ಇದು ಕರೊನಾ ಕೊಟ್ಟ ಕಾಣಿಕೆ ...

Corona Kanike - Final
Published on

ಕರೊನಾ ಮತ್ತು ಲಾಕ್​ಡೌನ್​ನಿಂದ ಅದೆಷ್ಟೋ ಸಿನಿಮಾ ಕಲಾವಿದರು ಮತ್ತು ತಂತ್ರಜ್ಱರು ಕೆಲಸವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಲಾಕ್​ಡೌನ್​ನಿಂದ ಕೆಲಸ ಕಳೆದುಕೊಂಡಿರುವ ಜಾವೆದ್​ ಹೈದರ್​ ಎಂಬ ಬಾಲಿವುಡ್​ ನಟ, ಇದೀಗ ದೆಹಲಿಯಲ್ಲಿ ತರಕಾರಿ ಮಾರುತ್ತಿದ್ದಾರೆ.

ಇದು ಜಾವೆದ್​ ಒಬ್ಬರ ಕಥೆಯಲ್ಲ. ಹಲವರು ಕೆಲಸವಿಲ್ಲದೆ ಬೇರೆ ಕೆಲಸ ಮಾಡುವ ಅನಿವಾರ್ಯತೆಯಲ್ಲಿದ್ದಾರೆ. ಈ ಕುರಿತಾಗಿ ಇದೀಗ ನಟ-ನಿರ್ದೇಶಕ ಯತಿರಾಜ್​ ಒಂದು ಕಿರುಚಿತ್ರ ಮಾಡಿದ್ದಾರೆ. 6 ನಿಮಿಷ 22 ಸೆಕೆಂಡ್​ನ ಈ ಕಿರುಚಿತ್ರವು ಕರೊನಾ ಬಿಚ್ಚಿಟ್ಟಿರುವ ಕರಾಳ ಮುಖವನ್ನು ತೋರಿಸುತ್ತದೆ.

'ಕರೊನಾ ಕಾಣಿಕೆ' ಹೆಸರಿನ ಈ ಕಿರುಚಿತ್ರದಲ್ಲಿ ಕಲಾವಿದರು ಕೊರೊನಾದಿಂದ ಯಾವ ರೀತಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಕೇವಲ ಎರಡು ಪ್ರಮುಖ ಪಾತ್ರಗಳನ್ನಿಟ್ಟುಕೊಂಡು ರೂಪಿಸಲಾಗಿರುವ ಈ ಚಿತ್ರ, ಈಗಾಗಲೇ ಯೂಟ್ಯೂಬ್​ನಲ್ಲಿ ಲಭ್ಯವಿದೆ.

ಗೃಹಿಣಿ ಮತ್ತು ಒಬ್ಬ ಪೋಷಕ ನಟನ ಸುತ್ತ ಈ ಚಿತ್ರ ಸುತ್ತುತ್ತದೆ. ತನ್ನ ಗಂಡ ದೊಡ್ಡ ಕೆಲಸ ಕಳೆದುಕೊಂಡು ಟ್ಯಾಕ್ಸಿ ಡ್ರೈವರ್​ ಆಗಿದ್ದನ್ನು ಸಹಿಸದ ಗೃಹಿಣಿಯೊಬ್ಬಳು ಮನೆ ಬಿಟ್ಟು ಹೊರಬರುತ್ತಾಳೆ. ಆಟೋದಲ್ಲಿ ಹೋಗುವಾಗ, ಆ ಡ್ರೈವರ್​ ಒಬ್ಬ ಜನಪ್ರಿಯ ಪೋಷಕ ನಟ ಎಂದು ಗೊತ್ತಾಗಿ ಆಕೆಗೆ ಆಶ್ಚರ್ಯವಾಗುತ್ತದೆ. ಆತನ ಕಥೆ ಕೇಳಿದಾಗ, ಇದು ಕರೊನಾ ಮತ್ತು ಲಾಕ್​ಡೌನ್​ ಕೊಟ್ಟ ಕಾಣಿಕೆ ಎಂಬುದು ಗೊತ್ತಾಗುತ್ತದೆ. ಚಿತ್ರೀಕರಣ ಬಂದ್​ ಆಗಿರುವುದರಿಂದ ಅವಕಾಶ ಇಲ್ಲದೆ ಆಟೋ ಓಡಿಸುತ್ತಿರುವುದಾಗಿ ಆತ ಹೇಳಿದಾಗ, ಆಕೆಗೆ ತನ್ನ ತಪ್ಪಿನ ಅರಿವಾಗುತ್ತದೆ.

ಈ ಕುರಿತು 'ವಿಜಯವಾಣಿಯೊಂದಿಗೆ ಮಾತನಾಡಿದ ಅವರು, 'ಕಲಾವಿದರೆಂದ ಮಾತ್ರಕ್ಕೆ ಎಲ್ಲರೂ ಕೋಟ್ಯಧೀಶರಾಗಿರುವುದಿಲ್ಲ. ಎಲ್ಲಾ ಕಲಾವಿದರಿಗೂ ತಮ್ಮದೇ ಆದ ಕಷ್ಟಗಳಿರುತ್ತವೆ. ಚಿತ್ರೀಕರಣ ಪ್ರಾರಂಭವಾಗದೇ ಇರುವುದರಿಂದ, ಹಲವರು ಕೆಲಸವಿಲ್ಲದ ಸಂಕಷ್ಟದಲ್ಲಿದ್ದಾರೆ. ಹೀಗೆ ಸಂಕಷ್ಟದಲ್ಲಿರುವವರು ಅನಿವಾರ್ಯವಾಗಿ ಬೇರೆ ಕೆಲಸ ಮಾಡಬೇಕಾಗುತ್ತದೆ. ಹಾಗಂತ ಅವರನ್ನು ಕೀಳಾಗಿ ನೋಡಬಾರದು ಎಂದು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ' ಎನ್ನುತ್ತಾರೆ ಯತಿರಾಜ್​. ಅಂದಹಾಗೆ, ಲಾಕ್​ಡೌನ್​ ಶುರುವಾದ ಮೇಲೆ, ಇದು ಅವರು ನಿರ್ದೇಶಿಸುತ್ತಿರುವ ನಾಲ್ಕನೆಯ ಕಿರುಚಿತ್ರವಿದು.

ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜತೆಗೆ, ಒಂದು ಪ್ರಮುಖ ಪಾತ್ರದಲ್ಲೂ ಯತಿರಾಜ್​ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಪಾತ್ರದಲ್ಲಿ ಅಂಜಲಿ ಅಭಿನಯಿಸಿದ್ದಾರೆ. ಈಗಾಗಲೇ ಈ ಕಿರುಚಿತ್ರ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದ್ದು, ಕ್ರಮೇಣ ಮೆಚ್ಚುಗೆ ಪಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net