

ಚಿಕ್ಕಬಳ್ಳಾಪುರ: ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಪತ್ನಿಯೇ ಪ್ರಿಯಕರನ ಜತೆ ಸೇರಿ ಕೊಲೆ ಮಾಡಿದ್ದಾಳೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ.
ಪತ್ನಿ ಮೆಹರ್ ಹಾಗೂ ಪ್ರಿಯಕರ ತೌಸೀಫ್ ಬಂಧಿತ ಆರೋಪಿಗಳು. ದಾದಾಪೀರ್ ಎಂಬಾತ ಕೊಲೆಯಾದ ಪತಿ. ಆರೋಪಿಗಳನ್ನು ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪೊಲೀಸರು ಬಂಧಿಸಿದ್ದಾರೆ. ಮೆಹರ್ ಪ್ರಿಯಕರನ ಜತೆ ಸೇರಿ ಪತಿಯನ್ನು ಕೊಲೆ ಮಾಡಿದ್ದಲ್ಲದೆ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಿದ್ದಳು.
2021ರ ನ. 26ರಂದು ಗಂಜಿಕುಂಟೆ ಗ್ರಾಮದಲ್ಲಿ ಈ ಕೊಲೆ ನಡೆದಿತ್ತು. ಪತಿಗೆ ಮೊದಲು ನಿದ್ರೆ ಮಾತ್ರೆ ತಿನಿಸಿ ಮಲಗಿಸಲಾಗಿತ್ತು. ಬಳಿಕ ಆತನನ್ನು ಕೊಲೆ ಮಾಡಿ, ನಂತರ ಕೋಳಿ ಸುಡುವ ಗ್ಯಾಸ್ ಗನ್ನಿಂದ ಸುಡಲಾಗಿತ್ತು. ಆಮೇಲೆ ಪತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಈಕೆ ನಾಟಕವಾಡಿದ್ದಳು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಫ್ಎಸ್ಎಲ್ ವರದಿ ಆಧಾರದ ಮೇಲೆ ಪತ್ನಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣ ಬಯಲಾಗಿದೆ. ಆರೋಪಿ ತೌಸೀಫ್ ದಾದಾಪೀರ್ನ ಸೋದರ ಸಂಬಂಧಿಯಾಗಿದ್ದು, ಆತನೊಂದಿಗೆ ಮೆಹರ್ ಅನೈತಿಕ ಸಂಬಂಧ ಇರಿಸಿಕೊಂಡಿದ್ದಳು.