ್ ಖಾನ್ ನಟನೆಯ ‘ರಾಧೆ’ ಮಕಾಡೆ ಮಲಗಿತು. ಬಳಿಕ ‘ಅಂತಿಮ್ ಚಿತ್ರದಲ್ಲಿ ಕಾಣಿಸಿದರೂ ಅಷ್ಟಕ್ಕಷ್ಟೇ ಅನ್ನುವಂತಾಯಿತು. ಎಂದಿನಂತೆ ಕಳೆದ ಮೂರು ವರ್ಷಗಳಿಂದ ಗೈರಾಗಿದ್ದ ಶಾರುಖ್ ಖಾನ್ ಮತ್ತು ಆಮೀರ್ ಖಾನ್ 2021ರಲ್ಲಿಯೂ ಖಾತೆ ತೆರೆಯಲಿಲ್ಲ.

100 ಕೋಟಿಗೆ ಬರ: ಪ್ರತಿ ವರ್ಷ ಬಾಲಿವುಡ್​ನಲ್ಲಿ ನೂರು ಕೋಟಿ, 200 ಕೋಟಿ, 300 ಕೋಟಿ ರೂ. ಗಳಿಕೆ ಮಾಡಿದ ಸಿನಿಮಾಗಳು ಕಾಣಿಸುತ್ತಿದ್ದವು. ಆದರೆ, ಈ ವರ್ಷ ಅಂಥ ಬೆಳವಣಿಗೆ ಕಾಣಿಸಲಿಲ್ಲ. ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಸಿನಿಮಾ ಹೊರತುಪಡಿಸಿದರೆ, ಬೇರಾವುದೇ ಸಿನಿಮಾ ಗಳಿಕೆಯಲ್ಲಿ ಶತಕೋಟಿ ದಾಟಲಿಲ್ಲ.

50-50 ಲೆಕ್ಕಾಚಾರ: ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ವರ್ಷ ಬಾಲಿವುಡ್​ನಲ್ಲಿ ಸಿನಿಮಾ ಬಿಡುಗಡೆಯ ಸಂಖ್ಯೆ ಹೆಚ್ಚಾಗಿರಬಹುದು, ಆದರೆ, ಒಟಿಟಿಯೇ ಪಾರುಪತ್ಯ ಮೆರೆದಿರುವುದು ನಿಚ್ಚಳವಾಗಿದೆ. 2021ರಲ್ಲಿ ಒಟ್ಟು 100 ಪ್ಲಸ್ ಚಿತ್ರಗಳು ಬಿಡುಗಡೆ ಆಗಿವೆ. ಆ ಪೈಕಿ 50 ಪ್ಲಸ್ ಸಿನಿಮಾಗಳು ಒಟಿಟಿಯಲ್ಲಿಯೇ ಸ್ಟ್ರೀಮ್ ಆಗಿವೆ. ಇನ್ನುಳಿದ 50 ಚಿತ್ರಗಳು ಚಿತ್ರಮಂದಿರದಲ್ಲಿ ತೆರೆಕಂಡಿವೆ. ಅಮೆಜಾನ್ ಪ್ರೖೆಂನಲ್ಲಿ 8, ಡಿಸ್ನಿ ಪ್ಲಸ್ ಹಾಟ್​ಸ್ಟಾರ್​ನಲ್ಲಿ 12, ಜೀ 5ನಲ್ಲಿ 17 ಮತ್ತು ನೆಟ್​ಫ್ಲಿಕ್ಸ್​ನಲ್ಲಿ 14 ಚಿತ್ರಗಳು ನೇರವಾಗಿ ಸ್ಟ್ರೀಮ್ ಆಗಿವೆ. ಇನ್ನು ಕೆಲವು ಚಿತ್ರಮಂದಿರದ ಬಳಿಕ ಒಟಿಟಿ ಹಾದಿ ತುಳಿದಿವೆ.

