

ಕರೊನಾ ಮತ್ತು ಲಾಕ್ಡೌನ್ನಿಂದ ಅದೆಷ್ಟೋ ಸಿನಿಮಾ ಕಲಾವಿದರು ಮತ್ತು ತಂತ್ರಜ್ಱರು ಕೆಲಸವಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ದೊಡ್ಡ ಸಂಭಾವನೆ ಪಡೆಯುವ ಸ್ಟಾರ್ ನಟರು ಮತ್ತು ತಂತ್ರಜ್ಱರೇನೋ ಇದೆಲ್ಲದರಿಂದ ಪಾರಾಗಿದ್ದಾರೆ. ಆದರೆ, ಸಣ್ಣ-ಪುಟ್ಟ ಕಲಾವಿದರಂತೂ ಇದರಿಂದ ಬಹಳ ಸಂಕಷ್ಟಕ್ಕೆ ಈಡಾಗಿದ್ದಾರೆ.
ಇದನ್ನೂ ಓದಿ: ನನ್ನ ಮಗನಿಗೂ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಇತ್ತು!
ಲಾಕ್ಡೌನ್ನಿಂದ ಕೆಲಸ ಕಳೆದುಕೊಂಡಿರುವ ಜಾವೆದ್ ಹೈದರ್ ಎಂಬ ಬಾಲಿವುಡ್ ನಟ, ಇದೀಗ ದೆಹಲಿಯಲ್ಲಿ ತರಕಾರಿ ಮಾರುತ್ತಿದ್ದಾರೆ. ಜಾವೆದ್ ತರಕಾರಿ ಮಾರುವ ವಿಡಿಯೋವೊಂದನ್ನು 'ಬಿಗ್ ಬಾಸ್ - 4'ರ ವಿನ್ನರ್ ಡಾಲಿ ಬಿಂದ್ರಾ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದು, ಆತನಿಗೆ ನೆರವಾಗಿ ಎಂದು ಚಿತ್ರರಂಗದ ಸ್ನೇಹಿತರಲ್ಲಿ ವಿನಂತಿಸಿಕೊಂಡಿದ್ದಾರೆ.
ಜಾವೆದ್ ಹೈದರ್ ತುಂಬಾ ಹೆಸರು ಮಾಡಿದ ನಟನೇನಲ್ಲ. ಬಾಲಿವುಡ್ ಚಿತ್ರಗಳಲ್ಲಿ ಮತ್ತು ಹಿಂದಿ ಧಾರಾವಾಹಿಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಅಮೀರ್ ಖಾನ್ ಅಭಿನಯದ ಗುಲಾಮ್, ಲೈಫ್ ಕಿ ಐಸಿ ತೇಸಿ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಲಾಕ್ಡೌನ್ಗೂ ಮುನ್ನ ಒಂದಿಷ್ಟು ಚಿತ್ರಗಳಲ್ಲಿ ನಟಿಸಿದ್ದ ಜಾವೆದ್, ಲಾಕ್ಡೌನ್ ನಂತರ ಚಿತ್ರರಂಗ ಬಂದ್ ಆದಾಗಿನಿಂದ ಕೆಲಸ ಇಲ್ಲದೆ ಖಾಲಿ ಇದ್ದಾರೆ. ಬೇರೆ ದಾರಿ ಇಲ್ಲದೆ ಅವರು ದೆಹಲಿಯ ರಸ್ತೆಗಳಲ್ಲಿ ತರಕಾರಿ ಮಾರುತ್ತಿದ್ದಾರಂತೆ.
ಇನ್ನು ಜಾವೆದ್ ಅವರ ಈ ಸ್ಥಿತಿಯನ್ನು ನೋಡಿ, ನೆಟ್ಟಿಗರನೇಕರು ಮರುಗಿದ್ದಾರೆ. ಒಬ್ಬ ನಟನಿಗೆ ಇಂಥದ್ದೊಂದು ಪರಿಸ್ಥಿತಿ ಬರಬಾರದಿತ್ತು ಎಂದು ಬೇಸರಿಸಿಕೊಂಡಿದ್ದಾರೆ. ಇನ್ನೂ ಕೆಲವರು, ಜಾವೇದ್ ಅವರ ಜೀವನೋತ್ಸಾಹವನ್ನು ಹೊಗಳಿದ್ದಾರೆ. ಏನೇ ಸಮಸ್ಯೆಗಳು ಎದುರಾದರೂ, ಇದ್ದುದರಲ್ಲೇ ನೆಮ್ಮದಿಯಿಂದ ಬದುಕಬೇಕು ಎಂದು ಜಾವೆದ್, ತರಕಾರಿ ಮಾರುವ ಮೂಲಕ ಸಾರುತ್ತಿದ್ದಾರೆ. ಎಷ್ಟೇ ಕಷ್ಟಗಳ ಮಧ್ಯೆಯೂ ಏನಾದರೂ ಸಾಧಿಸಬೇಕು ಎನ್ನುವ ಅವರ ಶ್ರದ್ಧೆ ಅನುಕರಣೀಯ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಅಂದಹಾಗೆ, ಜಾವೆದ್ ಅವರು ಟಿಕ್ಟಾಕ್ ವಿಡಿಯೋಗಳನ್ನು ಮಾಡುವುದರಲ್ಲಿ ಬಹಳ ಜನಪ್ರಿಯರಾಗಿದ್ದು, ತರಕಾರಿ ಮಾರುತ್ತಲೇ ಅವರು ಹಲವು ವಿಡಿಯೋಗಳನ್ನು ಮಾಡುತ್ತಲೇ ಇದ್ದಾರೆ. ಟಿಕ್ಟಾಕ್ನಲ್ಲಿ ಅವರಿಗೆ 97 ಸಾವಿರ ಹಿಂಬಾಲಕರಿದ್ದು, ಅವರ ವಿಡಿಯೋಗಳಿಗೆ 1.6 ಮಿಲಿಯನ್ ಲೈಕ್ಗಳು ಸಿಕ್ಕಿವೆ.