ನನ್ನ ಮಗನಿಗೂ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಇತ್ತು!

Shekhar Suman - Final
Published on

'ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಕುರಿತಾಗಿ ಸಿಬಿಐ ಎಂಕ್ವೈರಿ ನಡೆಯಬೇಕು ...' ಹಾಗಂತ ಎರಡು ದಿನಗಳ ಹಿಂದಷ್ಟೇ ಹಿರಿಯ ನಟ ಶೇಖರ್​ ಸುಮನ್​ ಅಭಿಪ್ರಾಯಪಟ್ಟಿದ್ದರು. ಈಗ ಅವರು ತಮ್ಮ ಮಗ ಅಧ್ಯಯನ್​ ಸುಮನ್​ಗೆ ಸಹ ಒಂದು ಕಾಲದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಇತ್ತು ಎಂದು ಬಾಂಬ್​ ಸಿಡಿಸಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ನನಗೆ ಸುಶಾಂತ್​ ಸಿಂಗ್​ ಅವರ ತಂದೆಯ ನೋವು ಅರ್ಥವಾಗುತ್ತದೆ. ಅದಕ್ಕೆ ಕಾರಣ, ಕೆಲವು ವರ್ಷಗಳ ಹಿಂದೆ, ನಾನು ಸಹ ಅಂಥದ್ದೇ ಒಂದು ಪರಿಸ್ಥಿತಿಯಲ್ಲಿದ್ದೆ. ನನ್ನ ಮಗ ಸಹ ವಿಪರೀತವಾದ ಡಿಪ್ರೆಶೆನ್​ನಿಂದ ಬಳಲುತ್ತಿದ್ದ. ಚಿತ್ರರಂಗ ಅವನಿಗೆ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿತ್ತು. ಇದೆಲ್ಲದರಿಂದ ಬೇಸತ್ತು, ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಅವನು ಯೋಚಿಸಿದ್ದನಂತೆ. ಹಾಗಂತ ಅವನೇ ನನಗೆ ಒಮ್ಮೆ ಬಾಯಿಬಿಟ್ಟು ಹೇಳಿದ್ದ' ಎಂದು ಶೇಖರ್​ ಸುಮನ್​ ಹೇಳಿಕೊಂಡಿದ್ದಾರೆ.

ಶೇಖರ್​ ಸುಮನ್​ ಅವರ ಮಗ ಅಧ್ಯಯನ್​ ಸುಮನ್​, ಕೆಲವು ವರ್ಷಗಳ ಹಿಂದೆ ಬಾಲಿವುಡ್​ನಲ್ಲಿ ನಾಯಕನಾಗಿ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಒಂದು ಹಂತದಲ್ಲಿ ಕಂಗನಾ ರಣಾವತ್​ ಅವರ ಬಾಯ್​ಫ್ರೆಂಡ್​ ಎಂದು ಗುರುತಿಸಿಕೊಂಡಿದ್ದರು. ಆದರೆ, ಅಧ್ಯಯನ್​ ಅಷ್ಟೇನೂ ಯಶಸ್ವಿಯಾಗಲಿಲ್ಲ. ಅಷ್ಟೇ ಅಲ್ಲ, ಅವರಿಗೆ ಕಂಗನಾ ಮಾಟ ಮಾಡಿಸಿದ್ದಾರೆ, ವಿಪರೀತ ಅವಮಾನ ಮಾಡುತ್ತಾರೆ ಎಂದೆಲ್ಲಾ ಸುದ್ದಿಗಳು ಬಾಲಿವುಡ್​ ತುಂಬಾ ಹರಡಿದ್ದವು. ಇದರಿಂದ ಅಧ್ಯಯನ್​ ನಟನಾಗಿ ಮುಂದುವರೆಯುವುದಕ್ಕೆ ಸಾಧ್ಯವಾಗಲೇ ಇಲ್ಲ. ತಮ್ಮ ಮಗನನ್ನು ಮೇಲೆತ್ತೆಲು ಶೇಖರ್​, ಏನೇನೋ ಕಸರತ್ತು ಮಾಡಿದರಾದರೂ, ಅಧ್ಯಯನ್​ ಬಾಲಿವುಡ್​ನಲ್ಲಿ ಹೆಚ್ಚು ಶೈನ್​ ಆಗಲಿಲ್ಲ.

ಈ ಕುರಿತು ಇನ್ನಷ್ಟು ಮಾತನಾಡಿರುವ ಶೇಖರ್​ ಸುಮನ್​, 'ನನ್ನ ಮಗನನ್ನು ಡಿಪ್ರೆಶನ್​ನಿಂದ ಹೊರಕ್ಕೆ ಕರೆದುಕೊಂಡು ಬರುವುದು ನಿಜಕ್ಕೂ ಕಷ್ಟವಾಯಿತು. ಒಮ್ಮೊಮ್ಮೆ ಮುಂಜಾವಿನಲ್ಲಿ ಅವನ ರೂಮಿಗೆ ಹೋದರೆ, ಅವನು ಸೀಲಿಂಗ್​ ದಿಟ್ಟಿಸುತ್ತಾ ಕೂತಿರುತ್ತಿದ್ದ. ಅದು ನಮ್ಮೆಲ್ಲರ ಜೀವನದ ಅತ್ಯಂತ ಕೆಟ್ಟ ದಿನಗಳು. ಈ ಸಂದರ್ಭದಲ್ಲಿ ನಾವೆಲ್ಲಾ ಅವನ ಜತೆಗೆ ಬಹಳ ಗಟ್ಟಿಯಾಗಿ ನಿಂತಿದ್ದೆವು. ಅದರಿಂದ ಅವನು, ಅಂತಹ ಯೋಚನೆಗಳಿಂದ ಹೊರಬಂದ ಈಗ ಅವನು ಸಂತೋಷವಾಗಿದ್ದಾನಾದರೂ, ಸುಶಾಂತ್​ ಸಾವಿನಿಂದ ಮತ್ತಷ್ಟು ಭಯ ಆಗಿದೆ' ಎಂದು ಶೇಖರ್​ ಸುಮನ್​ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net