

ಇವತ್ತು ತ್ರಿವಳಿ ತಲಾಖ್ ಕಾನೂನು ಬಾಹಿರವಾಗಿರಬಹುದು. ಆದರೆ, ಹಿಂದೆ ತ್ರಿವಳಿ ತಲಾಖ್ ನೀಡಿದ ಬಳಿಕ ಮಾಜಿ ಪತ್ನಿಗೆ ಜೀವನಾಂಶವನ್ನೂ ನೀಡುತ್ತಿರಲಿಲ್ಲ. ಹೀಗೆ ತ್ರಿವಳಿ ತಲಾಖ್ ನೀಡಿದ ಪತಿಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಶಾಹ್ ಬಾನೊ ಪ್ರಕರಣ 1985ರಲ್ಲಿ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು.
1978ರಲ್ಲಿ ಮಧ್ಯಪ್ರದೇಶದ ಇಂದೋರ್ನ ಮೊಹಮ್ಮದ್ ಅಹ್ಮದ್ ಖಾನ್, ಪತ್ನಿ ಶಾಹ್ ಬಾನೊಗೆ ತ್ರಿವಳಿ ತಲಾಖ್ ನೀಡಿದ್ದರು. ಅದರ ವಿರುದ್ಧ 62 ವರ್ಷದ ಶಾಹ್ ಬಾನೊ ಕೋರ್ಟ್ ಮೆಟ್ಟಿಲೇರಿದ್ದರು. ದಿನಕಳೆದಂತೆ ಪ್ರಕರಣ ಸುಪ್ರೀಮ್ ಕೋರ್ಟ್ವರೆಗೂ ಹೋಯಿತು. 1985ರಲ್ಲಿ ಶಾಹ್ ಬಾನೊ ಪರ ಸುಪ್ರೀಮ್ ಕೋರ್ಟ್ ತೀರ್ಪು ನೀಡಿತ್ತು. ತೀರ್ಪಿನ ವಿರುದ್ಧ ದೇಶಾದ್ಯಂತ ಮುಸ್ಲಿಂ ಪರ ಸಂಟನೆಗಳು ಹೋರಾಟ ನಡೆಸಿದವು. ಇದೀಗ ನಲವತ್ತು ವರ್ಷಗಳ ಬಳಿಕ ಇದೇ ಇಡೀ ಪ್ರಕರಣಕ್ಕೆ ಸಿನಿಮಾ ರೂಪ ನೀಡಲು "ದ ಫ್ಯಾಮಿಲಿ ಮ್ಯಾನ್', "ದ ಟ್ರಯಲ್' ಸೇರಿ ಕೆಲ ವೆಬ್ಸರಣಿ ಮತ್ತು ಚಿತ್ರಗಳನ್ನು ನಿರ್ದೇಶಿಸಿರುವ ಸುಪರ್ಣ್ ವರ್ಮಾ ಮುಂದಾಗಿದ್ದಾರೆ.
ವಿಶೇಷ ಅಂದರೆ ಶಾಹ್ ಬಾನೊ ಪಾತ್ರದಲ್ಲಿ ಬಾಲಿವುಡ್ ನಟಿ ಯಾಮಿ ಗೌತಮ್ ನಟಿಸಲಿದ್ದಾರೆ. ಕಳೆದ ವರ್ಷ ರಿಲೀಸ್ ಆದ "ಆರ್ಟಿಕಲ್ 370' ಚಿತ್ರದ ಯಶಸ್ಸಿನಲೆಯಲ್ಲಿ ತೇಲುತ್ತಿರುವ ಅವರು, ಆ ಬಳಿಕ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೀಗಾಗಿ ಖಾಸಗಿ ಜೀವನದತ್ತ ಹೆಚ್ಚು ಗಮನ ಹರಿಸಿದ್ದರು. ಇದೀಗ ಶಾಹ್ ಬಾನೊ ಕೇಸ್ ಕುರಿತ ಚಿತ್ರದ ಮೂಲಕ ಮತ್ತೆ ಕಮ್ಬ್ಯಾಕ್ ಮಾಡಲಿದ್ದು, ಈಗಾಗಲೇ ಪಾತ್ರಕ್ಕಾಗಿ ಸಿದ್ಧತೆ ಪ್ರಾರಂಭಿಸಿದ್ದಾರೆ.