ಮೊಬೈಲ್ ತೆರೆ ವಾಸಿ...: ಈ ವರ್ಷ ಹಿಂದಿಯಲ್ಲಿ ಒಟಿಟಿಯಲ್ಲಿ 50 ಪ್ಲಸ್ ಸಿನಿಮಾಗಳು ಸ್ಟ್ರೀಮ್ ಆದರೂ, ಅಲ್ಲಿ ಬೆರಳೆಣಿಕೆ ಸಿನಿಮಾಗಳು ಮಾತ್ರ ಹೆಚ್ಚು ವೀಕ್ಷಣೆ ಕಂಡಿವೆ. ಆ ಪೈಕಿ ಸಿದ್ಧಾರ್ಥ್ ಮಲ್ಹೋತ್ರ ನಟನೆಯ ‘ಶೇರ್​ಷಾ’ ಮೊದಲ ಸ್ಥಾನದಲ್ಲಿದೆ. ‘ರಾಧೆ’ ಚಿತ್ರ ಜೀ5ನಲ್ಲಿ ಸ್ಟ್ರೀಮ್ ಆದರೂ, ವೀಕ್ಷಣೆ ವಿಚಾರದಲ್ಲಿ ಸೋತಿದೆ. ಕೃತಿ ಸನೋನ್ ‘ಮಿಮಿ’ಗೆ ಒಳ್ಳೇ ಪ್ರತಿಕ್ರಿಯೆ ಸಿಕ್ಕಿದೆ. ಫರ್ಹಾನ್ ಅಖ್ತರ್ ‘ತೂಫಾನ್’, ‘ಸರ್ದಾರ್ ಉಧಮ್, ‘ಭೂತ್ ಪೊಲೀಸ್’, ‘ಸನಕ್’, ‘ಧಮಾಕಾ’, ‘ಭುಜ್’, ‘ಸೈನಾ’ ಸೇರಿ ಹಲವು ಸಿನಿಮಾಗಳು ಒಟಿಟಿಯಲ್ಲಿ ಮೆಚ್ಚುಗೆ ಪಡೆದಿವೆ. ‘ಫ್ಯಾಮಿಲಿ ಮ್ಯಾನ್ 2’, ‘ಆರ್ಯಾ 2’, ‘ಕೋಟಾ ಫ್ಯಾಕ್ಟರಿ 2’, ‘ಗ್ರಹಣ್’, ‘ರೇ’, ‘ಮುಂಬೈ ಡೈರೀಸ್’, ‘ಗೀಲಿ ಪುಚ್ಚಿ’, ‘ಗುಲ್ಲಕ್ 2’ ವೆಬ್ ಸರಣಿಗಳೂ ವೀಕ್ಷಕರನ್ನು ಮೋಡಿ ಮಾಡಿವೆ.

ಶುಭ ಮತ್ತು ಅಶುಭ ಸುದ್ದಿ: 2021ರಲ್ಲಿ ಕಲ್ಯಾಣ ಕಾರ್ಯಗಳು ಘಟಿಸಿದರೆ ಮತ್ತೆ ಕೆಲವು ಸಾವಿನ ಸುದ್ದಿಯೂ ನೋಯಿಸಿವೆ. ನಟ ವರುಣ್ ಧವನ್- ನತಾಶಾ, ರಾಜಕುಮಾರ್ ರಾವ್- ಪತ್ರಲೇಖ, ಯಾಮಿ ಗೌತಮ್ ಆದಿತ್ಯ, ದಿಯಾ-ವೈಭವ್, ಕತ್ರಿನಾ-ವಿಕ್ಕಿ ಕೌಶಾಲ್ ಸಪ್ತಪದಿ ತುಳಿದರು. ಸಿದ್ಧಾರ್ಥ್ ಶುಕ್ಲಾ, ದಿಲೀಪ್ ಕುಮಾರ್, ಸುರೇಖಾ ಸಿಕ್ರಿ, ಬಿಕ್ರಮ್​ತ್, ರಾಜೀವ್ ಕಪೂರ್, ರಾಜ್ ಕೌಶಾಲ್ ಸೇರಿ ಹಲವು ಹಿರಿತೆರೆ ಮತ್ತು ಕಿರುತೆರೆ ಕಲಾವಿದರು ಇಹಲೋಕ ತ್ಯಜಿಸಿದ್ದಾರೆ.

ವಿವಾದಗಳಿಗೇನು ಕಡಿಮೆ ಇಲ್ಲ!: ಬಾಲಿವುಡ್​ನಲ್ಲಿ ವಿವಾದಗಳಿಗೇನು ಕೊರತೆ ಇಲ್ಲ. 2021ರಲ್ಲಿಯೂ ಅಂಥ ಮರೆಯಲಾಗದ ಹಲವು ಘಟನೆಗಳು ನಡೆದಿವೆ. ನಟಿ ತಾಪ್ಸೀ ಪನ್ನು ಮತ್ತು ಅನುರಾಗ್ ಕಶ್ಯಪ್ ಮನೆ ಮೇಲೆ ಐಟಿ ದಾಳಿಯಾಯಿತು. ಪಶ್ಚಿಮ ಬಂಗಾಲದ ಚುನಾವಣೆ ಬಗ್ಗೆ ಟೀಕಿಸಿದ್ದ ಕಂಗನಾ ಅವರ ಟ್ವಿಟರ್ ಖಾತೆಯನ್ನೇ ಶಾಶ್ವತವಾಗಿ ನಿಷೇಧಿಸಲಾಯಿತು. ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಪೋನೋಗ್ರಫಿ ಪ್ರಕರಣದಲ್ಲಿ ಜೈಲು ಸೇರಿದರು. ಶಾರುಖ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದರು. ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಹೊತ್ತರು ಸೋನು ಸೂದ್. ವರ್ಷ ಮುಗೀತು ಎನ್ನುವಷ್ಟರಲ್ಲಿ ಹಣಕಾಸು ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕ್​ಲೀನ್ ಫರ್ನಾಂಡೀಸ್, ನೋರಾ ಫತೇಹಿ ಸೇರಿ ಹಲವರು ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆ ಎದುರಿಸಿದರು.

