ಮೊದಲರ್ಧ ಶೀತಲ, ದ್ವಿತೀಯಾರ್ಧ ಸಮರ: ಸಿನಿಮಾ ವಿಮರ್ಶೆ

Window Seat
Published on
  • ಚಿತ್ರ: ವಿಂಡೋಸೀಟ್
  • ನಿರ್ದೇಶಕಿ : ಶೀತಲ್ ಶೆಟ್ಟಿ
  • ನಿರ್ಮಾಪಕ : ಮಂಜುನಾಥ್ ಗೌಡ
  • ತಾರಾಗಣ: ನಿರೂಪ್ ಭಂಡಾರಿ, ಅಮೃತಾ ಐಯ್ಯಂಗಾರ್, ಸಂಜನಾ ಆನಂದ್, ಲೇಖಾ ನಾಯ್ಡು, ಸಚಿನ್, ರವಿಶಂಕರ್, ಮಧುಸೂಧನ್ ರಾವ್ ಮುಂತಾದವರು

| ಹರ್ಷವರ್ಧನ್ ಬ್ಯಾಡನೂರು

‘ನೀನೇನೋ ಆ್ಯಪ್​ ಸ್ವೆಪ್ ಮಾಡಿ ಲವ್ ಮಾಡೋ ಈ ಕಾಲದಲ್ಲೂ ರೆಟ್ರೋ ಸ್ಟೈಲಲ್ಲಿದಿಯಾ ?’ ಎಂದು ನಾಯಕ ರಘು (ನಿರೂಪ್ ಭಂಡಾರಿ)ಗೆ ಬೈಯುತ್ತಾಳೆ ಗೆಳತಿ ಅಂಜಲಿ (ಅಮೃತಾ ಐಯ್ಯಂಗಾರ್). ಅದಕ್ಕೆ ಕಾರಣ ಅವಳದು ಆತನ ಮೇಲೆ ಒನ್​ವೇ ಲವ್. ರೈಲಿನ ವಿಂಡೋಸೀಟಿನಲ್ಲಿ ಪ್ರಯಾಣಿಸುವಾಗ ಪ್ರತಿದಿನ ನೋಡುವ ಅನಾಮಿಕ ಹುಡುಗಿಯ ಮೇಲೆ ಆತನಿಗೆ ಒನ್​ವೇ ಲವ್. ವಿಷಯ ಗೊತ್ತಾಗಿ ಅಂಜಲಿಗೆ ರಘು ಮೇಲೆ ವಿಪರೀತ ಕೋಪ. ಅದರ ನಡುವೆಯೇ ರಘು ಒಂದು ಕೊಲೆಯನ್ನು ನೋಡುತ್ತಾನೆ. ಚಲಿಸುತ್ತಿರುವ ರೈಲಿನಿಂದಲೇ ಹೊರಗೆ ಹಾರಿ ಕಾಪಾಡಲು ಮುಂದಾಗುತ್ತಾನೆ. ಒಂದು ಕೊಲೆಯ ಬೆನ್ನು ಹತ್ತಿದವ ಮತ್ತೊಂದು ಕೊಲೆ ಭೇದಿಸುತ್ತಾನೆ. ಅಲ್ಲಿಂದ ಆತನ ಇತಿಹಾಸ, ಆತ ಪ್ರೀತಿಸುವ ಹುಡುಗಿಯ ಹಿನ್ನಲೆ ತೆರೆದುಕೊಳ್ಳುತ್ತಾ ಹೋದಂತೆ ಕೊಲೆಗೆ ಕಾರಣವೂ ತಿಳಿಯುತ್ತದೆ. ಅದೇನು ಅಂತ ತಿಳಿಯುವ ಕುತೂಹಲವಿದ್ದರೆ ಸಿನಿಮಾ ನೋಡಿ.

ಮೊದಲರ್ಧ ನಿಧಾನವಾಗಿ ಸಾಗಿದರೂ ‘ವಿಂಡೋಸೀಟ್’ ದ್ವಿತೀಯಾರ್ಧ ವೇಗವಾಗಿದೆ. ಕೆಲವು ಟರ್ನ್​ಗಳು ಸೀಟಂಚಲ್ಲಿ ಕೂರಿಸುತ್ತವೆ. ಇದು ನಿರೂಪ್ ಭಂಡಾರಿಯವರ ಇದುವರೆಗಿನ ಬೆಸ್ಟ್ ಪರ್ಫಾಮೆನ್ಸ್. ಗೊಂದಲಗಳ ಸುಳಿಯಲ್ಲಿ ಸಿಲುಕಿ ಒದ್ದಾಡುವ ರಘು ತಾವೇ ಆಗಿದ್ದಾರೆ ನಿರೂಪ್. ಪಟಪಟ ಮಾತಿನ ಮಲ್ಲಿ ಅಮೃತಾ ಇಷ್ಟವಾಗುತ್ತಾರೆ. ಪಾರ್ವತಿ ಎಂಬ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿರುವ ರಂಗಭೂಮಿ ಪ್ರತಿಭೆ ಲೇಖಾ ನಾಯ್ಡು, ರಾ ಸಂಭಾಷಣೆಗಳು, ರಗ್ಗಡ್ ಲುಕ್​ನಿಂದ ಗಮನ ಸೆಳೆಯುತ್ತಾರೆ. ಉಳಿದಂತೆ ರವಿಶಂಕರ್, ಮಧುಸೂಧನ್ ರಾವ್, ಸಚಿನ್ ಅಚ್ಚುಕಟ್ಟಾಗಿ ತಮ್ಮ ಪಾತ್ರಗಳನ್ನು ನಿಭಾಯಿಸಿದ್ದಾರೆ.

‘ವಿಂಡೋಸೀಟ್’, ನಿರೂಪಕಿ-ನಟಿ ಶೀತಲ್ ಶೆಟ್ಟಿಯ ಮೊದಲ ನಿರ್ದೇಶನ ಅಂತ ಅನ್ನಿಸುವುದಿಲ್ಲ. ಅಷ್ಟು ಅಚ್ಚುಕಟ್ಟಾಗಿ ಒಂದು ಸೈಕಾಲಾಜಿಕಲ್ ಥ್ರಿಲ್ಲರ್​ಅನ್ನು ತೆರೆಯ ಮೇಲೆ ತಂದಿದ್ದಾರೆ. ಆದರೆ, ಮೊದಲರ್ಧ ಸ್ವಲ್ಪ ವೇಗದಿಂದ ಕೂಡಿದ್ದರೆ, ಚಿತ್ರಕ್ಕೆ ಮತ್ತಷ್ಟು ಪ್ಲಸ್ ಆಗಿರುತ್ತಿತ್ತು. ಅರ್ಜುನ್ ಜನ್ಯಾ ಸಂಗೀತ, ಹಿನ್ನೆಲೆ ಸಂಗೀತ ಹಾಗೂ ವಿಘ್ನೇಶ್ ರಾಜ್ ಅವರ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿವೆ. ಒಂದೊಳ್ಳೆ ಥ್ರಿಲ್ಲರ್ ಸಿನಿಮಾ ನೋಡಲಿಚ್ಛಿಸುವವರು ಮೊದಲರ್ಧ ಸಹನೆಯಿಂದ ಕೂತರೆ, ದ್ವಿತೀಯಾರ್ಧ ಒಂದೊಳ್ಳೆಯ ಥ್ರಿಲ್ ನೀಡಲಿದೆ ‘ವಿಂಡೋಸೀಟ್’.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net