

ಬೆಂಗಳೂರು: 'ಕೆಜಿಎಫ್ 2' ನಂತರ ಯಶ್ ಮುಂದಿನ ನಡೆ ಏನಿರಬಹುದು ಎಂದು ಇಡೀ ದೇಶವೇ ತಲೆ ಕೆಡಿಸಿಕೊಂಡು ಕೂತಿದೆ. ಆದರೆ, ಯಶ್ ಮಾತ್ರ ತಮ್ಮ ಮುಂದಿನ ಹೆಜ್ಜೆ ಏನು? ಹೊಸ ಸಿನಿಮಾ ಯಾವುದು? ಅದನ್ನು ಯಾರು ಮಾಡುತ್ತಿದ್ದಾರೆ? ಮುಂತಾದ ಯಾವುದೇ ವಿಷಯವನ್ನು ಬಹಿರಂಗಪಡಿಸದೆಯೇ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದಾರೆ.
ಇನ್ನು, ಈ ದೀಪಾವಳಿಯನ್ನು ಯಶ್ ತಮ್ಮ ಪತ್ನಿ ರಾಧಿಕಾ ಪಂಡಿತ್ ಮತ್ತು ಮಕ್ಕಳಾದ ಆಯಿರಾ ಮತ್ತು ಯಥರ್ವ್ ಜತೆಗೆ ಸೋಮವಾರ ಆಚರಿಸಿದ್ದಾರೆ. ಮಕ್ಕಳಿಗೆ ಹೊಸ ಬಟ್ಟೆ ತೊಡಿಸಿ ಪಟಕಾ ಹೊಡೆಸಿ, ದೀಪದ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಮಕ್ಕಳ ಜತೆಗೆ ಪಟಾಕಿ ಹೊಡೆಯುತ್ತಿರುವ ಫೋಟೋವೊಂದನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿರುವ ಯಶ್, 'ಕೆಲವು ಕ್ಷಣಗಳು ಬಹಳ ಮುಖ್ಯವಾದವು ... ನಮ್ಮಿಂದ ನಿಮಗೆ ದಿಪಾವಳಿ ಹಬ್ಬದ ಶುಭಾಶಯಗಳು ...' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನಾಡಿನ ಜನತೆಗೆ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಅಂದಹಾಗೆ, ಯಶ್ ಅಭಿನಯದ 'ಕೆಜಿಎಫ್ 2' ಬಿಡುಗಡೆಯಾಗಿ ಆರು ತಿಂಗಳುಗಳಾಗಿವೆ. ಚಿತ್ರವು ಜಗತ್ತಿನಾದ್ಯಂತ ಜಯಭೇರಿ ಬಾರಿಸಿದ್ದು, ಬಾಕ್ಸ್-ಆಫೀಸ್ನಲ್ಲಿ ಸಾವಿರಕ್ಕೂ ಹೆಚ್ಚು ಕೋಟಿಗಳ ಕಲೆಕ್ಷನ್ ಕಂಡಿದೆ. ಈ ಚಿತ್ರದ ಯಶಸ್ಸಿನ ನಂತರ ಯಶ್ ಅವರ ಮುಂದಿನ ನಡೆ ಏನು ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದ್ದು, ಸದ್ಯದಲ್ಲೇ ಅವರ ಮುಂದಿನ ಚಿತ್ರ ಯಾವುದು ಎಂದು ಬಹಿರಂಗವಾಗುವ ಸಾಧ್ಯತೆ ಇದೆ.