ಕಾಲಿವುಡ್, ಟಾಲಿವುಡ್​ನಲ್ಲಿ ಚಿನ್ನದ ಬೆಳೆ: ಈ ವರ್ಷ ಚಿರಂಜೀವಿ, ಮಹೇಶ್ ಬಾಬು, ಜ್ಯೂ. ಎನ್​ಟಿಆರ್, ರಾಮ್ ಚರಣ್ ತೇಜ, ಪ್ರಭಾಸ್ ಅಭಿನಯದ ಯಾವೊಂದು ಚಿತ್ರ ಬಿಡುಗಡೆಯಾಗದಿರುವ ಬಗ್ಗೆ ಬೇಸರದ ನಡುವೆಯೇ ಟಾಲಿವುಡ್​ನಲ್ಲಿ ಒಂದಿಷ್ಟು ಸಂತೋಷದ ಸುದ್ದಿಗಳಿವೆ. ಅಲ್ಲು ಅರ್ಜುನ್ ‘ಪುಷ್ಪ’ ಸಿನಿಮಾ ಅತಿ ಹೆಚ್ಚು ಗಳಿಕೆ (240 ಕೋಟಿ ರೂ.) ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದರೆ, ಪವನ್ ಕಲ್ಯಾಣ್ ಅಭಿನಯದ ‘ವಕೀಲ್ ಸಾಬ್’ ಮತ್ತು ಬಾಲಯ್ಯ ನಟನೆಯ ‘ಅಖಂಡ’ ಸಹ ಒಳ್ಳೆಯ ಗಳಿಕೆ ಮಾಡಿವೆ. ‘ಉಪ್ಪೇನ’, ‘ಜಾತಿ ರತ್ನಲು’, ‘ಲವ್ ಸ್ಟೋರಿ’, ‘ಶ್ಯಾಮ್ ಸಿಂಗ ರಾಯ್’ ಚಿತ್ರಗಳು ಮೆಚ್ಚುಗೆಗೆ ಪಾತ್ರವಾದವು. ಈ ಸಲ ತೆಲುಗಿನಲ್ಲಿ 115 ಪ್ಲಸ್ ಚಿತ್ರಗಳು ಬಿಡುಗಡೆ ಆಗಿದ್ದು, ಆ ಪೈಕಿ ಶೇ. 40 ಸಿನಿಮಾಗಳಿಗೆ ಪ್ರೇಕ್ಷಕನ ಬಹುಪರಾಕ್ ಸಿಕ್ಕಿದೆ. ಅದೇ ರೀತಿ ತಮಿಳಿನಲ್ಲಿಯೂ ಈ ವರ್ಷ ನಿರೀಕ್ಷಿತ ಸಿನಿಮಾಗಳು ಬಾಕ್ಸ್ ಆಫೀಸ್ ಲೂಟಿ ಮಾಡಿವೆ. ‘ಮಾಸ್ಟರ್’, ‘ಅಣ್ಣಾತ್ತೆ’, ‘ಡಾಕ್ಟರ್’, ‘ಮಾನಾಡು’, ‘ಸುಲ್ತಾನ್’ ಸೇರಿ ಹಲವು ಚಿತ್ರಗಳು ಒಳ್ಳೇ ಗಳಿಕೆಯನ್ನೇ ಕಂಡಿವೆ. ಇದೆಲ್ಲದರ ಜತೆಗೆ ಖ್ಯಾತ ನಟ ರಜನಿಕಾಂತ್​ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿದ್ದು ಕಾಲಿವುಡ್ ಅಂಗಳದಲ್ಲಿ ಇನ್ನಷ್ಟು ಖುಷಿ ಹೆಚ್ಚಿಸಿದೆ. ದಕ್ಷಿಣ ಭಾರತದಲ್ಲಿ ಈ ವರ್ಷ ಬಹಳ ಚರ್ಚೆಯಾದ ಇನ್ನೊಂದು ವಿಷಯವೆಂದರೆ, ಅದು ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್ ಪ್ರಕರಣ. ಇನ್ನು, ಒಟಿಟಿಯಿಂದಾಗಿ ಮಲಯಾಳಂ ಚಿತ್ರಗಳ ವೀಕ್ಷಣೆ ಹೆಚ್ಚಾಗಿರುವುದಷ್ಟೇ ಅಲ್ಲ, ಆ ಚಿತ್ರಗಳ ಗುಣಮಟ್ಟ ಮತ್ತು ಕಥನ ಶೈಲಿಯ ಬಗ್ಗೆ ಇಡೀ ದೇಶದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net