

ಬೆಂಗಳೂರು: ಸೆಲ್ಫಿ ಬಗ್ಗೆ ಕೇಳಿರುತ್ತೀರಿ, ‘ಗ್ರೂಫಿ’ ಬಗ್ಗೆ ಕೇಳಿದ್ದೀರಾ? ಇಲ್ಲೊಂದು ತಂಡ ‘ಗ್ರೂಫಿ’ ಹೆಸರಿನ ಸಿನಿಮಾವನ್ನೇ ಮಾಡಿದೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರವುಳ್ಳ ಆ ಚಿತ್ರದ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದವು. ಇದೀಗ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ವಿಶೇಷ ಏನೆಂದರೆ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಟ್ರೇಲರ್ ರಿಲೀಸ್ ಮಾಡಿಕೊಟ್ಟಿದ್ದಾರೆ. ಟ್ರೇಲರ್ ಕಣ್ತುಂಬಿಕೊಂಡು, ಹೊಸಬರ ಬೆನ್ನುತಟ್ಟಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಅರ್ಜುನ್ ಜನ್ಯ ಆಗಮಿಸಿ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದರು. ಇದೀಗ ಮೈಸೂರು ಅರಸರಿಂದ ಚಿತ್ರಕ್ಕೆ ಮತ್ತಷ್ಟು ಮೈಲೇಜ್ ಸಿಕ್ಕಂತಾಗಿದೆ. ರವಿ ಅರ್ಜುನ್ ನಿರ್ದೇಶನದ ಈ ಚಿತ್ರದಲ್ಲಿ ಆರ್ಯನ್ ನಾಯಕನಾದರೆ, ಪದ್ಮಶ್ರೀ ಸಿ ಜೈನ್ ನಾಯಕಿಯಾಗಿ ನಟಿಸಿದ್ದಾರೆ. ಕೆ.ಜಿ ಸ್ವಾಮಿ ಬಂಡವಾಳ ಹೂಡಿರುವ ಚಿತ್ರಕ್ಕೆ ಅಜಯ್ ಲಕ್ಷ್ಮೀಕಾಂತ್ ಛಾಯಾಗ್ರಹಣ, ವಿಜೇತ್ ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಚಿತ್ರ ಬಿಡುಗಡೆ ಆಗಲಿದೆ.